ಗಿರಗಿರ ತಿರುಗಿದ ಕಾರುಗಳು; ಮನೆ, ಕಟ್ಟಡ ನೆಲಸಮ
ವಾಷಿಂಗ್ಟನ್ : ಅಮೆರಿಕದ ಮಿಸ್ಸಿಸ್ಸಿಪ್ಪಿಯಲ್ಲಿ ಶುಕ್ರವಾರ ರಾತ್ರಿ ಬೀಸಿದ ಅತ್ಯಂತ ಪ್ರಬಲ ಸುಂಟರಗಾಳಿಗೆ ಕನಿಷ್ಠ 26 ಜನರು ಬಲಿಯಾಗಿದ್ದಾರೆ. ಕೆಲವೆಡೆ ಗಾಳಿ ಕಾರುಗಳನ್ನೆ ಗಿರಗಿರ ತಿರುಗಿಸಿ ಒಗೆದಿದೆ. ಗಾಳಿಯ ರುದ್ರನರ್ತನಕ್ಕೆ ಜನರು ಕಂಗಲಾಗಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಜೀಸಸ್ ನಮ್ಮನ್ನು ರಕ್ಷಿಸು ಎಂಬ ಕರೆಗಳು ಸಹಾಯವಾಣಿಗೆ ಬರುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಂಟರಗಾಳಿಗೆ ಮನೆ, ಕಟ್ಟಡಗಳು ಉರುಳಿವೆ. ನೂರಾರು ಜನರು ಗಾಯಗೊಂಡಿರುವ ಶಂಕೆಯಿದೆ. ಅಲಬಾಮಾದಲ್ಲಿಯೂ ಒಬ್ಬರು ಮೃತಪಟ್ಟ ಕುರಿತು ವರದಿಯಾಗಿದೆ.
ಪ್ರಬಲ ಸುಂಟರಗಾಳಿಯು ಮಿಸ್ಸಿಸ್ಸಿಪ್ಪಿ ಡೆಲ್ಟಾ ಪಟ್ಟಣದ ರೋಲಿಂಗ್ ಫೋರ್ಕ್ ಅನ್ನು ಧ್ವಂಸಗೊಳಿಸಿದೆ. ಗಿರಗಿರ ತಿರುಗುತ್ತ ಅಪ್ಪಳಿಸಿದ ಸುಂಟರಗಾಳಿಯು ಮನೆಗಳನ್ನು ಕಲ್ಲುಮಣ್ಣುಗಳ ರಾಶಿಯಾಗಿ ಪರಿವರ್ತಿಸಿದೆ. ಪಾರ್ಕಿಂಗ್‌ನಲ್ಲಿದ್ದ ಕಾರುಗಳು ಗಾಳಿಯಲ್ಲಿ ಮೇಲೆದ್ದು ನೆಲಕ್ಕೆ ಅಪ್ಪಳಿಸಿರುವುದು ಸುಂಟರಗಾಳಿಯ ವೇಗಕ್ಕೆ ಸಾಕ್ಷಿಯಾಗಿದೆ. ಪಟ್ಟಣದ ನೀರಿನ ಗೋಪುರವು ಗಾಳಿಯ ನರ್ತನಕ್ಕೆ ನೆಲಕ್ಕೆ ಉರುಳಿದೆ.
ಇಲ್ಲಿ ಏನೂ ಉಳಿದಿಲ್ಲ, ಎಲ್ಲಾ ಸರ್ವನಾಶವಾಗಿದೆ ಎಂದು ಜನರು ರೋದಿಸುತ್ತಿದ್ದಾರೆ. ಸಾವಿನ ಸಂಖ್ಯೆ 25 ಕ್ಕೆ ಏರಿದೆ ಮತ್ತು ಡಜನ್‌ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಮಿಸ್ಸಿಸ್ಸಿಪ್ಪಿಯ ತುರ್ತು ನಿರ್ವಹಣಾ ಏಜೆನ್ಸಿ ಶನಿವಾರ ಮಧ್ಯಾಹ್ನ ಟ್ವೀಟ್ ಮಾಡಿದೆ.
ಕೆಲವು ಕ್ಷಣದ ಹಿಂದೆ ಸುಂದರ ಪರಿಸರವಾಗಿದ್ದ ತಮ್ಮ ನಗರ ಸರ್ವನಾಶವಾಗಿರುವುದನ್ನು ಕಂಡು ಜನರು ದಿಗಿಲುಗೊಂಡಿದ್ದಾರೆ. ಅವಶೇಷಗಳಡಿಯಲ್ಲಿ ಬದುಕುಳಿದವರನ್ನು ಜನರೀಗ ಹುಡುಕುತ್ತಿದ್ದಾರೆ.
ಹತ್ತಿ, ಜೋಳ ಮತ್ತು ಸೋಯಾಬೀನ್ ಹೊಲಗಳು ಮತ್ತು ಬೆಕ್ಕುಮೀನು ಸಾಕಣೆ ಕೇಂದ್ರಗಳು ಸಂಪೂರ್ಣ ಹಾನಿಗೊಂಡಿವೆ. ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಜನರಿಗೆ ಸಹಾಯ ನೀಡುವ ಭರವಸೆ ನೀಡಿದ್ದಾರೆ. ಈ ಘಟನೆ ಹೃದಯವಿದ್ರಾವಕ ಎಂದು ಬೈಡೆನ್ ಹೇಳಿದ್ದಾರೆ.