ಪುತ್ತೂರು : ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಇಂಡಸ್ಟ್ರೀಯಲ್ ಏರಿಯಾಕ್ಕೆ 100 ಎಕ್ರೆ ಜಾಗ ಮಂಜೂರು ಮಾಡಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ಹಮ್ಮಿಕೊಂಡ ಬೈಕ್ ಜಾಥಾದ ಅಂಗವಾಗಿ ಕಲ್ಲೇಗ ಸಭಾ ವೇದಿಕೆಯಲ್ಲಿ ನಡೆದ ಜಾಥಾದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕ್ರೀಡೆಗೆ ಪೂರಕವಾಗಿ ಪುತ್ತೂರಿನ ತೆಂಕಿದಲ್ಲಿ ಈಗಾಲೇ ಜಾಗ ಖರೀದಿ ಮಾಡಲಾಗಿದೆ ಎಂದ ಅವರು, ಪುತ್ತೂರಿನಲ್ಲಿ ಮತ್ತೊಮ್ಮೆ ಕಮಲ ಅರಳಿಸುವ ಸಂದೇಶವನ್ನು ಬೈಕ್ ಜಾಥಾ ಮೂಲಕ ಆಯೋಜಿಸಿದ ಯುವ ಮೋರ್ಚಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ಡಾ.ಎಂ.ಕೆ.ಪ್ರಸಾದ್ ಮಾತನಾಡಿ, ಮುಂದಿನ ಅವಧಿಯಲ್ಲಿ ಶಾಸಕರು ಮತ್ತಷ್ಟು ಅನುದಾನ ತರುವ ಪ್ರಯತ್ನ ಮಾಡಬೇಕು. ಜತೆಗೆ ಮುಂಬರುವ ಚುನಾವಣೆಯಲ್ಲಿ ಡಬಲ್ ಇಂಜಿನ್ ಬದಲು ತ್ರಿಬಲ್ ಇಂಜಿನ್ ಸರಕಾರ ಮಾಡಬೇಕು ಎಂದು ಹೇಳಿದರು.
ಬಿಜೆಪಿ ಯುವಮೋರ್ಚಾ ಅಧ್ಯಕ್ಷ ನವೀನ್ ಪಡ್ನೂರು ಮಾತನಾಡಿ, ಮುಂಬರುವ ಚುನಾವಣೆ ಎದುರಿಸಲು ಯುವಕರ ತಂಡ ಸಜ್ಜಾಗಿದೆ ಎಂದರು.
ಬೈಕ್ ಜಾಥಾ ಕುಂಬ್ರದಿಂದ ಹೊರಟು ಬೈಪಾಸ್ ರಸ್ತೆಯಾಗಿ ಕಲ್ಲೇಗದಲ್ಲಿ ಸಮಾಪನಗೊಂಡಿತು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಜಿಲ್ಲಾ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಮತ್ತಿತರರು ಉಪಸ್ಥಿತರಿದ್ದರು.