ಕಡಬ: ನನ್ನ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದಲ್ಲಿ ಮೂಲಭೂತ ವ್ಯವಸ್ಥೆಗಳನ್ನು ಅಳವಡಿಸಿ ಆಮೂಲಾಗ್ರ ಬದಲಾವಣೆ ಮಾಡಲಾಗಿದ್ದು, ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ.ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
ಕೊಯಿಲ ಪಶು ವೈದ್ಯಕೀಯ ಕಾಲೇಜು ಕಟ್ಟಡ ಹಾಗೂ ಗೊಶಾಲೆಯನ್ನು ಲೋಕಾರ್ಪಣೆ ಮಾಡಿ ತಾಲೂಕು ಪಂಚಾಯಿತಿ ಕಟ್ಟಡ ಬಳಿ ನಡೆದ ಸಭೆಯಲ್ಲಿ ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ಸವಲತ್ತು ವಿತರಣೆ ನೆರವೇರಿಸಿ ಅವರು ಮಾತನಾಡಿದರು.
ನಾನು ಶಾಸಕನಾದ ಮೇಲೆ ಇಲ್ಲಿಯ ತನಕ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿನ ಸಮಸ್ಯೆಗಳು, ಟೀಕೆ ಟಿಪ್ಪಣಿಗಳು, ಅವಮಾನಗಳನ್ನು ಎದುರಿಸಿ ಹೊಣೆಗಾರಿಕೆಯಿಂದ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ ಎಂದ ಅವರು, ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕ್ಷೇತ್ರದ ಹಳ್ಳಿಗಳ ರಸ್ತೆಗಳು ಕಾಂಕ್ರೀಟಿಕರಣಗೊAಡು ಸುಸಜ್ಜಿತವಾಗಿವೆ, ಕ್ಷೇತ್ರದ ಬಹುತೇಕ ಮುಳುಗು ಸೇರತುವೆಗಳಿಗೆ ಮುಕ್ತಿ ನೀಡಲಾಗಿದೆ. ಕೇಂದ್ರ ಸರಕಾರದ ಜಲಜೀವನ್ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ ಗ್ರಾಮೀಣ ಭಾಗದ ಜನರಿಗೆ ಶುದ್ದ ಕುಡಿಯುವ ನೀರು ಒದಗಿಸಲಾಗುತ್ತಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆಗೆ ನದಿಗಳಲ್ಲಿ, ತೋಡುಗಳಲ್ಲಿ ಅಣೆಕಟ್ಟೆಗಳನ್ನು ನಿರ್ಮಾಣ ಮಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಕ್ಷೇತ್ರದ ವಿವಿದೆಡೆ ಸಬ್‌ಸ್ಟೇಷನ್‌ಗಳನ್ನು ನಿರ್ಮಾಣ ಮಾಡಿ ವಿದ್ಯುತ್ ಸಮಸ್ಯೆಗಳನ್ನು ನೀಗಿಸಲಾಗಿದೆ. ಆರೋಗ್ಯ, ಶಿಕ್ಷಣ, ವಸತಿ ಮುಂತಾದ ಮೂಲಭೂತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಲಾಗಿದೆ. ಕಡಬವನ್ನು ತಾಲೂಕು ಎಂದು ಘೋಷಣೆ ಮಾಡಿದ ಬಳಿಕ ಹಂತಹಂತವಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ದೇಶದಲ್ಲಿ ಸ್ವಾತಂತ್ಯç ಬಂದ ಬಳಿಕ ಕೇವಲ ಹದಿನಾಲ್ಕು ವರ್ಷ ಆಡಳಿತ ನಡೆಸಿದ ನರೇಂದ್ರ ಮೋದಿ ಸರಕಾರ ದೇಶದ ಚಿತ್ರಣವನ್ನೇ ಬದಲಿಸಿದೆ. ಇಡೀ ವಿಶ್ವವೇ ಭಾರತವನ್ನು ಒಪ್ಪಿಕೊಂಡು ಅಪ್ಪಿಕೊಂಡಿದೆ. ವಿಶ್ವದ ಮೂರನೇ ಅಭಿವೃದ್ಧಿ ಹೊಂದಿದ ರಾಷ್ಟçವಾಗಿ ಭಾರತ ಹೊರಹೊಮ್ಮಿದೆ. ನಾವು ಇಂದು ಬದಲಾದ ಭಾರತವನ್ನು ನೋಡುತ್ತಿದೇವೆ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನದ ಮೇಲೆ ದೊಡ್ಡ ಮಟ್ಟದ ಒಳ್ಳೆಯ ಪರಿಣಾಮ ಬೀರಿದೆ, ದೇಶದ ಅಭಿವೃದ್ಧಿಯ ವೇಗಕ್ಕೆ ಕರ್ನಾಟಕದಲ್ಲಿ ಕೂಡಾ ಪ್ರಗತಿಯ ಸಾಥ್ ಸಿಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|ಕುಮಾರ್ ಮಾತನಾಡಿ ಸಾಮಾನ್ಯ ಜನ ಆಡಳಿತ ವ್ಯವಸ್ಥೆಯ ಸುತ್ತ ಸುತ್ತುವ ಬದಲು ಆಡಳಿತ ವ್ಯವಸ್ಥೆಯೇ ಜನರ ಸುತ್ತ ಸುತ್ತಬೇಕು ಎನ್ನುವ ನಿಟ್ಟಿನಲ್ಲಿ ಸರಕಾರ ಚಿಂತನೆ ಮಾಡಿ ಅನುಷ್ಠಾನ ಮಾಡುತ್ತಿದೆ ಎಂದರು.
