ಕರಾವಳಿ ಕರ್ನಾಟಕದಲ್ಲಿ ಇಂದು ಕೆ.ಎಸ್. ಚಿತ್ರಾ ಹಾಡ್ತಾರೆ
ಕುಂದಾಪುರದಲ್ಲಿ ಸಂಗೀತದ ಸಾವಿರಾರು ಅಭಿಮಾನಿಗಳ ನಡುವೆ ಇಂದು ದಕ್ಷಿಣ ಭಾರತದ ಕೋಗಿಲೆ ಕೆ. ಎಸ್. ಚಿತ್ರಾ ಹಾಡುತ್ತಾರೆ ಅನ್ನುವಾಗ ಇಡೀ ಕರಾವಳಿ ಕರ್ನಾಟಕ ರೋಮಾಂಚನ ಪಡುತ್ತಾ ಇದೆ. ಕುಂದಾಪುರದ ವೈಭವೋಪೇತವಾದ ಒಪೆರಾ ಯುವಾ ಮೆರಿಡಿಯನ್ ಸಭಾಂಗಣದಲ್ಲಿ ಇಂದು ಸಂಜೆ ಅವರಿಗೆ ಎಸ್. ಜಾನಕಿ ಅಮ್ಮನ ಹೆಸರಿನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಆಗಲಿದೆ. ಸಂಗೀತದ ಅಭಿಮಾನಿ ಹೃದಯಗಳಿಗೆ ಎರಡೂ ವಿಶೇಷವೇ. ಕೆಲವೇ ವರ್ಷಗಳ ಹಿಂದೆ ಎಸ್. ಜಾನಕಿ ಅಮ್ಮ ಹೃದಯ ತುಂಬಿ ಹಾಡಿದ್ದ ವೇದಿಕೆಯಲ್ಲಿ ಈ ಬಾರಿ ಅವರದೇ ಉತ್ತರಾಧಿಕಾರಿ ಕೆ.ಎಸ್. ಚಿತ್ರಾ ಹಾಡುತ್ತಿದ್ದಾರೆ.
ಕೋಟಾದ ಮನಸ್ಮಿತ ಫೌಂಡೇಶನ್ , ಮಣೂರಿನ ಗೀತಾನಂದ ಫೌಂಡೇಶನ್ ಹಾಗೂ ಇನ್ನಿತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಂಗೀತ ಸಂಜೆ ಕಾರ್ಯಕ್ರಮಗಳು ವೇದಿಕೆ ಏರಲಿವೆ.
ಅವರ ಮಾಧುರ್ಯಕ್ಕೆ ಒಲಿದಿವೆ ಆರು ರಾಷ್ಟ್ರ ಪ್ರಶಸ್ತಿಗಳು
ಹಿನ್ನೆಲೆ ಗಾಯಕಿಯರಲ್ಲಿ ಬರೋಬ್ಬರಿ ಹತ್ತು ರಾಷ್ಟ್ರಪ್ರಶಸ್ತಿ ಗೆದ್ದಿರುವ ಲತಾ ಮಂಗೇಷ್ಕರ್ ಅವರನ್ನು ಬಿಟ್ಟರೆ ಅತಿ ಹೆಚ್ಚು ರಾಷ್ಟ್ರ ಪ್ರಶಸ್ತಿ ಪಡೆದಿರುವ ಕೀರ್ತಿ ಚಿತ್ರಾ ಅವರಿಗೆ ಸಲ್ಲುತ್ತದೆ. ಆಕೆ ಆರು ರಾಷ್ಟ್ರಪ್ರಶಸ್ತಿಗಳನ್ನು ಈಗಾಗಲೇ ಗೆದ್ದಾಗಿದೆ.
