ಉಪನ್ಯಾಸಕ ಹುದ್ದೆ ಶಿಫ್ಟ್: ಜಿಡೆಕಲ್ಲು ವಿದ್ಯಾರ್ಥಿಗಳಿಂದ ಕಾಲೇಜು ಬಹಿಷ್ಕರಿಸಿ ಪ್ರತಿಭಟನೆ

ಪುತ್ತೂರು: ಎರಡು ಉಪನ್ಯಾಸಕ ಹುದ್ದೆಗಳನ್ನು ಶಿಫ್ಟ್ ಮಾಡಿರುವ ಸರಕಾರದ ಕ್ರಮವನ್ನು ಖಂಡಿಸಿ ರಕ್ಷಕ-ಶಿಕ್ಷಕ ಸಂಘದ ನೇತೃತ್ವದಲ್ಲಿ ಜಿಡೆಕಲ್ಲು ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ಸೋಮವಾರ ಕಾಲೇಜು ಭಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿ ನಾಯಕ ವಿನೀತ್ ಮಾತನಾಡಿ, ಕಾಲೇಜಿನಲ್ಲಿ 120 ವಿದ್ಯಾರ್ಥಿಗಳಿದ್ದಾರೆ. ಇನ್ನಷ್ಟು ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಆಗಬೇಕು ಎಂದು ಹೇಳುತ್ತಾರೆ. ಆದರೆ ಇರುವ ಉಪನ್ಯಾಸಕ ಹುದ್ದೆಯನ್ನೇ ಪಿರಿಯಾಪಟ್ಟಣಕ್ಕೆ ಶಿಫ್ಟ್ ಮಾಡುತ್ತಾರೆ. ಹೀಗಾದರೆ ಕಾಲೇಜು ಅಭಿವೃದ್ಧಿ ಆಗುವುದು ಹೇಗೆ? ಕಾಲೇಜಿಗೆ ಆಗಮಿಸಲು ಬಸ್ ವ್ಯವಸ್ಥೆಯೂ ಸರಿಯಾಗಿ ಆಗುತ್ತಿಲ್ಲ. ಬೆಳಿಗ್ಗೆ –ಸಂಜೆ ಬಸ್ ಇದೆ. ಆದರೆ ಕೆಲ ಸಮಯಗಳಲ್ಲಿ ಬಸ್ ಬರುವುದೇ ಇಲ್ಲ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವಿ ನೀಡಿದ್ದೇವೆ ಎಂದರು.

ಕಾಲೇಜಿಗೆ ಹೋಗುವುದಿಲ್ಲ:































 
 

ತರಗತಿ ಪ್ರತಿನಿಧಿ ಎಡ್ವರ್ಡ್ ಮಾತನಾಡಿ, ಮಾರ್ಚ್ 23ಕ್ಕೆ 2, 4 ಹಾಗೂ 6ನೇ ಸೆಮಿಸ್ಟರಿನ ತರಗತಿಗಳು ಆರಂಭಗೊಂಡಿವೆ. ಇದರ ಹಿಂದಿನ ಸೆಮಿಸ್ಟರಿನಲ್ಲಿ ಸೋಶಿಯಾಲಜಿ ಉಪನ್ಯಾಸಕರೇ ಇರಲಿಲ್ಲ. ನಾವೇ ಪಠ್ಯವನ್ನು ಓದಿಕೊಂಡು, ಪರೀಕ್ಷೆ ಬರೆದಿದ್ದೇವೆ. ಹಿಂದೆ ಸೋಶಿಯಾಲಜಿ ಪಾಠ ಮಾಡುತ್ತಿದ್ದ ಉಪನ್ಯಾಸಕರು ಬೇರೆಡೆಗೆ ಭಡ್ತಿಯೊಂದಿಗೆ ವರ್ಗಾವಣೆಗೊಂಡರು. ಬಳಿಕ ಆ ಹುದ್ದೆ ಖಾಲಿಯಾಗಿಯೇ ಇದೆ. ಇನ್ನು, ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಗ್ರಂಥಪಾಲಕ ಹುದ್ದೆಯನ್ನು ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ. ಜಿಡೆಕಲ್ಲು ಶಾಲೆಯಲ್ಲಿ ಶೇ. 65ರಷ್ಟು ವಿದ್ಯಾರ್ಥಿಗಳು ಕ್ರೀಡಾಪಟುಗಳೇ ಆಗಿದ್ದಾರೆ. ಹೀಗಿರುವಾಗ ದೈಹಿಕ ಶಿಕ್ಷಣ ನಿರ್ದೇಶಕ ಹುದ್ದೆಯನ್ನೇ ವರ್ಗಾವಣೆ ಮಾಡಿದರೆ, ವಿದ್ಯಾರ್ಥಿಗಳು ಏನು ಮಾಡಬೇಕು. ಇದೆಲ್ಲದರ ಬಗ್ಗೆ ಶಾಸಕರ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಮಸ್ಯೆ ಪರಿಹಾರ ಆಗುವವರೆಗೆ ಕಾಲೇಜು ತರಗತಿಗಳಿಗೆ ಹಾಜರಾಗುವುದಿಲ್ಲ ಎಂದು ಹೇಳಿದರು.

