ಪುತ್ತೂರು: ಜನರ ಹಣ ಲೂಟಿ ಮಾಡಲೆಂದೇ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಹುಟ್ಟಿದ್ದು, ಆಧಾರ್ – ಪಾನ್ ಜೋಡಣೆಯ ಹೆಸರಿನಲ್ಲಿ ಜನರಿಂದ ವಸೂಲಿ ಮಾಡಿದ ಹಣವನ್ನು ಸರ್ಕಾರ ಏನು ಮಾಡುತ್ತಿದೆ ಎಂದು ಬಹಿರಂಗ ಪಡಿಸಬೇಕಾಗಿದೆ. ಎಂದು ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ರೈ ನೆಕ್ಕಿಲು ಆಗ್ರಹಿಸಿದ್ದಾರೆ.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ರೀತಿ ಸಾರ್ವಜನಿಕ ಹಣವನ್ನು ಲೂಟಿ ಮಾಡುವ ಪ್ರಕ್ರಿಯೆಯನ್ನು ಖಂಡಿಸುತ್ತೇವೆ ಮತ್ತು ಈಗಾಗಲೇ ಪಡೆದ ಹಣವನ್ನು ತಕ್ಷಣ ಮರುಪಾವತಿ ಮಾಡಬೇಕೆಂದು ಅವರು ಆಗ್ರಹಿಸಿದರು.
ಬ್ಯಾಂಕ್ ವ್ಯವಹಾರ ನಡೆಸುವವರಿಗೆ ಅಲ್ಲಿ ಆಧಾರ್ ಪಾನ್ ಜೋಡಣೆ ಮಾಡುವ ಕಾರ್ಯ ನಡೆದಿದೆ. ಪಾನ್ ನಿತ್ಯ ಬಳಕೆ ಮಾಡದವರ ಪಾನ್ ಆಧಾರ್ ಜೋಡಣೆ ಪ್ರಕ್ರಿಯೆಯಾಗಿಲ್ಲ. ಜನರಿಗೆ ಸುಲಭ ರೀತಿಯಲ್ಲಿ ಜೋಡಣೆಗೆ ಅನುವು ಮಾಡಿಕೊಡಬೇಕಾದ ಸರ್ಕಾರ ಜೋಡಣೆಯಾದವರಿಗೆ ಒಂದು ಸಾವಿರ ದಂಡ ವಿಧಿಸುವ ಕಾರ್ಯಕ್ಕೆ ಮುಂದಾಗಿದೆ. ಮಾ.೩೧ರ ಬಳಿಕ ದಂಡದ ಮೊತ್ತ ಹತ್ತು ಸಾವಿರಕ್ಕೆ ಏರಿಕೆ ಮಾಡಲಿದೆ. ಇಲಾಖೆಯ ವತಿಯಿಂದ ಪಾನ್ ಆಧಾರ್ ಜೋಡಣೆಯ ಬಗ್ಗೆ ಸರ್ವಜನಿಕರಿಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಚಾ ಹುಡಿಯನ್ನು ಹಿಂಡಿದಂತೆ ಬಡ ಜನರನ್ನು ಹಿಂಡುವ ಕಾರ್ಯ ಸರ್ಕಾರದಿಂದ ನಡೆಯುತ್ತಿದೆ ಎಂದು ಆರೋಪಿಸಿದರು.
ಕೆ.ಪಿ.ಸಿ.ಸಿ. ವಕ್ತಾರ ಅಮಳ ರಾಮಚಂದ್ರ ಮಾತನಾಡಿ, ಆಧಾಯ ತೆರಿಗೆ ಇಲಾಖೆಯ ಗ್ರಾಹಕರಿಗೆ ಸ್ಪಷ್ಟ ಮಾಹಿತಿ ನೀಡುವ ಕೆಲಸವನ್ನು ಮಾಡಿಲ್ಲ. ಜನರ ದತ್ತಾಂಶವನ್ನು ಪಾನ್ ಹಾಗೂ ಆಧಾರ್ ಮೂಲಕ ಸಂಗ್ರಹಿಸಿಕೊಂಡ ಸರ್ಕಾರ ಜೋಡಣೆಯ ಬಗ್ಗೆ ಜನರಿಗೆ ಮೊಬೈಲ್ ಸಂದೇಶವನ್ನಾದರೂ ಕಳುಹಿಸುವ ಕಾರ್ಯ ಮಾಡಬೇಕಾಗಿತ್ತು. ಆಧಾರ್ ಪಾನ್ ಜೋಡಣೆಯ ಸ್ಪಷ್ಟವಾದ ಮಾಹಿತಿ ಇನ್ನೂ ಯಾರೊಬ್ಬರಿಗೂ ಲಭಿಸಿಲ್ಲ. ಜೋಡಣೆಯಾಗದೇ ಹೋದಲ್ಲಿ ಬ್ಯಾಂಕ್ ವ್ಯವಹಾರಕ್ಕೂ ಕುತ್ತು ತರುವ ಕಾರ್ಯ ನಡೆಯಲಿದೆ. ದಂಧೆ ನಿಲ್ಲದೇ ಹೋದಲ್ಲಿ ಮುಂದಿನ ದಿನದಲ್ಲಿ ಈ ಬಗ್ಗೆ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್. ಟಿ. ಘಟಕದ ಪುತ್ತೂರು ಬ್ಲಾಕ್ ಅಧ್ಯಕ್ಷ ಮಹಾಲಿಂಗ ನಾಯ್ಕ, ಪುತ್ತೂರು ಬ್ಲಾಕ್ ಕಾರ್ಯದರ್ಶಿ ಹಬೀಬ್ ಕಣ್ಣೂರು ಉಪಸ್ಥಿತರಿದ್ದರು.