1979ರಿಂದಲೂ ನಿರಂತರವಾಗಿ ಹಿನ್ನೆಲೆ ಗಾಯಕಿಯಾಗಿ ಹಾಡುತ್ತಿರುವ ಅವರು ಈವರೆಗೆ 25 ಸಾವಿರ ಹಾಡುಗಳನ್ನು ಎಲ್ಲ ಭಾರತೀಯ ಭಾಷೆಗಳಲ್ಲಿ ಮತ್ತು ವಿದೇಶಿ ಭಾಷೆಗಳಲ್ಲಿ ಹಾಡಿ ಆಗಿದೆ. ಒಂಬತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳು ಆಕೆಯ ಶೋಕೇಸಲ್ಲಿ ಇವೆ. ಆಕೆ ಹಿನ್ನೆಲೆ ಹಾಡುಗಳನ್ನು ಹಾಡಿ ಪಡೆದಿರುವ ವಿವಿಧ ರಾಜ್ಯ ಪ್ರಶಸ್ತಿಗಳ ಸಂಖ್ಯೆಯೇ 36. ಅದು ಇನ್ನೊಂದು ದಾಖಲೆ. ಅದರಲ್ಲಿಯೂ ಕೇರಳ ಸರಕಾರದ ರಾಜ್ಯ ಪ್ರಶಸ್ತಿಗಳ ಸಂಖ್ಯೆಯೇ 16. ತೆಲುಗು ರಾಜ್ಯ ಪ್ರಶಸ್ತಿಗಳು 11. ತಮಿಳುನಾಡು ರಾಜ್ಯದ್ದು 4 ಮತ್ತು ಕರ್ನಾಟಕದ 3.
ಸಂಗೀತದ ಹಾದಿಯಲ್ಲಿ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳು ಕೂಡ ಅವರಿಗೆ ದೊರೆತಿವೆ.
ಯೇಸುದಾಸ್ ಅವರೊಂದಿಗೆ ಅತಿ ಹೆಚ್ಚು ಯುಗಳ ಗೀತೆಗಳನ್ನು ಹಾಡಿದ ದಾಖಲೆಯೂ ಆಕೆಯ ಹೆಸರಲ್ಲಿ ಇದೆ. ಮಲಯ, ಲಾಟಿನ್, ಅರೇಬಿಕ್, ಸಿಂಹಳಿ, ಇಂಗ್ಲಿಷ್, ಫ್ರೆಂಚ್ ಭಾಷೆಯ ಹಾಡುಗಳನ್ನು ಕೂಡ ಆಕೆ ಹಾಡಿದ್ದಾರೆ! ಯಾವ ಭಾಷೆಯ ಹಾಡಾದರೂ ಸಾಹಿತ್ಯ ಮತ್ತು ಭಾವ ಅರ್ಥ ಮಾಡಿಕೊಂಡು ಸಲೀಸಾಗಿ ಹಾಡುವ ಶಕ್ತಿಯು ಆಕೆಗೆ ಒಲಿದಿದೆ. ಹಾಡಿದ ಅಷ್ಟೂ ಹಾಡುಗಳನ್ನು ಒಂದೇ ಟೇಕ್‌ನಲ್ಲಿ ಹಾಡಿ ಮುಗಿಸಿದ ಕೀರ್ತಿ ಕೂಡ ಆಕೆಗಿದೆ.