ವೇದಿಕೆಯಲ್ಲಿ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವದ್ಯಾನಿಲಯ ಬೀದರ್ ಇಲ್ಲಿನ ಕುಲಪತಿ ಡಾ|ಕೆ.ಸಿ ವೀರಣ್ಣ , ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೆಶಕ ಡಾ|ಅರುಣ್ ಕುಮಾರ್ ಶೆಟ್ಟಿ ಎನ್, ಮೀನುಗಾರಿಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥಾರಾಮ, ಕರ್ನಾಟಕ ಗೃಹಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಜಯಕುಮಾರ್, ಪಂಚಾಯತ್‌ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಭರತ್ ಬಿ.ಎಂ, ಸುಳ್ಯ ತಹಸೀಲ್ದಾರ್ ಮಂಜುನಾಥ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಕಾಲೇಜಿನ ಡೀನ್ ಡಾ|ರಂಗನಾಥ್, ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಕೀರ ಮೂಲ್ಯ, ಕಡಬ ತಾಲೂಕು ಪಂಚಾಯಿತಿ ಸಹಾಯಕ ನಿರ್ದೆಶಕ ಚೆನ್ನಪ್ಪ ಗೌಡ ಕಜೆಮೂಲೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಡಬ ಉಪತಹಸೀಲ್ದಾರ್ ಮನೋಹರ ಕೆ.ಟಿ ಪಲಾನುಭವಿಗಳ ಪಟ್ಟಿ ವಾಚಿಸಿದರು.ಕಟ್ಟಡಗಳ ವಾಸ್ತುಶಿಲ್ಪಿ ಯೋಗೇಶ್ ಚಂದ್ರಾದರ್, ಕಟ್ಟಡ ನಿರ್ಮಾಣ ಕಾಮಗಾರಿ ನಿರ್ವಹಣೆ ಮಾಡಿದ ಪ್ರದೀಪ್ ಶೆಟ್ಟಿ, ಅಬ್ದುಲ್ ಆಸಿಫ್, ಮಂಜುನಾಥ್ ಮತ್ತಿತರರನ್ನು ಸನ್ಮಾನಿಸಲಾಯಿತು. ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿದರು. ಉಪತಹಸೀಲ್ದಾರ್ ಗೋಪಲ್ ಕಲ್ಲುಗುಡ್ಡೆ ವಂದಿಸಿದರು. ಪತ್ರಕರ್ತ ನಾಗರಾಜ್ ಎನ್.ಕೆ ಹಾಗೂ ಶಿಕ್ಷಕ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.
ತಾಲೂಕು ಆಡಳಿತ ಸೌಧ, ತಾಲೂಕು ಪಂಚಾಯಿತಿ ಹಾಗೂ ಕೊಯಿಲ ಪಶು ವೈದ್ಯಕೀಯ ಕಾಲೇಜಿನ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭ ಹಾಗೂ ಸುಬ್ರಹ್ಮಣ್ಯ ದೇವಸ್ಥಾನದ ಮೂರನೇ ಹಂತದ ಮಾಸ್ಟರ್ ಪ್ಲಾನ್ ಕಾಮಗಾರಿಯ ಪಾರಂಪರಿಕ ರಥಬೀದಿ ಮತ್ತು ಇತರ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮವೂ ನಡೆಯಿತು.