ಮನವಿ ನೀಡಿ, ಗಮನ ಸೆಳೆಯುವ ಪ್ರಯತ್ನ:

ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಬಾಲಚಂದ್ರ ಮಾತನಾಡಿ, ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಗ್ರಂಥಪಾಲಕ ಹುದ್ದೆಯನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಸೋಶಿಯಾಲಜಿ ಉಪನ್ಯಾಸಕ ಹುದ್ದೆ ಖಾಲಿಯಾಗಿಯೇ ಇದೆ. ಈ ಸಮಸ್ಯೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಶಾಸಕರ ಗಮನಕ್ಕೆ ತಂದಿದ್ದೇವೆ. ಸದ್ಯ ಚುನಾವಣೆ ಘೋಷಣೆಯಾಗುವ ಸಂದರ್ಭ. ಆದ್ದರಿಂದ ವಿದ್ಯಾರ್ಥಿಗಳ ಪ್ರತಿಭಟನೆಗೆ ಯಾವ ರೀತಿಯ ಪ್ರತಿಫಲ ಸಿಗುತ್ತದೆ ಎಂದು ತಿಳಿದಿಲ್ಲ. ಆದ್ದರಿಂದ ಸಹಾಯಕ ಆಯುಕ್ತರಿಗೆ ಮನವಿ ನೀಡಿ, ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದರು.

8 ಹುದ್ದೆಗಳಲ್ಲಿ 4 ಹುದ್ದೆಗಳು ಖಾಲಿ:

ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಡೆಕಲ್ಲು ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಅಪ್ಪು ಅವರಲ್ಲಿ ಪ್ರತಿಕ್ರಿಯೆ ಕೇಳಿದಾಗ, ಬಿಎ ಹಾಗೂ ಬಿ.ಕಾಂ. ತರಗತಿಗಳು ನಡೆಯುತ್ತಿವೆ. ಒಟ್ಟು 6 ತರಗತಿಗಳಿಗೆ ಮಂಜೂರಾದ ಹುದ್ದೆಗಳು 8. ಇದರಲ್ಲಿ ಪ್ರಾಂಶುಪಾಲ ಸೇರಿ 4 ಹುದ್ದೆಗಳು ಭರ್ತಿಯಾಗಿವೆ. ವಾಣಿಜ್ಯಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ಸೋಶಿಯಾಲಜಿ ಹುದ್ದೆಗಳು ಖಾಲಿಯಾಗಿದ್ದು, ಅದಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಿಸಲಾಗಿದೆ. ಅತಿಥಿ ಉಪನ್ಯಾಸಕರ ಒಟ್ಟು 8 ಹುದ್ದೆಗಳ ಪೈಕಿ 4 ಹುದ್ದೆಗಳು ಖಾಲಿಯಾಗಿವೆ. ಇದೀಗ ಗ್ರಂಥಪಾಲಕ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಹುದ್ದೆ ತೆರವಾಗುತ್ತಿದ್ದು, ಅದಕ್ಕೂ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕಿದೆ. 3ನೇ ಹಂತದಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಹಿಂದಿನ ವರ್ಷ ಪ್ರಾಂಶುಪಾಲರೇ ಮುತುವರ್ಜಿ ವಹಿಸಿ ಹಣದ ವ್ಯವಸ್ಥೆ ಮಾಡಿ ಸೋಶಿಯಾಲಜಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿದ್ದರು ಎಂದು ಮಾಹಿತಿ ನೀಡಿದರು.

ಬಸ್ ಸಮಸ್ಯೆ ಬಗ್ಗೆ ಪ್ರಶ್ನಿಸಿದಾಗ, ಬೆಳಿಗ್ಗೆ ಹಾಗೂ ಸಂಜೆ ಬಸ್ ಸಂಚಾರ ಇದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂದಾಗ, ಬಸ್ ಬರುವುದೇ ಇಲ್ಲ. ಆದ್ದರಿಂದ ಕೆ.ಎಸ್.ಆರ್.ಟಿ.ಸಿ.ಗೆ ಮನವಿ ನೀಡಿದ್ದೇವೆ. ಇದೀಗ ಬೆಳಿಗ್ಗೆ ಹಾಗೂ ಸಂಜೆ ಬಸ್ ಬರುತ್ತದೆ. ಬಸ್ ಇಲ್ಲ ಎಂದರೆ ವಿದ್ಯಾರ್ಥಿಗಳು ರಿಕ್ಷಾದಲ್ಲೇ ಹೋಗಬೇಕು ಎಂದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಭಾರತಿ, ರೆಡ್‍ ಕ್ರಾಸ್ ಅಧ್ಯಕ್ಷ ಹರ್ಷಿತ್, ಎನ್.ಎಸ್.ಎಸ್. ನಾಯಕಿ ನಿತ್ಯಾಶ್ರೀ, ಎನ್.ಎಸ್.ಎಸ್. ನಾಯಕ ಚರಣ್ ರಾಜ್, ತರಗತಿ ಪ್ರತಿನಿಧಿಗಳಾದ ಸ್ವಸ್ತಿ, ವಿವೇಕ್, ಶ್ರಾವ್ಯ ಮೊದಲಾದವರು ಭಾಗಿಯಾದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top