ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಮಧ್ಯಭಾಗದಲ್ಲಿರುವ, ಕೆರೆ ಆಯನ ನಡೆಯುವ ಶ್ರೀ ದೇವರ ಕಟ್ಟೆಯನ್ನು ಶಿಲಾಮಯ ಕಟ್ಟೆಯಾಗಿ ರೂಪುಗೊಳಿಸುವ ಕಾಮಗಾರಿಗೆ ಸೋಮವಾರ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು ಸ್ಥಳಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿ, ಜಾತ್ರೋತ್ಸವ ಸಂದರ್ಭ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ ದೇವಸ್ಥಾನದ ಪುಷ್ಕರಣಿಯ ಮಧ್ಯಭಾಗದಲ್ಲಿರುವ , ದೇವರು ಕುಳಿತುಕೊಳ್ಳುವ, ಕೆರೆ ಆಯನ ಮಾಡುವ ಕಟ್ಟೆಯನ್ನು ಶಿಲಾಮಯ ಕಟ್ಟೆಯನ್ನಾಗಿ ನಿರ್ಮಾಣ ಮಾಡಿ ಅಲ್ಲಿರುವ ವರುಣನ ಮೂರ್ತಿಗೆ ರಕ್ಷಣ ನೀಡಿ, ಮುಂದಿನ 100-200 ವರ್ಷಗಳು ಶಾಶ್ವತವಾಗಿ ಕೆರೆ ಆಯನ ನಡೆಸುವ ನಿಟ್ಟಿನಲ್ಲಿ ಪುಷ್ಕರಣಿಯಲ್ಲಿರುವ ಕಟ್ಟೆಯನ್ನು ನಿರ್ಮಾಣ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯರಾದ ರಾಮಚಂದ್ರ ಕಾಮತ್, ರಾಮದಾಸ್ ಗೌಡ ಮತ್ತಿತರರು ಉಪಸ್ಥಿತರಿದ್ದರು.