ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಇನ್ನು ಓದಿದರೂ ಪಾಸ್ ಆಗಬಹುದು…

ಕೊನೆಯ ಹಂತದ ಪ್ಲಾನಿಂಗ್ ಹೀಗಿರಲಿ

ಪ್ರೀತಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೇ ನಿಮಗೆಲ್ಲಾ ಮೊದಲಾಗಿ ನಮ್ಮ ಶುಭಾಶಯಗಳು.
ನಿಮ್ಮ ಜೀವನದ ಮೊದಲ ಬೋರ್ಡ್ ಪರೀಕ್ಷೆಯನ್ನು ಬರೆಯುತ್ತಿದ್ದೀರಿ. ಇದು ನೀವು ಎದುರಿಸುವ ಮೊದಲ ರಾಜ್ಯಮಟ್ಟದ ಪರೀಕ್ಷೆ. ಮುಂದೆ ನೀವು ಎದುರಿಸುವ ಹಲವು ಬೋರ್ಡ್ ಪರೀಕ್ಷೆಗಳಿಗೆ ಇದು ಖಂಡಿತವಾಗಿಯೂ ಪಂಚಾಂಗ ಆಗುತ್ತದೆ.
2023ರ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಈಗಾಗಲೇ ಕ್ಷಣಗಣನೆಯು ಆರಂಭ ಆಗಿದೆ. ಮಾ.31ರಂದು ನಿಮ್ಮ ಪರೀಕ್ಷೆಗಳು ಆರಂಭ ಆಗಲಿವೆ. ನಿಮಗೆ ಕಳೆದ ವರ್ಷ ಮೇ 16ರಿಂದ ಇಂದಿನ ದಿನದವರೆಗೂ ನಿಮ್ಮ ಅಧ್ಯಾಪಕರ ಮಾರ್ಗದರ್ಶನದಲ್ಲಿ ಉತ್ತಮವಾದ ತರಬೇತಿ ದೊರಕಿದ್ದು ಪರೀಕ್ಷೆಗೆ ಮಾನಸಿಕವಾಗಿ ಪ್ರಿಪೇರ್ ಆಗ್ತಾ ಇದ್ದೀರಿ. ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಕೊರೊನಾ ಕಾರಣಕ್ಕೆ ನಿಮಗೆ ಬಿಗಿಯಾದ ಪರೀಕ್ಷೆಯೇ ಇಲ್ಲದೆ ಎಲ್ಲರೂ ಪಾಸಾಗಿ ಇಂದು ಹತ್ತನೇ ತರಗತಿಯಲ್ಲಿ ಇದ್ದೀರಿ.
ಆದ್ದರಿಂದ ಈ ವರ್ಷದ ಪರೀಕ್ಷೆ ನಿಮಗೆ ನಿಜವಾದ ಅಗ್ನಿಪರೀಕ್ಷೆಯೇ ಆಗಬಹುದು. ಆದರೆ ಆತಂಕ ಮಾಡುವ ಅಗತ್ಯವೇ ಇಲ್ಲ. ಆತಂಕ ಮಾಡಿದರೆ ನಿಮ್ಮ ನಿಜವಾದ ಸಾಮರ್ಥ್ಯವನ್ನು ತೋರಿಸಲು ಸಾಧ್ಯವಾಗದೆ ಹೋಗಬಹುದು. ಆದ್ದರಿಂದ ಕೂಲ್ ಆಗಿ ಒಂದೆಡೆ ಕುಳಿತು ಕೊನೆಯ ಕ್ಷಣದ ಕೆಲವು ಸಿದ್ಧತೆಗಳನ್ನು ಮಾಡಿದರೆ ಗೆಲುವು ಖಂಡಿತ ನಿಮ್ಮದೆ ಆಗುತ್ತದೆ.

ಈ ವರ್ಷ ನಿಮಗೆ ಇನ್ನೂ ಕೆಲವು ಅನುಕೂಲಗಳು ಇವೆ































 
 

1) ಈ ವರ್ಷ ಕೊರೊನಾ ತೊಂದರೆ ಇಲ್ಲದೆ ಇಡೀ ವರ್ಷ ಸರಿಯಾದ ಪಾಠಗಳು ನಡೆದಿವೆ. ಎಲ್ಲ ಕಡೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹೆಚ್ಚು ಬೆವರು ಹರಿಸಿದ್ದಾರೆ. ಇದು ಖಂಡಿತವಾಗಿ ಪಾಸಿಟಿವ್ ಅಂಶವಾಗಿದೆ.

