ದೆಹಲಿ : ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಶುಕ್ರವಾರ ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಇದರಿಂದ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರಿಗೆ ಭಾರಿ ಹಿನ್ನಡೆ ಉಂಟಾಗಿದೆ.
2019ರಲ್ಲಿನ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರು ತಪ್ಪಿತಸ್ಥ ಎಂದು ಗುರುವಾರ ತೀರ್ಪು ನೀಡಿದ್ದ ಸೂರತ್ ನ್ಯಾಯಾಲಯ, ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಜನಪ್ರತಿನಿಧಿ ಕಾಯ್ದೆ ಅನ್ವಯ ಎರಡು ವರ್ಷ ಶಿಕ್ಷೆಗೆ ಗುರಿಯಾದ ಕಾರಣಕ್ಕೆ ರಾಹುಲ್ ಗಾಂಧಿ ಅವರು ಲೋಕಸಭೆ ಸದಸ್ಯತ್ವ ಕಳೆದುಕೊಂಡಿದ್ದಾರೆ.
ಜನಪ್ರತಿನಿಧಿ ಕಾಯ್ದೆಯ ನಿಯಮದಂತೆ ರಾಹುಲ್ ಗಾಂಧಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಲೋಕಸಭೆ ಸಚಿವಾಲಯ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
2019ರಲ್ಲಿ ಕೋಲಾರದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ನಡೆಸುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು, ಎಲ್ಲ ಕಳ್ಳರ ಸರ್‌ನೇಮ್ ಕೂಡ ಮೋದಿ ಎಂದು ಇರುವುದು ಏಕೆ ಎಂಬುದಾಗಿ ಪ್ರಶ್ನಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ನೀರವ್ ಮೋದಿ ಹಾಗೂ ಲಲಿತ್ ಮೋದಿ ಅವರ ಹೆಸರನ್ನು ಉಲ್ಲೇಖಿಸಿದ್ದ ರಾಹುಲ್ ಗಾಂಧಿ, ಮೋದಿ ಉಪನಾಮದ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು.ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ವಿಧಿಸಿದ್ದರ ವಿರುದ್ಧ ಕಾಂಗ್ರೆಸ್ ಶುಕ್ರವಾರ ಬೆಳಿಗ್ಗೆಯಿಂದ ಬೃಹತ್ ಪ್ರತಿಭಟನೆಗಳನ್ನು ನಡೆಸಿತ್ತು. ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ನಾಯಕರನ್ನು ಬಂಧಿಸಲಾಗಿತ್ತು.