ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ 99ನೇ ಆವೃತ್ತಿಯ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಮಾಸಿಕ ಕಾರ್ಯಕ್ರಮದ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿರುವ ಅವರು, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತದ ಯಶಸ್ಸು, ಮಹಿಳಾ ಸಬಲೀಕರಣ, ಅಂಗದಾನ ಜಾಗೃತಿ, ಕೋವಿಡ್ -19 ಸಾಂಕ್ರಾಮಿಕ ಮತ್ತು ಇತರ ಹಲವು ಪ್ರಮುಖ ವಿಷಯಗಳ ಕುರಿತು ಪ್ರಸ್ತಾಪಿಸಿದ್ದಾರೆ.
ಮನ್ ಕಿ ಬಾತ್ ಕಾರ್ಯಕ್ರಮ ಮೊದಲ ಶೋ 3ನೇ ಅಕ್ಟೋಬರ್ 2014 ರಂದು ಪ್ರಸಾರವಾಗಿ ಇಂದು 99ನೇ ಸಂಚಿಕೆ ಕಂಡಿದೆ. ಮುಂದಿನ ತಿಂಗಳು ಏಪ್ರಿಲ್ 30 ರಂದು ನಡೆಯುವ ಮನ್ ಕಿ ಬಾತ್ ನ 100 ನೇ ಸಂಚಿಕೆಗಾಗಿ ಭಾರತೀಯ ಜನತಾ ಪಾರ್ಟಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಅಂಗಾಂಗ ದಾನವು ಯಾರಿಗಾದರೂ ಜೀವ ನೀಡುವ ಅತ್ಯಂತ ಪ್ರಮುಖ ಸಾಧನವಾಗಿದೆ. ವ್ಯಕ್ತಿಯು ಮರಣದ ನಂತರ ಒಬ್ಬರ ದೇಹವನ್ನು ದಾನ ಮಾಡಿದಾಗ, ಅದು ಎಂಟರಿಂದ ಒಂಬತ್ತು ಜನರಿಗೆ ಹೊಸ ಜೀವನವನ್ನು ಪಡೆಯುವ ಸಾಧ್ಯತೆಯನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತದೆ. ಇಂದು ದೇಶದಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡುತ್ತಿರುವುದು ಸಂತಸದ ಸಂಗತಿ, 2013ರಲ್ಲಿ ನಮ್ಮ ದೇಶದಲ್ಲಿ ಅಂಗಾಂಗ ದಾನದ ಸಂಖ್ಯೆ ಐದು ಸಾವಿರಕ್ಕಿಂತ ಕಡಿಮೆಯಿತ್ತು. 2022ರಲ್ಲಿ ಈ ಸಂಖ್ಯೆ ಹದಿನೈದು ಸಾವಿರಕ್ಕೂ ಹೆಚ್ಚಾಗಿರುವುದು ಸಂತಸದ ಸಂಗತಿ ಎಂದು ಪ್ರಧಾನಿ ಹೇಳಿದ್ದಾರೆ.