ಚಿತ್ರಾ ಎಂಬ ಮಾಧುರ್ಯದ ಎರಕ
1963ರ ಜುಲೈ 27ರಂದು ಕೇರಳದ ತಿರುವನಂತಪುರಂನಲ್ಲಿ ಜನ್ಮತಾಳಿದ ಕೃಷ್ಣನ್ ನಾಯರ್ ಶಾಂತಕುಮಾರಿ ಚಿತ್ರಾ ಮುಂದೆ ಕೆ. ಎಸ್. ಚಿತ್ರಾ ಎಂಬ ಜನಪ್ರಿಯ ಹೆಸರಿನಿಂದ ಕೇರಳದ ಕೋಗಿಲೆಯಾಗಿ, ದಕ್ಷಿಣ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಮಿಂಚಿದ್ದು ನಿಜಕ್ಕೂ ಅದ್ಭುತ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ದಶಕಗಳ ಕಾಲ ಅಭ್ಯಾಸ ಮಾಡಿ ಸಂಗೀತ ಕಚೇರಿ ಕೂಡ ಕೊಟ್ಟಿರುವ ಚಿತ್ರಾ ಮುಂದೆ ಆರಿಸಿಕೊಂಡದ್ದು ಹಿನ್ನೆಲೆ ಸಂಗೀತ ಕ್ಷೇತ್ರವನ್ನು. ಆಕೆ ಕರ್ನಾಟಕ ಮ್ಯೂಸಿಕ್‌ನಲ್ಲಿ ಎಂಎ ಪದವಿ ಕೂಡ ಪಡೆದಿದ್ದಾರೆ. ಶಾಸ್ತ್ರೀಯ ಸಂಗೀತದ ಬಲವಾದ ಬೇಸ್ ಇರುವ ಕಾರಣ ಯಾವ ವಿಧವಾದ ಹಾಡನ್ನಾದರೂ ಲೀಲಾಜಾಲವಾಗಿ ಹಾಡುವ ಶಕ್ತಿ ಆಕೆಗೆ ಒಲಿದಿದೆ.
ಭಕ್ತಿ ಸಂಗೀತ, ಲಘು ಸಂಗೀತ, ಪಾಶ್ಚಾತ್ಯ ಸಂಗೀತ, ಯುಗಳ ಗೀತೆ, ಸೋಲೋ, ಜೋಗುಳದ ಹಾಡು, ಕ್ಯಾಬರೆ ಹಾಡು, ಒಂದೇ ಉಸಿರಲ್ಲಿ ಹಾಡಿ ಮುಗಿಸುವ ಬ್ರೆತ್‌ಲೆಸ್ ಹಾಡು… ಯಾವ ಹಾಡಾದರೂ ಚಿತ್ರಾ ಹಾಡಿದರೆಂದರೆ ಅದರಲ್ಲಿ ಅವರದ್ದೇ ಒಂದು ಸಿಗ್ನೇಚರ್ ಇರುತ್ತದೆ. ಎಷ್ಟು ದೂರದಲ್ಲಿ ನಿಂತು ಕೇಳಿದರೂ ಇದು ಚಿತ್ರಾ ಅವರದ್ದೇ ಧ್ವನಿ ಎಂದು ಖಚಿತವಾಗಿ ಹೇಳುವಷ್ಟು ಸಿಗ್ನೇಚರ್ ಧ್ವನಿ ಆಕೆಗೆ ಇದೆ ಅಂದರೆ ಅದು ಅತಿಶಯೋಕ್ತಿ ಅಲ್ಲ. ದೇಶ ವಿದೇಶಗಳಲ್ಲಿ ಎಲ್ಲೇ ಯೇಸುದಾಸ್ ಮತ್ತು ಬಾಲು ಸರ್ ಅವರ ಲೈವ್ ರಸಮಂಜರಿ ಕಾರ್ಯಕ್ರಮ ಆದರೂ ಚಿತ್ರಾ ಇರಬೇಕು ಎನ್ನುವ ಅಘೋಷಿತ ನಿಯಮ ಆಗಿತ್ತು ಎಂದರೆ ಅದು ಚಿತ್ರಾ ತಾಕತ್ತು.
