ಮಗನಿಂದ ಕ್ಷೇತ್ರ ಕಸಿದುಕೊಂಡ ಅಪವಾದದಿಂದ ಪಾರಾಗಲು ತಂತ್ರ
ಬೆಂಗಳೂರು : ಈಗಾಗಲೇ ಪುತ್ರ ಡಾ.ಯತೀಂದ್ರ ಪ್ರತಿನಿಧಿಸುತ್ತಿರುವ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಪಡೆದುಕೊಂಡಿರುವ ಸಿದ್ದರಾಮಯ್ಯ ಇದೀಗ ಇನ್ನೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಚೆ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಈ ಹಿಂದೆ 2008 ಮತ್ತು 2013ರಲ್ಲಿ ವರುಣಾದಿಂದ ಎರಡು ಬಾರಿ ಗೆದ್ದಿದ್ದರು ಮತ್ತು 2013ರಲ್ಲಿ ಇಲ್ಲಿಂದ ಗೆದ್ದು ಮುಖ್ಯಮಂತ್ರಿಯಾಗಿ ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಇದು ತನ್ನ ಪಾಲಿಗೆ ಲಕ್ಕಿ ಕ್ಷೇತ್ರ ಎಂದು ಸಿದ್ದರಾಮಯ್ಯ ಪರಿಗಣಿಸಿದ್ದಾರೆ. ಅದರೆ ಮಗನ ಭವಿಷ್ಯದ ದೃಷ್ಟಿಯಿಂದ ಅವರು ಇನ್ನೂ ಒಂದು ಕ್ಷೇತ್ರದ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷ ಒಪ್ಪಿದರೆ ವರುಣಾದ ಜೊತೆಗೆ ಕೋಲಾರದಿಂದ ಅಥವಾ ಬಾದಾಮಿಯಿಂದ ಸ್ಪರ್ಧಿಸಲು ಬಯಸುವುದಾಗಿ ಹೇಳಿಕೊಂಡಿದ್ದಾರೆ.
ಕ್ಷೇತ್ರಕ್ಕೆ ಸಂಬಂಧಿಸಿದ ನಿರ್ಧಾರ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು. ವರುಣಾದಿಂದ ಸ್ಪರ್ಧಿಸುವಂತೆ ಹೈಕಮಾಂಡ್ ಹೇಳಿದೆ. ಕೋಲಾರ ಮತ್ತು ಇಲ್ಲಿಂದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದೇನೆ, ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಸದ್ಯ ಪುತ್ರ ಯತೀಂದ್ರ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ ಸ್ಪರ್ಧೆಗೆ ಆಸಕ್ತಿ ತೋರಿರುವ ಕೋಲಾರ ಹಾಗೂ ಈಗಾಗಲೇ ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರಕ್ಕೆ ಕಾಂಗ್ರೆಸ್ ಇನ್ನೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಪಕ್ಷದ ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರು ಎರಡೂ ಸ್ಥಾನಗಳಿಂದ ಗೆದ್ದರೆ, ವರುಣಾ ಕ್ಷೇತ್ರವನ್ನು ತೆರವು ಮಾಡ್ತಾರೆ. ನಂತರದ ಉಪಚುನಾವಣೆಯಲ್ಲಿ ಯತೀಂದ್ರ ಅವರನ್ನು ಕಣಕ್ಕೆ ಇಳಿಸಲು ಯೋಜಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿರುವ ಸಿದ್ದರಾಮಯ್ಯ ಅವರು ಸುರಕ್ಷಿತ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಸಮೀಕ್ಷೆ ನಡೆಸಿ ಒಪ್ಪಿಗೆ ಸಿಕ್ಕರೆ ಕೋಲಾರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಜನವರಿಯಲ್ಲಿ ಘೋಷಿಸಿದ್ದರು.
ಆದರೆ, ಕಳೆದ ವಾರ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕತ್ವ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ ಅವರಿಗೆ ಕೋಲಾರದಿಂದ ಸ್ಪರ್ಧಿಸದಂತೆ ಸಲಹೆ ನೀಡಿತ್ತು. ಆ ಕ್ಷೇತ್ರ ಅವರಿಗೆ ರಿಸ್ಕಿ ಎಂದು ಹೇಳಲಾಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಿದ್ದರಾಮಯ್ಯ ಅವರು ಕ್ಷೇತ್ರದ ಜನರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವಾಗದ ಕಾರಣ ಅಲ್ಲಿಂದ ಸ್ಪರ್ಧಿಸುವುದಿಲ್ಲ ಎಂದು ಕಾರಣ ಹೇಳಿದ್ದರು.
ಮುಖ್ಯಮಂತ್ರಿಯಾಗಿದ್ದಾಗಲೇ ಸಿದ್ದರಾಮಯ್ಯ 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ನ ಜಿ.ಟಿ. ದೇವೇಗೌಡರ ವಿರುದ್ಧ 36,042 ಮತಗಳಿಂದ ಸೋತಿದ್ದರು. ಬಾದಾಮಿಯಲ್ಲಿ ಬಿ. ಶ್ರೀರಾಮುಲು ಅವರನ್ನು 1,696 ಮತಗಳಿಂದ ಸೋಲಿಸಿದ್ದರು.
ಹೆಚ್ಚುವರಿಯಾಗಿ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿ ಎರಡರಲ್ಲೂ ಗೆದ್ದರೆ ವರುಣಾ ಕ್ಷೇತ್ರವನ್ನು ತೆರವುಗೊಳಿಸಿ ಪುತ್ರ ಯತೀಂದ್ರಗೆ ಟಿಕೆಟ್ ಕೊಡಿಸುವುದು. ಈ ಮೂಲಕ ತನ್ನ ರಾಜಕೀಯ ಹಿತಾಸಕ್ತಿಗಾಗಿ ಪುತ್ರನಿಂದ ಕ್ಷೇತ್ರ ಕಸಿದುಕೊಂಡ ಅಪವಾದದಿಂದ ಪಾರಾಗುವುದು ಸಿದ್ದರಾಮಯ್ಯ ಲೆಕ್ಕಾಚಾರ.