ಪುತ್ತೂರು: ತಾಲೂಕಿನ ಮುರ ಗ್ರಾಮೀಣ ಒಕ್ಕಲಿಗ ಗೌಡ ಸಮುದಾಯ ಭವನ ಸೇವಾ ಸಂಘದ ವತಿಯಿಂದ ಕಾರ್ಯಾಚರಿಸುತ್ತಿರುವ ಮುರ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡದ ಉದ್ಘಾಟನಾ ಸಮಾರಂಭ ಮಾ.27 ಸೋಮವಾರ ಬೆಳಿಗ್ಗೆ 10.45 ಕ್ಕೆ ನಡೆಯಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಬಾಬು ಗೌಡ ಕಲ್ಲೇಗ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಮಾರು 40 ಲಕ್ಷ ರೂ. ಮೇಲಂತಸ್ತಿನ ಕಟ್ಟಡಕ್ಕೆ ವೆಚ್ಚ ತಗಲಿದ್ದು, ಕಾಮಗಾರಿ ಸಂಪೂರ್ಣಗೊಂಡಿದೆ. ಮೇಲಂತಸ್ತು 2800 ಚದರ ಅಡಿ ಹೊಂದಿದ್ದು, 450 ರಿಂದ 500 ಆಸನದ ಸಭಾಭವನ ಜತೆಗೆ ವೇದಿಕೆಯನ್ನೊಳಗೊಂಡಿದೆ. ಮುಂದಿನ ದಿನಗಳಲ್ಲಿ ಮದುವೆ ಮುಂತಾದ ಸಮಾರಂಭಗಳನ್ನು ಮೇಲಂತಸ್ತಿನ ಸಭಾಭವನದಲ್ಲಿ ಹಮ್ಮಿಕೊಂಡು ಕೆಳಅಂತಸ್ತನ್ನು ಊಟೋಪಚಾರಕ್ಕೆ ಬಳಸಲಾಗುವುದು ಎಂದು ತಿಳಿಸಿದರು.
ಬೆಳಿಗ್ಗೆ 6.30ಕ್ಕೆ ಗಣಪತಿ ಹವನ, 8.30 ಕ್ಕೆ ಶ್ರೀ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ಬಳಿಕ ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಸಭಾಭವನ ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ. ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಸಂಜೀವ ಮಠಂದೂರು, ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್, ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ಮಹೋಹರ ಡಿ.ವಿ., ಸುಬ್ರಹ್ಮಣ್ಯ ಉಪವಿಭಾಗದ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಸಮಿತಿ ಕಾರ್ಯದರ್ಶಿ ವೆಂಕಟ್ರಮಣ ಗೌಡ ಕೋಡಿಮೂಲೆ, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಮುಂಗ್ಲಿಮನೆ, ಖಜಾಂಚಿ ಕಲ್ಲೇಗ ನಾರಾಯಣ ಗೌಡ, ಸದಸ್ಯ ವಸಂತ ಗೌಡ ನೆಕ್ಕರೆ ಉಪಸ್ಥಿತರಿದ್ದರು.