ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿರುವ ಆಯುಷ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಪ್ರಕೃತಿ ಚಿಕಿತ್ಸಾ ವಿಭಾಗ ಆರಂಭಿಸಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಹೇಳಿದ್ದಾರೆ.
ಮಾರ್ಚ್ 25ರ ಶನಿವಾರ ನಗರದ ವೆನ್ಲಾಕ್ ಆಯುಷ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 20 ಲಕ್ಷ ರೂ. ವೆಚ್ಚದ ಅತ್ಯಾಧುನಿಕ ನ್ಯಾಚುರೋಪತಿ ಉಪಕರಣಗಳ ಹಸ್ತಾಂತರ ಮತ್ತು ನೂತನ ಪ್ರಕೃತಿ ಚಿಕಿತ್ಸಾ ವಿಭಾಗಕ್ಕೆ ಚಾಲನೆ ನೀಡಿ ಅವರು ಶನಿವಾರ ಮಾತನಾಡಿದರು.
ಮುಂಬರುವ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಪ್ರದೇಶಗಳಾದ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಆಸ್ಪತ್ರೆಗಳಲ್ಲೂ ಪ್ರಕೃತಿ ಚಿಕಿತ್ಸೆ ಆರಂಭಿಸಲು ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ಹಾಗೂ ನೆರವು ನೀಡಲಾಗುವುದು ಎಂದವರು ಹೇಳಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಪ್ರಕೃತಿ ಚಿಕಿತ್ಸೆಗೆ ಅನುಕೂಲವಾಗಬೇಕಾದ ಭೂಮಿ ಮತ್ತು ಮೂಲ ಸೌಲಭ್ಯಕ್ಕೆ ಜಿಲ್ಲಾಡಳಿತ ಸಹಕಾರ ನೀಡಲಿದೆ ಎಂದ ಅವರು, ಇತ್ರೀಚೆಗೆ ಆಯುರ್ವೇದ, ನ್ಯಾಚುರೋಪತಿ, ಯುನಾನಿ ಚಿಕಿತ್ಸೆಗೆ ಹೆಚ್ಚಿನ ಬೇಡಿಕೆ ಇದೆ. ಸರ್ಕಾರಿ ಆಯುಷ್ ಆಸ್ಪತ್ರೆಯೊಂದರಲ್ಲಿ ಸುಸಜ್ಜಿತವಾದ ಪ್ರಕೃತಿ ಚಿಕಿತ್ಸಾ ವಿಭಾಗ ಆರಂಭಿಸಿರುವುದು ನಗರದ ಬಡ ರೋಗಿಗಳಿಗೆ ವರವಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರಿಗೂ ಈ ಸೌಲಭ್ಯ ದೊರೆಯಬೇಕು. ಇದಕ್ಕಾಗಿ ತಾಲೂಕು ಮಟ್ಟದಲ್ಲಿ ಕಟ್ಟಡ, ಮೂಲ ಸೌಲಭ್ಯ ಒದಗಿಸಲಾಗುವುದು ಎಂದರು.
ಆಯುಷ್ ಆಸ್ಪತ್ರೆಗೆ ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ (ಎಂಸಿಎಫ್) ಸುಮಾರು 20 ಲಕ್ಷ ರೂ. ಮೌಲ್ಯದ ಅತ್ಯಾಧುನಿಕ ಪ್ರಕೃತಿ ಚಿಕಿತ್ಸೆ ಸಂಬಂಧಿತ ಉಪಕರಣಗಳನ್ನು ಒದಗಿಸಿದೆ. ಈ ಮೂಲಕ ಎಂಸಿಎಫ್ ಸಿಎಸ್‌ಆರ್ ನಿಧಿ ಉತ್ತಮ ಕಾರ್ಯಕ್ಕೆ ವಿನಿಯೋಗವಾಗಿದೆ ಎಂದು ಜಿಲ್ಲಾಧಿಕಾರಿಯವರು ಅಭಿಪ್ರಾಯಪಟ್ಟರು.