ದೆಹಲಿ : ಮೋದಿ ಕುಲನಾಮ ಹೊಂದಿರುವವರೆಲ್ಲ ಕಳ್ಳರು ಎಂಬರ್ಥ ಬರುವಂತೆ ಮಾಡಿದ ಭಾಷಣ ಕೊನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಸಂಸತ್ ಸದಸ್ಯತನಕ್ಕೆ ಕುತ್ತು ತಂದಿದೆ. ವಿಶೇಷ ಎಂದರೆ ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಯಾದ ಸಂಸದರ ಸದಸ್ಯತ್ವ ತಕ್ಷಣ ರದ್ದುಗೊಳಿಸಬೇಕೆಂಬ ಕೇಂದ್ರ ಸರಕಾರದ ಒಂದು ಸುಗ್ರೀವಾಜ್ಞೆಯನ್ನು ಪ್ರತಿಭಟಿಸಿ ರಾಹುಲ್ ಗಾಂಧಿ ಅದರ ಪ್ರತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಹರಿದೆಸೆದು ವೀರಾವೇಶ ಪ್ರದರ್ಶಿಸಿದ್ದರು. ಆಗ ಕಾಂಗ್ರೆಸಿನ ಯುವರಾಜನಾಗಿ ಕಂಗೊಳಿಸುತ್ತಿದ್ದ ರಾಹುಲ್ ಗಾಂಧಿಯ ಪತ್ರಿಕಾಗೋಷ್ಠಿಯ ಈ ವೀರಾವೇಶ ಆ ದಿನಗಳಲ್ಲಿ ಭಾರಿ ಸುದ್ದಿಯಾಗಿತ್ತು. ದೇಶವಿಡೀ ಕಾಂಗ್ರೆಸಿಗರು ರಾಹುಲ್ ಗಾಂಧಿಯ ಗುಣಗಾನ ಮಾಡಿದ್ದರು. ಆಗ ಅಧಿಕಾರದಲ್ಲಿದ್ದದ್ದು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ. ಯಾವ ನಿಯಮವನ್ನು ಎತ್ತಿ ಹಿಡಿಯಲು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ತನ್ನದೇ ಸರಕಾರದ ಆದೇಶದ ಪ್ರತಿಯನ್ನು ಹರಿದು ಹಾಕಿ ಹೀರೊ ಆಗಿದ್ದರೋ ಅದೇ ಆದೇಶವೇ ಇಂದು ಅವರ ಸಂಸತ್ ಸದಸ್ಯತ್ವಕ್ಕೆ ಮುಳ್ಳಾಯಿತು ಎನ್ನುವುದು ವಿಪರ್ಯಾಸ. ತಕ್ಷಣ ಅನರ್ಹಗೊಳಿಸುವುದನ್ನು ತಪ್ಪಿಸಲು ಯುಪಿಎ ಹೊರಡಿಸಿದ್ದ ಸುಗ್ರೀವಾಜ್ಞೆ ಪ್ರತಿ ಹರಿದು ಹಾಕಿದ್ದ ರಾಹುಲ್ ಗಾಂಧಿಗೆ ಈಗ ಅದೇ ಸುಪ್ರೀಂ ಕೋರ್ಟ್ ತೀರ್ಪಿನ ಅಂಶ ಮುಳುವಾಯಿತು.
ಲಿಲ್ಲಿ ಥಾಮಸ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ರದ್ದುಗೊಂಡ ಅಂಶವನ್ನು ತಡೆಯುವುದಕ್ಕೆ ಅಂದಿನ ಯುಪಿಎ ಸರ್ಕಾರ ಒಂದು ಸುಗ್ರೀವಾಜ್ಞೆ ಪ್ರಕಟಿಸಿತ್ತು. ಈ ಸುಗ್ರೀವಾಜ್ಞೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದ ರಾಹುಲ್ ಗಾಂಧಿ, ಅದರ ಪ್ರತಿಯನ್ನು ಹರಿದು ಹಾಕಿ ದೇಶದ ಗಮನ ಸೆಳೆದಿದ್ದರು.
ಚುನಾಯಿತ ಪ್ರತಿನಿಧಿ ಯಾವುದೇ ಅಪರಾಧಕ್ಕಾಗಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆಗೆ ಒಳಗಾದರೆ ಅಂತಹ ವ್ಯಕ್ತಿಗೆ ಜನಪ್ರತಿನಿಧಿ ಕಾಯಿದೆ 1951ರ ಪ್ರಕಾರ ತತ್‌ಕ್ಷಣ ಅನರ್ಹಗೊಳಿಸಬೇಕು. ಅನರ್ಹತೆಯಿಂದ ಮೂರು ತಿಂಗಳ ರಕ್ಷಣೆಯನ್ನು ನೀಡುವ ಕಾಯಿದೆಯ ಒಂದು ನಿಬಂಧನೆಯನ್ನು “ಅಲ್ಟ್ರಾವೈರಸ್” ಎಂದು ಬಣ್ಣಿಸಿ 2013ರಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.
ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪರಿಣಾಮವನ್ನು ತಗ್ಗಿಸುವ ಸಲುವಾಗಿ ಅಂದಿನ ಯುಪಿಎ ಸರ್ಕಾರ, ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8(4) ಅನ್ನು ಉಳಿಸಲು ಸುಗ್ರೀವಾಜ್ಞೆ ಹೊರಡಿಸಿತ್ತು. ಸಂಸತ್ ಸದಸ್ಯರೂ ಸೇರಿ ಚುನಾಯಿತ ಜನಪ್ರತಿನಿಧಿಗಳು ಅಪರಾಧಿ ಎಂದು ಘೋಷಿತರಾದರೂ ಮೂರು ತಿಂಗಳ ತನಕ ಅನರ್ಹರಾಗದಂತೆ ತಡೆಯುವ ಅಂಶವನ್ನು ಈ ಸೆಕ್ಷನ್ ಹೊಂದಿದೆ.
ಆದರೆ ರಾಹುಲ್ ಗಾಂಧಿ 2013ರ ಸೆ.28ರಂದು ತನ್ನದೇ ಯುಪಿಎ ಸರ್ಕಾರದ ಈ ಸುಗ್ರೀವಾಜ್ಞೆಯನ್ನು ʻಕಂಪ್ಲೀಟ್ ನಾನ್ಸೆನ್ಸ್ʼ ಎಂದು ಟೀಕಿಸಿ, ರದ್ದುಗೊಳಿಸಬೇಕು ಎಂದು ಸಾರ್ವಜನಿಕವಾಗಿ ಆಗ್ರಹಿಸಿ ಅದರ ಪ್ರತಿಯನ್ನು ಹರಿದು ಹಾಕಿದ್ದರು.
ಆದರೆ ಮೋದಿ ಕುಲನಾಮ ಪ್ರಕರಣದಲ್ಲಿ ನ್ಯಾಯಾಲಯ ಸ್ಪಷ್ಟ ತೀರ್ಪ ನೀಡಿ ರಾಹುಲ್ ಗಾಂಧಿ ಅಪರಾಧಿ ಎಂದು ತೀರ್ಪು ನೀಡಿದೆ. ನಿಯಮದ ಅನುಸಾರ ಅವರ ಸದಸ್ಯತ್ವ ಅನರ್ಹತೆಗೊಳ್ಳಬೇಕು. ಆ ಕಾನೂನು ವಿಧಿಯನ್ನು ಸರಕಾರ ಈಗ ಪೂರೈಸಿದೆ.
ಕಾಂಗ್ರೆಸ್‌ನ ಕಾನೂನು ತಂಡ ತೀರ್ಪಿಗೆ ಪ್ರತಿತಂತ್ರ ಹೂಡಲು ರಣತಂತ್ರ ರೂಪಿಸುತ್ತಿರುವಾಗಲೇ ಸರಕಾರ ಕಾನೂನಿನ ಅಸ್ತ್ರವನ್ನು ಪ್ರಯೋಗಿಸಿದೆ.
ಈಗ ಸ್ಪೀಕರ್ ತೀರ್ಮಾನವನ್ನು ಕಾಂಗ್ರೆಸ್ ಯಾವ ರೀತಿಯಲ್ಲೂ ಎದುರಿಸಲಾಗದ ಸ್ಥಿತಿಯಲ್ಲಿದೆ. ಒಂದು ವೇಳೆ ವಿರೋಧಿಸಿದರೆ ರಾಹುಲ್ ಗಾಂಧಿಯ ಅಂದಿನ ವೀರಾವೇಶವೆಲ್ಲ ಪ್ರಚಾರಕ್ಕಾಗಿ ಮಾಡಿದ ನೌಟಂಕಿ ಎಂದು ತಾನೇ ಒಪ್ಪಿಕಪಳ್ಳಬೇಕಾಗುತ್ತದೆ.
ರಾಹುಲ್‌ಗೆ ಮುಳುವಾದ ಲೇವಡಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2019ರ ಲೋಕಸಭೆ ಚುನಾವಣೆಗೆ ಮೊದಲು ಕೋಲಾರದಲ್ಲಿ ಪ್ರಚಾರ ಸಭೆಯಲ್ಲಿ ಎಲ್ಲ ಕಳ್ಳರೂ ಮೋದಿ ಎನ್ನುವ ಸರ್‌ನೇಮ್ ಹೊಂದಿರುವುದು ಹೇಗೆ ಎಂದು ಲೇವಡಿ ಮಾಡಿದ್ದರು. ಇದರ ವಿರುದ್ದ ಗುಜರಾತ್‌ನ ಮಾಜಿ ಸಚಿವ, ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಪೊಲೀಸ್ ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್ 500ರ ಪ್ರಕಾರ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿತ್ತು.