2) ಈ ವರ್ಷದ ವಿದ್ಯಾರ್ಥಿಗಳು ಕೂಡ ಎಂಟು ಮತ್ತು ಒಂಬತ್ತನೇ ತರಗತಿಗಳಲ್ಲಿ ಕೊರೊನಾ ಕಾರಣಕ್ಕೆ ಸಂತ್ರಸ್ತರಾದ ಕಾರಣ (ಅದು ಸರಕಾರ ಮತ್ತು ಎಸ್ಸೆಸ್ಸೆಲ್ಸಿ ಬೋರ್ಡ್ ಇಬ್ಬರಿಗೂ ಗೊತ್ತಿರುವ ಕಾರಣ) ಹೆಚ್ಚು ಸುಲಭವಾದ ಪ್ರಶ್ನೆ ಪತ್ರಿಕೆಗಳು ಈ ವರ್ಷ ಬರುವ ಎಲ್ಲ ಸಾಧ್ಯತೆಗಳು ಇವೆ. ಎಲ್ಲ ಪ್ರಶ್ನೆಪತ್ರಿಕೆಗಳಲ್ಲಿ ಕಠಿಣತೆ ಮಟ್ಟ ಕಡಿಮೆ ಆಗಲಿದೆ ಎನ್ನುವುದು ನಿಮಗೆ ಪೂರಕ.

3) ಗಣಿತ ಮತ್ತು ವಿಜ್ಞಾನದ ವಿಷಯಗಳಲ್ಲಿ ಹಿಂದಿನ ವರ್ಷಗಳಲ್ಲಿ ಶೇ.20 ಕಠಿಣ ಮಟ್ಟದ ಅನ್ವಯ ಪ್ರಶ್ನೆಗಳು ಬರುತ್ತಿದ್ದು ಈ ವರ್ಷ ಅದು ಖಂಡಿತ ಶೇ.15 ಆಗಲಿದೆ. ಅಂದರೆ 80 ಅಂಕಗಳ ಪ್ರಶ್ನೆ ಪತ್ರಿಕೆಯಲ್ಲಿ 12 ಅಂಕಗಳ ಪ್ರಶ್ನೆಗಳು ಮಾತ್ರ ಕಠಿಣ ಆಗಿರಬಹುದು. ಉಳಿದ 68 ಅಂಕಗಳ ಪ್ರಶ್ನೆಗಳು ಸುಲಭ ಮತ್ತು ನೇರ ಆಗಿರುತ್ತವೆ.

4) ವಿಜ್ಞಾನ ವಿಷಯದಲ್ಲಿ 12-14 ಅಂಕಗಳನ್ನು ಚಿತ್ರಗಳ ಮೂಲಕ ಪಡೆಯಲು ಅವಕಾಶ ಇದ್ದು ಇದು ಜಸ್ಟ್ ಪಾಸ್ ಆಗುವ ವಿದ್ಯಾರ್ಥಿಗಳಿಗೆ ವರದಾನ ಆಗಲಿದೆ. ಅದರ ಜತೆಗೆ ಬೆಳಕು ಪಾಠದಲ್ಲಿ ಕಿರಣ ಚಿತ್ರಗಳು (Ray Diagrams), ವಿದ್ಯುಚ್ಛಕ್ತಿ ಪಾಠದಲ್ಲಿ ಸರ್ಕ್ಯುಟ್‌ಗಳು, ಓಮನ ನಿಯಮ, ಜೌಲನ ನಿಯಮ ಮೊದಲಾದವುಗಳು ಸುಲಭದಲ್ಲಿ ನಿಮಗೆ ಅಂಕ ತಂದುಕೊಡುತ್ತವೆ.

