ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು, ನೂತನವಾಗಿ ನಿರ್ಮಿಸಲಾಗಿರುವ ಕೆಆರ್ ಪುರಂ- ಬೈಯ್ಯಪ್ಪನ ಹಳ್ಳಿ ಮೆಟ್ರೋ ರೈಲು ಮಾರ್ಗವನ್ನು (ಮಾ.25 ) ಲೋಕಾರ್ಪಣೆಗೊಳಿಸಿದರು. ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಇದು ಪ್ರಮುಖವಾದ ಮೆಟ್ರೋ ಮಾರ್ಗವಾಗಿದ್ದು, ಈ ಮಾರ್ಗದಿಂದ 10 ಲಕ್ಷ ಜನರಿಗೆ ಸಹಾಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಮೆಟ್ರೋ ಉದ್ಘಾಟಿಸಿದ ನಂತರ ಅವರು ಮೆಟ್ರೋದಲ್ಲಿ ಸುಮಾರು 5 ಕಿ.ಮೀ.ವರೆಗೆ ಪ್ರಯಾಣಿಸಿದರು. ಆ ಸಂದರ್ಭದಲ್ಲಿ ಅವರು ರೈಲಿನಲ್ಲಿದ್ದ ಮೆಟ್ರೋ ರೈಲು ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು
ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಬೆಂಗಳೂರು ಮೆಟ್ರೋಕ್ಕೆ ಈ ರೈಲು ಮಾರ್ಗವು ಹೊಸ ಹೆಗ್ಗಳಿಕೆಯಾಗಿದ್ದು, ಇದು ನೇರಳೆ ಮಾರ್ಗದಲ್ಲಿ ತೆರಳುವ ಮೆಟ್ರೋ ಪ್ರಯಾಣಿಕರ ಪ್ರಯಾಣವನ್ನು ವಿಸ್ತರಿಸಲು ಸಹಕಾರಿಯಾಗಿದೆ. ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ ಸಿಟಿ ಪ್ರಾಂತ್ಯದಲ್ಲಿರುವ ಐಟಿ ಕಂಪನಿಗಳ ಉದ್ಯೋಗಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸುತ್ತದೆ.
ಅಭಿಮಾನಿಗಳ ಮಹಾಪೂರ
ಎಚ್ ಎಎಲ್ ವಿಮಾನ ನಿಲ್ದಾಣದಿಂದ ವೈಟ್ ಫೀಲ್ಡ್ ಮೆಟ್ರೋ ರೈಲು ನಿಲ್ದಾಣಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿಯವರನ್ನು ದಾರಿಯ ಇಕ್ಕೆಲಗಳಲ್ಲಿ ಸ್ವಾಗತಿಸಲು ಲಕ್ಷಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಅವರ ಬಾಯಲ್ಲಿ ಮೋದಿಯವರ ಜಯಕಾರ ಮೊಳಗುತ್ತಿತ್ತು. ಮೋದಿ, ಮೋದಿ, ಮೋದಿ ಎಂದು ಕೂಗುತ್ತಿದ್ದರು. ಏಕ್, ದೋ, ತೀನ್ , ಚಾರ್… ಮೋದಿ ಜೀ ಕಿ ಜಯಜಯಕಾರ್ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಿದ್ದರು.
ಒಟ್ಟು 4,500 ಕೋಟಿ ರೂ. ವೆಚ್ಚದಲ್ಲಿ ಈ ರೈಲು ಮಾರ್ಗ ನಿರ್ಮಾಣವಾಗಿದ್ದು, 13.71 ಕಿ.ಮೀ.ನಷ್ಟು ದೂರವನ್ನು ಇದು ಕ್ರಮಿಸಲಿದೆ ಎಂದು ಅಧಿಕಾರಿಗಳು ಮೋದಿಯವರಿಗೆ ಮಾಹಿತಿ ನೀಡಿದರು. ಅಲ್ಲದೆ, ದೇಶದ ಅತಿ ಉದ್ದದ ವಿಸ್ತರಿತ ಮೆಟ್ರೋ ರೈಲು ಮಾರ್ಗ (ಬೆಂಗಳೂರು ಮೆಟ್ರೋದ ನೇರಳೆ ಮಾರ್ಗ) ಇದು ಎಂಬ ಹೆಗ್ಗಳಿಕೆಯನ್ನೂ ಮೋದಿಯವರಿಗೆ ವಿವರಿಸಿದರು.