ಡಿ.ಕೆ.ಬ್ರದರ್ಸ್ ಹೇಳಿಕೆಗೆ ತಿರುಗೇಟು
ಬೆಂಗಳೂರು : ಸೋಲುವ ಭೀತಿಯಿಂದಾಗಿ ಸಿ.ಟಿ.ರವಿ ಅವರಿಗೆ ಮತಿಭ್ರಮಣೆಯಾಗಿದೆ. ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದು, ಕೂಡಲೇ ಅವರಿಗೆ ನಿಮ್ಹಾನ್ಸ್ ಅಥವಾ ಬೇರೆ ಯಾವುದಾದರೂ ಮಾನಸಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶಾಲಾ ಮಕ್ಕಳನ್ನು ಗುರಿಯಾಗಿಸಿಕೊಂಡು ಕುಕ್ಕರ್ನಲ್ಲಿ ಬಾಂಬ್ ಇಡುವ ಕೆಲಸವನ್ನು ಡಿ.ಕೆ.ಬ್ರದರ್ಸ್ ಮಾಡಿದ್ದರು ಎಂಬ ಸಿ.ಟಿ.ರವಿ ಅವರ ವಿವಾದಾತ್ಮಕ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ರವಿ ಹೇಳಿಕೆ ಬಗ್ಗೆ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆಯೂ ಪರಿಶೀಲಿಸುವುದಾಗಿ ತಿಳಿಸಿದರು. ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಹಾಗೂ ಬಿಜೆಪಿ ನಾಯಕರು ಕೂಡಲೇ ರವಿ ಅವರನ್ನು ಆಸ್ಪತ್ರೆಗೆ ಸೇರಿಸಲಿ ಎಂದು ಸಲಹೆ ನೀಡುತ್ತೇನೆ. ಈ ಹಿಂದೆ ಬಿಜೆಪಿಯ ಮತ್ತೊಬ್ಬ ಮೆಂಟಲ್ ಗಿರಾಕಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೆ. ಅದರ ವಿಚಾರಣೆ ಇನ್ನೂ ನಡೆಯುತ್ತಿದೆ. ಆದರೆ ಬೇರೆ ಪ್ರಕರಣಗಳಲ್ಲಿ ಆತುರವಾಗಿ ಶಿಕ್ಷೆ ಪ್ರಕಟವಾಗುತ್ತದೆ ಎಂದರು.
ಡಿ.ಕೆ. ಶಿವಕುಮಾರ್ ದೇ ಆರ್ ಆಲ್ ಮೈ ಬ್ರದರ್ಸ್ ಅಂತ ಹೇಳಿದ್ದರು. ಡಿಜೆ, ಕೆಜೆ ಹಳ್ಳಿಯಲ್ಲಿ ಬೆಂಕಿ ಹಾಕಿದವರಿಗೆ ಬೆಂಬಲ ನೀಡಿದ್ದು ಯಾರು, ತನ್ನದೇ ಪಕ್ಷದ ದಲಿತ ಶಾಸಕನಿಗೆ ರಕ್ಷಣೆ ನೀಡದೆ ರಾಜಕಾರಣ ಮಾಡಿದ್ಯಾರು ಎಂದು ಸಿ.ಟಿ. ರವಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.