ಸುಳ್ಯದಲ್ಲಿ ಮತ್ಸ್ಯವಾಹಿನಿ ತ್ರಿಚಕ್ರ ವಾಹನ ಲೋಕಾರ್ಪಣೆ

ಮಂಗಳೂರು : ಸುಳ್ಯದ ಯುವಜನ ಸಂಯುಕ್ತ ಮಂಡಳಿ ಮೈದಾನದಲ್ಲಿ ಮಾರ್ಚ್ 26 ರಂದು ನಡೆದ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಸ್ವಾವಲಂಬಿ ಬದುಕಿಗಾಗಿ ಸ್ವಉದ್ಯೋಗ-ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಮತ್ಸ್ಯವಾಹಿನಿ ತ್ರಿಚಕ್ರ ವಾಹನಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವ ಎಸ್‌ ಅಂಗಾರ, ಮೀನುಗಾರಿಕೆ ಕ್ಷೇತ್ರ ಕಡಿಮೆ ಆದಾಯದಲ್ಲಿ ಹೆಚ್ಚು ಸಂಪಾದನೆ ಗಳಿಸಬಹುದಾದ ಕ್ಷೇತ್ರ. ಕೃತಕ ಹಾಗೂ ಒಳನಾಡು ಮೀನುಗಾರಿಕೆಗೆ ಆದ್ಯತೆ ನೀಡಲಾಗುವುದು. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಕರ್ನಾಟಕಕ್ಕೆ ಪ್ರಾಯೋಗಿಕವಾಗಿ ಮತ್ಸ್ಯವಾಹಿನಿ ವಾಹನ ಒದಗಿಸಲಾಗಿದೆ. 300 ವಾಹನಗಳು ರಾಜ್ಯಕ್ಕೆ ದೊರೆತಿದ್ದು, ಎರಡನೇ ಹಂತದಲ್ಲಿಎಷ್ಟು ಬೇಡಿಕೆ ಇದೆಯೋ ಅಷ್ಟು ವಾಹನ ನೀಡುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ ಎಂದರು.

ಮೀನು ಕೃಷಿಯಿಂದ ಉತ್ಪತ್ತಿಯಾಗುವ ಎಲ್ಲರೀತಿಯ ಮೀನುಗಳನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದಲೇ ಖರೀದಿಸಲು ಯೋಜನೆ ರೂಪಿಸಲು ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂದು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌.ಅಂಗಾರ ಹೇಳಿದರು.
ರಾಜ್ಯದಲ್ಲಿ60 ಕೋಟಿ ಮೀನು ಮರಿ ಬೇಡಿಕೆ ಇದೆ. ಆದರೆ 40 ಕೋಟಿ ಮೀನು ಮರಿ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ. ಬಾಗಲಕೋಟೆಯಲ್ಲಿ ಮೀನು ಮರಿ ಉತ್ಪತ್ತಿ ಘಟಕ ಆರಂಭಿಸಲಾಗುವುದು. ಕಡಬದ ಸವಣೂರು ಬಳಿಯೂ ಮೀನು ಮರಿ ಉತ್ಪತ್ತಿ ಘಟಕ ನಿರ್ಮಿಸಲಾಗುವುದು. ಆ ಮೂಲಕ ಮೀನು ಮರಿ ಉತ್ಪಾದನೆಗೆ ಪೂರಕ ಕ್ರಮ ಕೈಗೊಳ್ಳಲಾಗುವುದು ಎಂದರು.

ಉದ್ಯೋಗಕ್ಕೆ ಸಹಕಾರಿ



































 
 

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ ಮಾತನಾಡಿ, ಎಲ್ಲರಿಗೂ ಸರಕಾರಿ ಕೆಲಸ ಸಿಗಲು ಅಸಾಧ್ಯ. ಆದರೆ ಸ್ವ ಉದ್ಯೋಗ ಮಾಡಲು ಸಾಧ್ಯವಿದೆ. ಮೀನುಗಾರಿಕೆ ಕ್ಷೇತ್ರದಲ್ಲಿ ಬಹಳಷ್ಟು ಅವಕಾಶವಿದೆ. ಸಚಿವ ಅಂಗಾರ ಅವರು ಯಾವ ರೀತಿಯಲ್ಲಿ ಮೀನುಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಇಲಾಖೆಗೆ ಕಾಯಕಲ್ಪ ನೀಡುವ ಕೆಲಸ ಮಾಡಿದ್ದಾರೆ ಎಂದರು.

ಯೋಜನೆಯ ಉದ್ದೇಶ

ಪೈಲಟ್‌ ಯೋಜನೆಯ ಹಂತದಲ್ಲಿ ಪ್ರಾಯೋಗಿಕವಾಗಿ, ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಸ್ವಾವಲಂಬಿ ಬದುಕಿಗಾಗಿ ಸ್ವ ಉದ್ಯೋಗ ಧ್ಯೇಯದೊಂದಿಗೆ ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಉದ್ದೇಶದಿಂದ 300 ಎಲೆಕ್ಟ್ರಿಕ್‌ ವಾಹನಗಳಿಗೆ ಅಗತ್ಯ ಮೀನು ಶೇಖರಣೆ, ಪ್ರದರ್ಶನ ಹಾಗೂ ಶೀತಲೀಕರಣ ಸಾಧನಗಳನ್ನು ಅಳವಡಿಸಲಾಗಿದೆ. ಮತ್ಸ್ಯವಾಹಿನಿಗಳು 599 ಕೆಜಿಯಷ್ಟು ಪೇಲೋಡ್‌ ಸಾಮರ್ಥ್ಯ ಹೊಂದಿದ್ದು, ಕಾರ್ಯಾಚರಣೆ ಮತ್ತು ನಿರ್ವಹಣೆಗೆ 3 ಜನರ ಅಗತ್ಯವಿದೆ. ಈ ವಾಹನ ಶೀಥಲೀಕರಿಸಿದ ವಿಭಾಗಗಳೊಂದಿಗೆ ಅಳವಡಿಸಲ್ಪಟ್ಟಿದೆ. ಈ ವಾಹನ ಬ್ಯಾಟರಿಯೊಂದಿಗೆ ಚಲಿಸುತ್ತಿದ್ದು ಪರಿಸರ ಸ್ನೇಹಿಯಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top