5) ಗಣಿತದಲ್ಲಿ 8-9 ಅಂಕಗಳು ರಚನೆಗೆ ನಿಗದಿ ಆಗಿದ್ದು ಯಾವ ಸೂತ್ರ, ಗುಣಾಕಾರ, ಭಾಗಾಕಾರ ಇಲ್ಲದೆ ಪಡೆಯಬಹುದಾದ ಅಂಕಗಳು ಇವು. ಇದರ ಜತೆಗೆ ಗ್ರಾಫ್ ನಾಲ್ಕು ಅಂಕಗಳು, ಓಜೀವ್ ಮೂರು ಅಂಕಗಳು, ಪ್ರಮೇಯದ ಏಳು ಅಂಕಗಳು ಬೋನಸ್ ನಿಮಗೆ.

6) ಯಾವುದೇ ವಿಷಯದಲ್ಲಿ 45 ಅಂಕಗಳನ್ನು ಗುರುತು ಮಾಡುವುದು ಸುಲಭ ಈ ವರ್ಷ. ಯಾವುದೇ ಪರಿಣತ ಅಧ್ಯಾಪಕರು 45 ಅಂಕಗಳನ್ನು ಪಟ್ಟಿ ಮಾಡಲು ನಿಮಗೆ ಸಹಾಯ ಮಾಡಬಹುದು. ಅಷ್ಟನ್ನು ಇನ್ನು ಕೂಡ ಕಲಿಯಲು ಸಮಯ ಇದೆ.

7) ಪ್ರತಿ ವಿಷಯದ ಮಾದರಿ ಪ್ರಶ್ನೆಗಳನ್ನು ನಿಮ್ಮ ಅಧ್ಯಾಪಕರಿಂದ ಪಡೆಯಿರಿ. ಪ್ರತಿ ವಿಷಯದಲ್ಲಿ ಒಂದೆರಡು ಪ್ರಶ್ನೆಪತ್ರಿಕೆಗಳನ್ನು ಬಿಡಿಸಲು ಇನ್ನೂ ಸಮಯ ಇದೆ. ಅವುಗಳನ್ನು ಉತ್ತರಿಸಿ ಆದ ನಂತರ ನಿಮ್ಮ ಅಧ್ಯಾಪಕರಿಂದ ಮೌಲ್ಯಮಾಪನ ಮಾಡಿಸಿಕೊಳ್ಳಲು ಮರೆಯಬೇಡಿ.

8) ಎಸ್ಸೆಸ್ಸೆಲ್ಸಿ ಪರೀಕ್ಷೆಯ ವೇಳಾಪಟ್ಟಿ ಈ ವರ್ಷ ನಿಮಗೆ ತುಂಬಾ ಅನುಕೂಲ ಇದೆ. ಎಲ್ಲ ವಿಷಯಗಳ ಪರೀಕ್ಷೆಗಳ ಮಧ್ಯದಲ್ಲಿ ಭರ್ಜರಿಯಾಗಿ ರಜೆ ದೊರೆತಿದೆ. ಇದು ನಿಮ್ಮ ಅಧ್ಯಯನಕ್ಕೆ ಅನುಕೂಲ. ಆದ್ದರಿಂದ ಆತಂಕ ಮಾಡದೆ ಓದಿ.

9) ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಅಲೆ ತೀವ್ರವಾಗಿ ಇದ್ದ ಕಾರಣ ಪರೀಕ್ಷಾ ಕೇಂದ್ರದಲ್ಲಿ ವಿಪರೀತವಾದ ಒತ್ತಡ ಇತ್ತು. ಈ ವರ್ಷ ಅಷ್ಟು ಉಸಿರುಗಟ್ಟುವ ವಾತಾವರಣ ಇರಲಾರದು. ಏನಿದ್ದರೂ ಮಾಸ್ಕ್, ಸೆನಿಟೈಜರ್ ಖಂಡಿತ ಇರುತ್ತದೆ. ಈ ಬಾರಿಯ ಪರೀಕ್ಷಾ ಕೇಂದ್ರಗಳು ಹೆಚ್ಚು ವಿದ್ಯಾರ್ಥಿ ಸ್ನೇಹಿ ಆಗಿರುತ್ತವೆ.

10) ಪರೀಕ್ಷೆಯ ಅಂತಿಮ ಹಂತವಾದ ಮೌಲ್ಯಮಾಪನ ಕೂಡ ಈ ಬಾರಿ ವಿದ್ಯಾರ್ಥಿ ಸ್ನೇಹಿ ಆಗಿರುವ ಎಲ್ಲ ಸಾಧ್ಯತೆಗಳು ನಮಗೆ ಕಾಣುತ್ತಿವೆ. ಈ ಅಂಶ ಕೂಡ ವಿದ್ಯಾರ್ಥಿಗಳಿಗೆ ಅನುಕೂಲ.

