ಪುತ್ತೂರು: ಮುರ ಗ್ರಾಮೀಣ ಒಕ್ಕಲಿಗ ಗೌಡ ಸಮುದಾಯ ಭವನ ಸೇವಾ ಸಂಘದ ವತಿಯಿಂದ ನಡೆಯುತ್ತಿರುವ ಮುರ ಒಕ್ಕಲಿಗ ಸಮುದಾಯ ಭವನದ ಮೇಲೆಂತಸ್ತಿನ ಕಟ್ಟಡದ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು.
ಆದಿ ಚುಂಚನಗಿರಿ ಸಂಸ್ಥಾನಮ್ ನ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.

ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಮುದಾಯ ಭವನಗಳ ಮೂಲಕ ನಮ್ಮ ಸಮಾಜದ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಆಗಿದೆ. ವಿಶೇಷ ಸ್ಥಾನಮಾನ, ಗೌರವ ಸಲ್ಲಿಸುವ ಮೂಲಕ ಇಂದು ಸರ್ಕಾರ ಕೂಡಾ ಒಕ್ಕಲಿಗರ ಪರವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದ ಅವರು , ಮೂರು ಗ್ರಾಮದ ಎಲ್ಲ ಸಮಾಜ ಬಾಂಧವರು ಸೇರಿಕೊಂಡು ಒಂದು ಭವನದ ಅಗತ್ಯವಿದೆ ಎಂಬುದನ್ನು ಅರಿತು ಭವನ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಲು ಅವಕಾಶ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

ಒಕ್ಕಲಿಗ ಗೌಡ ಸಂಘ ಪುತ್ತೂರು ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯುರು ಅಧ್ಯಕ್ಷತೆ ವಹಿಸಿದ್ದರು. ಕಲ್ಲೇಗ ಜಿನ್ನಪ್ಪ ಗೌಡ, ಯಶವಂತ್ ಮತಾವು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಒಕ್ಕಲಿಗ ಸೇವಾ ಸಂಘದ ,ಗೌರವಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಅಧ್ಯಕ್ಷ ಮನೋಹರ ಡಿ. ವಿ,, ಲೋಕೋಪಯೋಗಿ ಇಲಾಖೆ ಸುಬ್ರಹ್ಮಣ್ಯದ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು. ಶಮಿಕ ಗೋಮುಖ ಪ್ರಾರ್ಥಿಸಿದರು.