ಮಜಲುಮಾರು ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ, ಧಾರ್ಮಿಕ ಸಭೆ

ಪುತ್ತೂರು: ದೇವಸ್ಥಾನ, ದೈವಸ್ಥಾನಗಳಲ್ಲಿನ ಕಲ್ಮಶಗಳು ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದಂತಹ ಪುಣ್ಯ ಕಾರ್ಯದಿಂದ ದೂರವಾಗಿ ಭಕ್ತಿ ನೆಲೆಗೊಳ್ಳುವವ ಕಾರ್ಯವಾಗುತ್ತಿದೆ ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜಿ ನುಡಿದರು.

ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ ಹಾಗೂ ಜಾತ್ರೋತ್ಸವದ ಅಂಗವಾಗಿ ಭಾನುವಾರ ನಡೆದ  ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ನಾವು ಗಳಿಸುವ ಸಂಪತ್ತು ಧರ್ಮಾಧಾರಿತವಾಗಿರಬೇಕು. ಅಧರ್ಮದಿಂದ ಸಂಪಾಧಿಸುವ ಸಂಪತ್ತು ಶಾಶ್ವತವಲ್ಲ. ದೈಹಿಕವಾಗಿ ದೊರೆಯುವ ಸುಖವೇ ಮುಖ್ಯವಲ್ಲ. ಇದರ ಆಚೆಗಿರುವ ಪರಮೊಚ್ಚವಾದ ಸುಖವನ್ನು ಪಡೆಯಬೇಕಾದರೆ ಪುಣ್ಯದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.































 
 

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ದೇವಸ್ಥಾನಗಳ ಅಭಿವೃದ್ಧಿ, ನಿತ್ಯ ಕಾರ್ಯಕ್ರಮಗಳಿಗೆ ಸರಕಾರ  ಅನುದಾನ ನೀಡುತ್ತಿದೆ.  ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳಿರುವ ಜಾಗಗಳನ್ನು ಉಳಿಸಿಕೊಳ್ಳುವ ಕಾರ್ಯ ಸರಕಾರದ ಮೂಲಕ ನಡೆಯುತ್ತಿದೆ ಎಂದರು.

ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ ಧಾರ್ಮಿಕ ಉಪನ್ಯಾಸ ನೀಡಿ, ನಮ್ಮ ಶ್ರದ್ಧಾ ಕೇಂದ್ರಗಳನ್ನು ಸರಕಾರ ವ್ಯವಹಾರಿಕವಾಗಿ ಬಳಸುವುದು ಸರಿಯಲ್ಲ. ದೇವಸ್ಥಾನಗಳು ಪಾಲು ಬಿದ್ದಾಗ ಸರಕಾರ ಕೇಳುವುದೇ ಇಲ್ಲ. ಅನುದಾನಕ್ಕೆ ಅರ್ಜಿ ನೀಡಿದರೂ ಯಾವ ಸ್ಪಂದನೆಯೇ ಇಲ್ಲ. ಸರಕಾರದ ಈ ಧೋರಣೆಯ ವಿರುದ್ಧ ಆಂದೋಲನ ನಡೆಯಬೇಕು ಎಂದು ಹೇಳಿದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ,  ಮೊಬೈಲ್ ಕೇಂದ್ರಿಕೃತವಾಗಿರುವ ನಮ್ಮ ಇಂದಿನ ಮನಸ್ಸುಗಳನ್ನು ಧರ್ಮದ ಕೇಂದ್ರವಾಗಿ ಬದಲಾಯಿಸಬೇಕು. ದೇವಸ್ಥಾನದ ಬ್ರಹ್ಮಕಲಶೋತ್ಸವ ಮೂಲಕ ಜನರ ಮನಸ್ಸು ಬದಲಾಯಿಸುವ ಕಾರ್ಯವಾಗುತ್ತಿದೆ. ಎಂದರು.

ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮೀಶ ತಂತ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಊರ, ಪರವೂರ ಭಕ್ತಾದಿಗಳ ಸಹಕಾರದಿಂದ ಕ್ಷೇತ್ರದಲ್ಲಿ ಶೀಘ್ರವಾಗಿ ಅಭಿವೃದ್ಧಿ ಕಾರ್ಯಗಳು ನೆರವೇರಿದೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ನವೀನ್ ರೈ ಶಿಬರ ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನ ಟ್ರಸ್ಟ್‌ನ ಆಡಳಿತದಲ್ಲಿ ನಡೆಯುತ್ತಿದ್ದು, ಭಕ್ತರ ಸಹಕಾರದಿಂದ  ಒಂದು ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ನಡೆದಿದೆ. ದೇವಸ್ಥಾನಕ್ಕೆ ಹಲವು ಮಂದಿ ಜಾಗ ದಾನವಾಗಿ ನೀಡಿ ಸಹಕರಿಸಿದ್ದಾರೆ ಎಂದರು.

ವೇದಿಕೆಯಲ್ಲಿ ಬೆದ್ರಾಳ ಲಕ್ಷ್ಮೀ ಸ್ವಾ ಮಿಲ್ ನ ಮ್ಹಾಲಕ ಶ್ರೀನಿವಾಸ ಪೈ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಉದಯ ತಂತ್ರಿ ಕೆಮ್ಮಿಂಜೆ ಉಪಸ್ಥಿತರಿದ್ದರು. ಸನ್ನಿಧಿ ಹೆಬ್ಬಾರ್ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಸ್ವಾಗತಿಸಿದರು. ಶ್ರೀಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಸದಸ್ಯ ಸುಜಯ್ ತಂತ್ರಿ ವಂದಿಸಿದರು. ಶಿಕ್ಷಕರಾದ ರಮೇಶ್ ಉಳಯ ಹಾಗೂ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ಯಕ್ಷಶ್ರೀ ಬಳಗ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಲೆ, ಮಧ್ಯಾಹ್ನ ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಾಯಿಲಕ್ಷ್ಮೀ ಬಳಗದವರಿಂದ ಶಾಸ್ತ್ರೀಯ ಸಂಗೀತ, ಸಂಜೆ ಆರ್ಟ್ ಆಫ್ ಲಿವಿಂಗ್ ಪುತ್ತೂರು, ಶ್ರೀ ದುರ್ಗಾ ಭಜನಾ ಮಂಡಳಿ ಪುರುಷರಕಟ್ಟೆಯವರಿಂದ ಭಜನೆ, ರಾತ್ರಿ ಶ್ರೀ ಶಾರದಾ ಕಲಾ ಕೇಂದ್ರ ಪುತ್ತೂರು ಇವರಿಂದ ಭರತನಾಟ್ಯ ಮತ್ತು ಶ್ರೀ ನಿವಾಸ ಕಲ್ಯಾಣ ನೃತ್ಯ ರೂಪಕ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top