ನೀವು ತಕ್ಷಣವೇ ಮಾಡಬೇಕಾದದ್ದು…..
(ಇದು ಪಾಸ್ ಆಗಲು ಕಷ್ಟ ಪಡುವ ವಿದ್ಯಾರ್ಥಿಗಳಿಗೆ ಮಾತ್ರ)!

1) ನಿಮ್ಮ ಅಧ್ಯಾಪಕರ ಮಾರ್ಗದರ್ಶನ ಪಡೆದು ಪ್ರತಿ ವಿಷಯದಲ್ಲಿ 45 ಅಂಕದ ಪಾಸಿಂಗ್ ಪ್ಯಾಕೇಜ್ ಪ್ರಶ್ನೆಗಳನ್ನು ಪಟ್ಟಿ ಮಾಡಿ. ಅವುಗಳ ಮೇಲೆ ಹೆಚ್ಚು ಫೋಕಸ್ ಮಾಡಿ ಓದಿ.

2) ಇನ್ನು ಪಾಠ 1, ಪಾಠ 2…ಹೀಗೆ ಓದುವುದನ್ನು ಬಿಟ್ಟು ಪ್ರಶ್ನೆಪತ್ರಿಕೆಗಳನ್ನು ಸ್ವತಂತ್ರವಾಗಿ ಬಿಡಿಸುವುದು ಸೂಕ್ತ. ಬಿಡಿಸಿದ ನಂತರ ಅವುಗಳನ್ನು ನಿಮ್ಮ ಶಿಕ್ಷಕರಿಂದ ಮೌಲ್ಯಮಾಪನವನ್ನು ಮಾಡಿಸಿಕೊಂಡರೆ ಇನ್ನೂ ಒಳ್ಳೆಯದು.

3) ವಿವಿಧ ವಿಷಯಗಳ ಪರಿಣತ ಅಧ್ಯಾಪಕರು ನಡೆಸಿಕೊಡುವ ರೇಡಿಯೊ ಮತ್ತು ಟಿವಿ ಕಾರ್ಯಕ್ರಮಗಳು ತುಂಬಾ ಚೆನ್ನಾಗಿವೆ. ಅವುಗಳನ್ನು ಆಲಿಸಿ.

4) ಭಾಷಾ ವಿಷಯಗಳಲ್ಲಿ ವ್ಯಾಕರಣ(ಗ್ರಾಮರ್) ವಿಭಾಗ ನಿಮಗೆ ಹೆಚ್ಚು ಗೊಂದಲವನ್ನು ಉಂಟುಮಾಡುವ ವಿಭಾಗ. ಅದಕ್ಕೆ ಪೂರಕವಾದ ಎರಡು ಅಥವಾ ಮೂರು ಗಂಟೆಗಳ ಒಂದು ತರಗತಿಯು ನಿಮಗೆ ಈಗ ಖಂಡಿತ ಅಗತ್ಯ ಇದೆ. ನಿಮ್ಮ ಅಧ್ಯಾಪಕರನ್ನು ಈ ಬಗ್ಗೆ ವಿನಂತಿ ಮಾಡಿ.

5) ಹಾಗೆಯೇ ಭಾಷಾ ವಿಷಯಗಳಲ್ಲಿ ಪದ್ಯ ಬಾಯಿಪಾಠ, ಸಾರಾಂಶ ಬರೆಯುವುದು, ಪತ್ರ ಲೇಖನ, ಪ್ರಬಂಧ ರಚನೆ, ಸಂದರ್ಭ ಸಹಿತ ಅರ್ಥ ವಿವರಣೆ, ಕವಿ ಕಾವ್ಯ ಪರಿಚಯ, ಗಾದೆ ವಿಸ್ತಾರ ಇವುಗಳು ಹೆಚ್ಚು ಸುಲಭ. ಈ ಅಂಕಗಳನ್ನು ಮಿಸ್ ಮಾಡಿಕೊಳ್ಳಬೇಡಿ. ಅವುಗಳನ್ನು ಈಗಲೂ ನೀವು ಕಲಿಯಬಹುದು.

