ಸುಳ್ಯ: ಹೃದಯವಿದ್ರಾವಕ ಘಟನೆಯಲ್ಲಿ ಸುಳ್ಯದ ಗುರುಂಪು ಬಳಿ ಬರೆ ಕುಸಿತ ಪ್ರಕರಣದಲ್ಲಿ ಮಣ್ಣಿನಡಿ ಸಿಲುಕಿದ್ದ ಮೂವರ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ.
ಶನಿವಾರ ಮಧ್ಯಾಹ್ನ ಅಬೂಬಕ್ಕರ್ ಎಂಬವರ ಮನೆ ಸಮೀಪ ಘಟನೆ ಸಂಭವಿಸಿದೆ. ಬರೆಗೆ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದಾಗ ದುರ್ಘಟನೆ ಘಟಿಸಿದೆ. ಕಾಮಗಾರಿಯಲ್ಲಿ ನಿರತರಾಗಿದ್ದ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ. ಮೃತಪಟ್ಟವರಲ್ಲಿ ಗದಗ ಮುಂಡರಗಿ ಮೂಲದ ಸೋಮಶೇಖರ, ಶಾಂತಾ ದಂಪತಿ ಇದ್ದರು ಎಂದು ಗುರುತಿಸಲಾಗಿದೆ.
ಬರೆ ಕುಸಿದ ತಕ್ಷಣ ಸ್ಥಳೀಯರು ಕಾರ್ಯಾಚರಣೆ ಆರಂಭಿಸಿದ್ದು, ನಂತರ ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿಗಳು ಸೇರಿದರು. ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಜೆಸಿಬಿಯನ್ನು ತರಿಸಿ, ಕಾರ್ಯಾಚರಣೆ ನಡೆಸಲಾಯಿತು.
ಸುಮಾರು ಒಂದೂವರೆ ಗಂಟೆಯ ಕಾರ್ಯಾಚರಣೆ ಬಳಿಕ ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಆ ವೇಳೆಗಾಗಲೇ ಮೂವರು ಮೃತಪಟ್ಟಿದ್ದರು. ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರಗೆ ಸಾಗಿಸಿಲಾಗಿದೆ.
ಸಚಿವ ಎಸ್. ಅಂಗಾರ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.