ಪುತ್ತೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದ ನಗರದ ಬೊಳುವಾರಿನಲ್ಲಿರುವ ಜಾಗದಲ್ಲಿ ಆಶ್ಲೇಷ ಬಲಿ, ಅರ್ಧ ಏಕಾಹ ಭಜನೆ ಹಾಗೂ ಜನಜಾಗೃತಿ ಸಭೆ ಶುಕ್ರವಾರ ರಾತ್ರಿ ನಡೆಯಿತು.
ಸಭೆಯಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕಾರಿಂಜೇಶ್ವರ ದೇವಸ್ಥಾನದ ಸುತ್ತ ಗಣಿಗಾರಿಕೆ ನಡೆಯಬಾರದು ಎಂಬ ಹೋರಾಟಕ್ಕೆ ಸಂಘಟನೆ ಮೂಲಕ ಯಶಸ್ಸು ಸಿಕ್ಕಿದೆ. ಬೊಳುವಾರಿ ಕುಕ್ಕೆ ಕ್ಷೇತ್ರಕ್ಕೆ ಜಾಗ ದಾನ ಕೊಟ್ಟವರು ಬ್ರಾಹ್ಮಣರು. ಈ ಜಾಗವನ್ನು ಮತ್ತೆ ಸ್ವಾಧೀನ ಪಡೆಯಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಾಗಲಿ, ಅಧಿಕಾರಿಗಳ ತಂಡಗಳಾಗಲಿ ಮುಂದೆ ಬಂದಿಲ್ಲ. ಇದೀಗ ಹಿಂದೂ ಜಾಗರಣಾ ವೇದಿಕೆ ಹೋರಾಟದ ಫಲವಾಗಿ ಜಾಗವನ್ನು ಮತ್ತೆ ದೇವಸ್ಥಾನದ ಹೆಸರಿನಲ್ಲಿ ಪಡೆಯುವಂತಾಗಿದ್ದು, ಈ ಮೂಲಕ ಹಿಂದೂ ಜಾಗರಣ ವೇದಿಕೆ ಧರ್ಮ ಜಾಗೃತಿ ಮಾಡಿದೆ ಎಂದರು.
ಬ್ರಹ್ಮಶ್ರೀ ವೇ.ಮೂ. ಕುಂಟಾರು ರವೀಶ ತಂತ್ರಿ ದಿಕ್ಸೂಚಿ ಭಾಷಣ ಮಾಡಿ, ಆತ್ಮ ಸ್ಥೈರ್ಯದೊಂದಿಗೆ ಮುನ್ನುಗ್ಗುವ ಸಂಘ ಜಗತ್ತಿನಲ್ಲಿದ್ದರೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಸಂಘ ಪರಿವಾರದ ಸಂಘಟನೆ. ಈ ನಿಟ್ಟಿನಲ್ಲಿ ನಾವು ಸ್ವಾಭಿಮಾನಿಯಾಗಿ ಎದ್ದು ನಿಂತರೆ ಯಾವ ಕಾರ್ಯವನ್ನು ಮಾಡಲು ಸಾಧ್ಯವಿದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದ ಅವರು, ಈ ಜಾಗದಲ್ಲಿ ಭವಿಷ್ಯತ್ ನಲ್ಲಿ ಹಿಂದೂ ಸಮಾಜಕ್ಕೆ ಉಪಯೋಗವಾಗುವ ಮಂದಿರವನ್ನು ನಿರ್ಮಾಣ ಮಾಡುವ ತೀರ್ಮಾನ ಮಾಡಲಾಗಿದೆ. ಅದಕ್ಕೆ ದೇವರ ಅನುಗ್ರಹ ಇದೆ ಎಂದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ.ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೊಳುವಾರಿನಲ್ಲಿ ಇಂದು ಅನ್ಯರ ಪಾಲಾಗಿದ್ದ ಜಾಗವನ್ನು ಮತ್ತೆ ದೇವಸ್ಥಾನಕ್ಕೆ ಕೊಡುವಲ್ಲಿ ಸಂಘಟನೆಯ ಪಾತ್ರ ಮಹತ್ವದಾಗಿದೆ ಎಂದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಯ ಮಾತನಾಡಿ, ಭಜನೆ ಮೂಲಕ ಎಲ್ಲರೂ ಒಂದುಗೂಡಲು ಸಾಧ್ಯ. ಹಿಂದೂ ಜಾಗರಣ ವೇದಿಕೆ ಭಜನೆ ಮೂಲಕ ಧರ್ಮ ಜಾಗೃತಿ ಮೂಡಿಸಿದೆ. ಸುಬಬ್ರಹ್ಮಣ್ಯದ ಪುಣ್ಯ ಭೂಮಿಯನ್ನು ನಮಗೆ ಒಪ್ಪಿಸುವ ಕೆಲಸ ಮಾಡಿದ ಹಿಂದೂ ಜಾಗರಣ ವೇದಿಕೆ ಮಾಡಿದ ಜಾಗರಣ ವೇದಿಕೆ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ರವಿರಾಜ ಶೆಟ್ಟಿ ಕಡಬ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದೂ ಜಾಗರಣ ವೇದಿಕೆ ತಾಲೂಕು ಸಂಚಾಲಕ ದಿನೇಶ್ ಪಂಜಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯ ಪ್ರಮುಖರಾದ ಚಿನ್ಮಯ್ ರೈ ಈಶ್ವರಮಂಗಲ, ರಾಕೇಶ್ ಪಂಜೋಡಿ, ನರಸಿಂಹ ಮಾಣಿ, ಜಯರಾಮ, ಪ್ರೀತಮ್, ಚರಣ್, ಅಭಿ, ಅಶೋಕ್ ಸ್ವಾಮೀಜಿಗಳು ಹಾಗೂ ರವೀಶ ತಂತ್ರಿಯವರನ್ನು ಫಲಪುಷ್ಪ ನೀಡಿ ಗೌರವಿಸಿದರು. ತಾಲೂಕು ಸಮಿತಿ ಸದಸ್ಯರಾದ ಮನೀಶ್ ದರ್ಬೆ, ಲತೇಶ್ ಕೆಮ್ಮಾಯಿ ಅತಿಥಿಗಳನ್ನು ಗೌರವಿಸಿದರು. ಪ್ರೀತಿ ಕುಡ್ವ ಪ್ರಾರ್ಥಿಸಿದರು. ಹಿಂಜಾವೇ ತಾಲೂಕು ಸಹ ಸಂಚಾಲಕ ಸ್ವಸ್ತಿಕ್ ಮೇಗಿನಗುತ್ತು ಸ್ವಾಗತಿಸಿದರು. ಸಹಸಂಚಾಲಕ ಗಿರೀಶ್ ಮಡಪ್ಪಾಡಿ ವಂದಿಸಿದರು. ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಆಶ್ಲೇಷ ಬಲಿ ಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಿತು. ಬೆಳಿಗ್ಗೆ ವೇ.ಮೂ. ರಾಜೇಶ್ ಭಟ್ ಗಣಪತಿ ಹೋಮ ನೆರವೇರಿಸಿದರು.