6) ಪರೀಕ್ಷಾ ಕೇಂದ್ರದಲ್ಲಿ ಮೂರುಕಾಲು ಘಂಟೆ ಕುಳಿತು ಕೊಳ್ಳುವುದು ಬಹಳ ದೊಡ್ಡ ತಪಸ್ಸು. ಅದಕ್ಕೆ ಬೆಟ್ಟದಷ್ಟು ತಾಳ್ಮೆ ಬೇಕು. ಅದನ್ನು ಹೆಚ್ಚು ಮಾಡಲು ಮಾನಸಿಕವಾಗಿ ಸಿದ್ಧತೆ ಮಾಡಿ.

7) ನೀವೀಗ ದಿನಕ್ಕೆ ಕನಿಷ್ಠ ಒಂದೆರಡು ಗಂಟೆಗಳ ಕಾಲ ಬರೆಯುವುದನ್ನು ಅಭ್ಯಾಸ ಮಾಡಬೇಕು. ಇದರಿಂದ ಅಕ್ಷರ ಚಂದ ಆಗುತ್ತದೆ ಮತ್ತು ನಿಮ್ಮ ಸೈಕೊಮೋಟಾರ್ ಕೌಶಲವು ವೃದ್ಧಿ ಆಗುತ್ತದೆ ಮತ್ತು ನೆನಪಿನ ಶಕ್ತಿಯು ಜಾಸ್ತಿಯಾಗುತ್ತದೆ.

8) ಮೌನವು ಅತಿ ಹೆಚ್ಚು ಪ್ರಭಾವಶಾಲಿ ಮಾಧ್ಯಮ. ಪರೀಕ್ಷೆ ಸಮೀಪ ಬರುತ್ತಿದ್ದ ಹಾಗೆ ಹೆಚ್ಚು ಹೊತ್ತು ಮೌನ ಆಗಿರಿ. ಮೌನ ಪ್ರಾರ್ಥನೆಗಳು ಹೆಚ್ಚು ಶಕ್ತಿಶಾಲಿ.

9) ಬೆಳಗ್ಗೆ ಎದ್ದು ಸ್ವಲ್ಪ ಹೊತ್ತು Instrumental Music (ಸಿತಾರ್, ವೀಣೆ ಇತ್ಯಾದಿ) ಕೇಳುವುದು ನಿಮ್ಮ ಏಕಾಗ್ರತೆ ಹೆಚ್ಚು ಮಾಡಲು ಉತ್ತಮ ಅಭ್ಯಾಸ. ಏಕೆಂದರೆ ಸಂಗೀತಕ್ಕೆ ನಿಮ್ಮ ಮೆಮೊರಿ ಮತ್ತು ಏಕಾಗ್ರತೆ ಎರಡನ್ನೂ ಹೆಚ್ಚು ಮಾಡುವ ಶಕ್ತಿ ಇದೆ. ಮನಸ್ಸು ರಿಲಾಕ್ಸ್ ಮಾಡಲು ಕೂಡ ಮ್ಯೂಸಿಕ್ ಹೆಚ್ಚು ಅನುಕೂಲಕರ.

11) ನಿಮ್ಮ ಮೇಲೆ ಬೇರೆ ಯಾರಾದರೂ ಭರವಸೆಯನ್ನು ಇಡುವುದಕ್ಕಿಂತ ನಿಮ್ಮ ಮೇಲೆ ನೀವೇ ಹೆಚ್ಚು ಭರವಸೆ ಇಡುವುದು ಮುಖ್ಯ. ಅದು ಪಾಸಿಟಿವ್ ಥಿಂಕಿಂಗ್ ಮಾಡುವುದರಿಂದ ಸಾಧ್ಯ ಆಗುತ್ತದೆ. ‘ನನಗೆ ಖಂಡಿತ ಸಾಧ್ಯ ಇದೆ’ ಅನ್ನುವುದೇ ನಿಮ್ಮ ಯಶಸ್ಸಿನ ಬೀಜ ಮಂತ್ರ.
(ನಾಳೆಗೆ ಮುಂದುವರಿಯುವುದು)
✒️ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯತರಬೇತಿದಾರರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top