ಪುತ್ತೂರು: ಹಲವು ವರ್ಷಗಳ ಬೇಡಿಕೆಯಾದ ಪುತ್ತೂರು – ಎಪಿಎಂಸಿ – ಉಪ್ಪಿನಂಗಡಿ ಸಂಪರ್ಕ ರಸ್ತೆಯ ಎಪಿಎಂಸಿ ಬಳಿಯ ರಸ್ತೆಯ ರೈಲ್ವೇ ಕ್ರಾಸಿಂಗ್ ಬಳಿ ರೂ. 12 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ರೈಲ್ವೇ ಅಂಡರ್‌ಪಾಸ್‌ನ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ ನಡೆಯಿತು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಬಹು ವರ್ಷಗಳ ಬೇಡಿಕೆಯಾದ ಈ ರಸ್ತೆ ರೈತರು ಸೇರಿದಂತೆ ಜನಸಾಮಾನ್ಯರಿಗೆ ಹಾಗೂ ತುರ್ತು ನಗರಕ್ಕೆ ಬರುವವರಿಗೆ ಸಮಸ್ಯೆಯಾಗಿ ಪರಿಣಮಿಸಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ರಾಜ್ಯ ಸರಕಾರ ಹಾಗೂ ಕೇಂದ್ರ ರೈಲ್ವೇ ಇಲಾಖೆಯಿಂದ ಅನುದಾನ ಮಂಜೂರಾಗಿ ಕಾಮಗಾರಿ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಶಾಸಕರು, ಸಂಸದರು, ಎಪಿಎಂಸಿ, ಸ್ಥಳೀಯಾಡಳಿತಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.
ಯೋಜನೆಗಳ ಅನುಷ್ಠಾನ ಡಬಲ್ ಇಂಜಿನ್ ಸರಕಾರದಿಂದ ಸಾಧ್ಯವಾಗಿದೆ : ಶಾಸಕ ಮಠಂದೂರು
ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿ ಮಾತನಾಡಿ,, ಅಗತ್ಯಕ್ಕೆ ಅನುಗುಣವಾಗಿ ಹಾಗೂ ಕಾಲಮಿತಿಯಲ್ಲಿ ಯೋಜನೆಗಳ ಅನುಷ್ಠಾನ ಡಬಲ್ ಎಂಜಿನ್ ಸರಕಾರದಿಂದ ಸಾಧ್ಯವಾಗಿದೆ. ಮೀಟರ್‍ಗೇಜ್, ಬ್ರಾಡ್ ಗೇಜ್ ಕಾಲದಿಂದ ವಿದ್ಯುತ್ ಚಾಲಿತ ರೈಲುಗಳು ಇಂದು ಓಡಾಡುತ್ತಿವೆ. ಪುತ್ತೂರಿನ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲುಗಳ ತಂಗುದಾಣವೂ ಮುಂದೆ ನಿರ್ಮಾಣವಾಗಲಿದೆ ಎಂದ ಅವರು, ರೈಲ್ವೇಗೆ ಸಂಬಂಧಿಸಿದಂತೆ ಪುತ್ತೂರಿನ ಬಹುತೇಕ ಕೆಲಸಗಳೂ ಆಗಿವೆ. ಎಪಿಎಂಸಿ ಅಂಡರ್‌ಪಾಸ್ ಬೇಡಿಕೆ ಈಡೇರಿಕೆಗೆ ಸಂಬಂಧಿಸಿದಂತೆ ಇಚ್ಛಾ ಶಕ್ತಿ ಇದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ಮಾಜಿ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ತೋರಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಕ್ತಪಡಿಸಿದ ಶಾಸಕರು, ಮುಂದೆ ಎಪಿಎಂಸಿ ರಸ್ತೆ ಭಾಗದಿಂದ ದೇವಿಬೆಟ್ಟದ ಮೂಲಕ ರೈಲ್ವೇ ನಿಲ್ದಾಣಕ್ಕೆ ರಸ್ತೆ ಮಾಡುವ ಉದ್ದೇಶವಿದೆ. ಎಪಿಎಂಸಿ ರಸ್ತೆಯ ಮುಂದಕ್ಕೂ ಚತುಷ್ಪಥ ಆಗಲಿದೆ. ಸಹಕಾರ ಇಲಾಖೆಯಿಂದ 2 ಕೋಟಿ ರೂ. ಮಂಜೂರಾತಿ ಹಂತದಲ್ಲಿದೆ ಎಂದು ಹೇಳಿದರು.
ಶಾಸಕರು ಬೇಡಿಕೆಗಳನ್ನು ಆದ್ಯತೆಯಲ್ಲಿ ಈಡೇರಿಸುತ್ತಿದ್ದಾರೆ : ಜೀವಂಧರ್ ಜೈನ್
ಮುಖ್ಯ ಅತಿಥಿಯಾಗಿ ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಅಚ್ಛೇ ದಿನ್ ಬರ್ತಾ ಇದೆ ಅಂದಿದ್ರು. ನಗರಸಭೆಗೆ ಇಂದು ಅಚ್ಛೇ ದಿನ್. ನಗರಸಭಾ ವ್ಯಾಪ್ತಿಯ ಬಹುತೇಕ ಬೇಡಿಕೆಯ ಅಭಿವೃದ್ಧಿ ಕೆಲಸಗಳು ಈಡೇರುತ್ತಿವೆ. ಎಲ್ಲಾ ಕ್ಷೇತ್ರಗಳ ಕುರಿತೂ ಕಾಳಜಿ, ಅನುಭವ ಹೊಂದಿರುವ ಶಾಸಕರು ಬೇಡಿಕೆಗಳನ್ನು ಆದ್ಯತೆಯಲ್ಲಿ ಈಡೇರಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗುತ್ತಿಗೆದಾರ ಮೈಸೂರು ರೆಡ್ಡಿ ಹಾಗೂ ಅನುದಾನಕ್ಕಾಗಿ ಶ್ರಮಿಸಿದ ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಹಾಗೂ ಸದಸ್ಯರನ್ನು ಸನ್ಮಾನಿಸಲಾಯಿತು. ರೈಲ್ವೇ ಇಲಾಖೆಯ ಪರವಾಗಿ ಹಿರಿಯ ವಿಭಾಗ ಎಂಜಿನಿಯರ್ ಕೆ.ಪಿ. ನಾಯ್ದು, ಎಂಜಿನಿಯರ್ ಶಿಲ್ಪಾ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ನಗರಸಭಾ ಉಪಾಧ್ಯಕ್ಷೆ ವಿದ್ಯಾ ಗೌರಿ, ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭಾ ಸ್ಥಳೀಯ ಸದಸ್ಯ ಪ್ರೇಮಚಂದ್ರ ಉಪಸ್ಥಿತರಿದ್ದರು. ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಮೆದು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು ವಂದಿಸಿದರು. ರಾಜೆಶ್ ಬನ್ನೂರು ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ವೈದ್ಯ ಡಾ. ಎಂ.ಕೆ. ಪ್ರಸಾದ್, ಎಪಿಎಂಸಿ ಮಾಜಿ ಸದಸ್ಯರು ಪಾಲ್ಗೊಂಡರು.