ಮಗಳನ್ನು ಕಳೆದುಕೊಂಡ ನೋವು
ಒಬ್ಬ ಯಶಸ್ವಿ ಉದ್ಯಮಿಯನ್ನು ಮದುವೆ ಆಗಿರುವ ಚಿತ್ರಾ ಅವರಿಗೆ ಹುಟ್ಟಿದ ಒಬ್ಬಳೇ ಪ್ರೀತಿಯ ಮಗಳು ನಂದನಾ. ಆಕೆ ಡೌನ್ ಸಿಂಡ್ರೋಮ್ ಮಗು ಎಂದು ವೈದ್ಯರು ಹೇಳಿದಾಗ ಚಿತ್ರಾ ಅರ್ಧ ಭೂಮಿಗೆ ಇಳಿದು ಹೋಗಿದ್ದರು. ಆದರೂ ಆ ಮಗುವನ್ನು ಪ್ರೀತಿ ಮಾಡಿದರು. ಮುಂದೆ ಅವರು ಒಮ್ಮೆ ಎ.ಆರ್. ರೆಹಮಾನ್ ಸಂಗೀತ ಶೋದಲ್ಲಿ ಹಾಡುತ್ತ ಇರುವಾಗ ಬಿರುಗಾಳಿಯಂತೆ ಬಂದಿತ್ತು ಮಗಳ ಸಾವಿನ ಸುದ್ದಿ. ಆ ಮಗು ನೀರಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿತ್ತು. ಈ ನೋವನ್ನು ಮರೆಯಲು ಚಿತ್ರಾ ಅವರಿಗೆ ಈವರೆಗೆ ಸಾಧ್ಯವೇ ಆಗಲಿಲ್ಲ. ಈಗಲೂ ವೇದಿಕೆಯಲ್ಲಿ ತನ್ಮಯವಾಗಿ ಹಾಡುತ್ತಿರುವ ಸಂದರ್ಭದಲ್ಲಿ ಕೆಲವೊಮ್ಮೆ ಆಕೆಯ ಗಲ್ಲದ ಮೇಲೆ ಕಣ್ಣೀರು ಸುರಿಯುವುದು ಆ ತಾಯಿಯ ಹೃದಯವೇ. ಆಕೆಯ ಹೃದಯದಲ್ಲಿ ಇಂದಿಗೂ ಮಗಳನ್ನು ಕಳೆದುಕೊಂಡ ನೋವಿದೆ.
ಕನ್ನಡದಲ್ಲಿ ಆಕೆ ಹಾಡಿದ ಅಷ್ಟೂ ಹಾಡುಗಳು ಹಿಟ್ ಆಗಿವೆ
ಆಕೆ ಅತಿ ಹೆಚ್ಚು ಹಾಡುಗಳನ್ನು ಹಾಡಿದ್ದು ಮಲಯಾಳಂ ಭಾಷೆಯಲ್ಲಿ. ಈಗಲೂ ಕೇರಳದಲ್ಲಿ ಆಕೆ ಅತಿ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ. ಯೇಸುದಾಸ್ ಅವರ ಗಂಧರ್ವ ಕಂಠಕ್ಕೆ ಒಪ್ಪುವಂತಹ ಏಕೈಕ ಧ್ವನಿ ಎಂದರೆ ಅದು ಚಿತ್ರಾ ಎನ್ನುವುದು ಕೇರಳದ ಪರಂಪರೆಯೇ ಆಗಿದೆ. ತೆಲುಗು ಭಾಷೆಯಲ್ಲಿ ಎಸ್ಪಿ ಬಾಲು ಜತೆ ಕೂಡ ಆಕೆ ಅಷ್ಟೇ ನವಿರಾಗಿ ಹಾಡಿದ್ದಾರೆ. ಕನ್ನಡದಲ್ಲಿ ಹಂಸಲೇಖ ಸಂಗೀತ ಕೊಟ್ಟಿರುವ ಹೆಚ್ಚಿನ ಹಾಡುಗಳಲ್ಲಿ ಆಕೆ ಹಾಡಿದ್ದಾರೆ.
