ಪುತ್ತೂರು: ಪಿ.ಡಿ. ಹಾಗೂ ಗ್ರಂಥಪಾಲಕ ಹುದ್ದೆ ರದ್ದುಗೊಳಿಸಿರುವ ಕ್ರಮದ ವಿರುದ್ಧ ಜಿಡೆಕಲ್ಲು ಕಾಲೇಜು ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯನ್ನು ಶಾಸಕ ಸಂಜೀವ ಮಠಂದೂರು ಭರವಸೆ ಬಳಿಕ ವಾಪಾಸ್ ಪಡೆಯಲಾಗಿದೆ.
ವಿದ್ಯಾರ್ಥಿಗಳಿಂದ ಮನವಿ ಪಡೆದುಕೊಂಡು ಮಾತನಾಡಿದ ಶಾಸಕ ಸಂಜೀವ ಮಠಂದೂರು, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕ ಹುದ್ದೆಯನ್ನು ನೀಡಲಾಗುತ್ತದೆ. ಜಿಡೆಕಲ್ಲು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದು, ಆದ್ದರಿಂದ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಗ್ರಂಥಪಾಲಕ ಹುದ್ದೆಯನ್ನು ಸರಕಾರ ತೆರವು ಮಾಡಿದೆ. ಇದರ ಬಗ್ಗೆ ಈಗಾಗಲೇ ಉನ್ನತ ಶಿಕ್ಷಣ ಸಚಿವರಲ್ಲಿ ಹಾಗೂ ಆಯುಕ್ತರಲ್ಲಿ ಮಾತುಕತೆ ನಡೆಸಿದ್ದೇನೆ. ಪಾಲಿಸಿ ಮ್ಯಾಟರ್ ಆಗಿರುವುದರಿಂದ, ಸ್ಥಳೀಯವಾಗಿಯೇ ಏನಾದರೂ ಪರಿಹಾರ ಕಂಡುಕೊಳ್ಳಬೇಕು ಎಂದ ಶಾಸಕರು, ಪ್ರಾಂಶುಪಾಲರಿಗೆ ಈ ಬಗ್ಗೆ ಸೂಚನೆ ನೀಡಿದರು.
ಕಾಲೇಜಿನ ಅಗತ್ಯ ಮೂಲಸೌಕರ್ಯಗಳಿಗೆ ಹಾಗೂ ಉಪನ್ಯಾಸಕರ ಹುದ್ದೆಗಳಿಗೆ ಮೊದಲ ಆದ್ಯತೆ ನೀಡಿ, ಕೆಲಸ ಮಾಡಲಾಗುತ್ತಿದೆ. ತಾಲೂಕಿನ 24 ಕಾಲೇಜುಗಳ ಅಭಿವೃದ್ಧಿ ಸಮಿತಿಗೆ ತಾನೇ ಅಧ್ಯಕ್ಷನಾಗಿದ್ದು, ಎಲ್ಲಾ ಕಾಲೇಜುಗಳನ್ನು ಸಮಾನ ಪ್ರಾಶಸ್ತ್ಯದಿಂದ ನೋಡಿಕೊಳ್ಳುವ ಜವಾಬ್ದಾರಿಯೂ ತನ್ನದೇ. ಉಪ್ಪಿನಂಗಡಿ, ಪುತ್ತೂರು, ವಿಟ್ಲ, ಬೆಟ್ಟಂಪಾಡಿ, ಮಹಿಳಾ ಕಾಲೇಜು ಹೀಗೆ ಎಲ್ಲಾ ಕಾಲೇಜುಗಳಿಗೂ ಅಗತ್ಯ ಮೂಲಸೌಕರ್ಯವನ್ನು ನೀಡುವ ಕೆಲಸ ನಡೆಸುತ್ತಿದ್ದೇನೆ. ಮೊದಲು ಕಾಲೇಜುಗಳ ವಿದ್ಯಾರ್ಥಿಗಳ ಸಂಖ್ಯೆಯ ಮಿತಿಯನ್ನು 3 ಸಾವಿರ ಇದ್ದು, ಇದೀಗ 2 ಸಾವಿರಕ್ಕೆ ಇಳಿಸಲಾಗಿದೆ. ಆದರೆ ಜಿಡೆಕಲ್ಲು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇರುವುದೇ 120. ಹಾಗಿರುವಾಗ ದೈಹಿಕ ಶಿಕ್ಷಣ ನಿರ್ದೇಶಕರನ್ನು ನೀಡಲು ಸರಕಾರದ ಹಂತದಲ್ಲಿ ಒಪ್ಪುವುದೇ ಇಲ್ಲ. ಆದ್ದರಿಂದ ಡೆಪ್ಯುಟೇಷನ್ ಬಗ್ಗೆ ಆಲೋಚಿಸಲಾಗುವುದು ಎಂದರು.
ಪ್ರತಿಭಟನೆ ವಾಪಾಸ್:
ಪ್ರತಿಭಟನೆ ಒಂದೇ ಪರಿಹಾರ ಅಲ್ಲ. ವಿದ್ಯಾರ್ಥಿಗಳಿಗೆ ಒಂದು ದಿನದ ತರಗತಿಗಳು ಹೋಯಿತು. ಇದಕ್ಕೆ ಯಾರು ಜವಾಬ್ದಾರರು. ಮನವಿ ನೀಡಿದ್ದೇವೆ ಎಂದರೆ ಅಲ್ಲಿಗೆ ಕೆಲಸ ಆಗುವುದಿಲ್ಲ. ಮನವಿ ನೀಡಿದ ಬಳಿಕ ಅದರ ಹಿಂದೆ ಸಾಕಷ್ಟು ಕೆಲಸಗಳು ಇರುತ್ತವೆ ಎಂದು ಶಾಸಕರು ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಬಳಿಕ ಪ್ರತಿಭಟನೆ ವಾಪಾಸ್ ಪಡೆದುಕೊಂಡ ವಿದ್ಯಾರ್ಥಿಗಳು, ತರಗತಿಗಳಿಗೆ ಹಾಜರಾದರು.
ಶಾಸಕರ ಜೊತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಆರ್ಯಾಪು ಶಕ್ತಿ ಕೇಂದ್ರದ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ, ಕಾಲೇಜು ಪ್ರಾಂಶುಪಾಲ ಅಪ್ಪು, ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.