ಕನ್ನಡದಲ್ಲಿ ಆಕೆ ಈಗಾಗಲೇ ಸಾವಿರಾರು ಹಾಡುಗಳನ್ನು ಹಾಡಿ ಆಗಿದೆ. ಅದರಲ್ಲಿ ಹೆಚ್ಚಿನ ಹಾಡುಗಳು ಭಾರಿ ಜನಪ್ರಿಯತೆ ಪಡೆದಿವೆ. ಒಂದಕ್ಷರ ಸಾಹಿತ್ಯದ ದೋಷವಿಲ್ಲದೆ, ಜಿನುಗುವ ಭಾವದ ಜತೆಗೆ ಆಕೆ ಹಾಡಿದರೆ ಕನ್ನಡಿಗರು ಆ ಮಾಧುರ್ಯಕ್ಕೆ ಮನ ಸೋಲುತ್ತಾರೆ.
ಚಿತ್ರಾ ಹಾಡಿರುವ ಮತ್ತು ನನಗೆ ತುಂಬ ಇಷ್ಟವಾದ 25 ಕನ್ನಡದ ಹಾಡುಗಳ ಗುಚ್ಛವು ಇಲ್ಲಿದೆ.
1) ತುಂತುರು ಅಲ್ಲಿ ನೀರ ಹಾಡು…
2) ಗಡಿಬಿಡಿ ಗಂಡ ನೀನು…
3) ಮುತ್ತು ಮುತ್ತು ನೀರ ಹನಿಯು.
4) ಅಂತೂ ಇಂತೂ ಪ್ರೀತಿ ಬಂತು…
5) ಸೇವಂತಿಯೇ ಸೇವಂತಿಯೇ…
6) ನಧೀಮ್ ತೋಮ್ ತನಾ…
7) ಒಂದೇ ಉಸಿರಂತೆ ಇಂದು ನಾನು ನೀನು…
8) ಏಳು ಶಿವಾ ಏಳು ಶಿವಾ ನಿನಗೆ ಸುಪ್ರಭಾತ…
8) ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ…
9) ನನ್ನ ಪ್ರೀತಿಯ ದೇವತೆಯು ಬಳಿ ಬಂದಳು…
10) ಕೋಟಿ ಪಲ್ಲವಿ ಹಾಡಿದ…
11) ಮಡಿಕೇರಿ ಸಿಪಾಯಿ…
12) ತಿಂಗಳ ಬೆಳಕಿನ ಅಂಗಳದಲ್ಲಿ…
13) ಹಂಸವೆ ಹಂಸವೇ…
14) ಕುಹೂ ಕುಹೂ ಕೋಗಿಲೆ…
15) ಆಹಾ ಎಂಥಾ ಆ ಕ್ಷಣ…
16) ಪುಟ್ಟಮಲ್ಲಿ ಪುಟ್ಟಮಲ್ಲಿ ಕೇಳು ನೀನಿಲ್ಲಿ…
17) ನೆನಪುಗಳ ಮಾತು ಮಧುರ…
18) ಯಜಮಾನ ಯಜಮಾನ…
19) ಈ ಪ್ರೀತಿಯ ಮರೆತೂ…
20) ಕಡಲೋ ಕಡಲೋ…
21) ಎಲ್ಲಿಂದ ಆರಂಭವೊ…
22) ಯಾಮಿನಿ ಯಾರಮ್ಮ ನೀ ಯಾಮಿನಿ…
23) ಚೋರಿಯಾಗಿದೆ ಈ ದಿಲ್…
24) ನನ್ನವಳು ನನ್ನವಳು…
25) ಕಮಾನು ಡಾರ್ಲಿಂಗ್ ಅಯ್ಯೋ ಅಯ್ಯೋ…
ಸಜ್ಜನಿಕೆಯ ಪರಾಕಾಷ್ಠೆ ಚಿತ್ರಾ.
ಸಂಗೀತದ ಅಸಾಮಾನ್ಯ ಪ್ರತಿಭೆಯ ಜತೆಗೆ ತಾಳ್ಮೆ, ಸಜ್ಜನಿಕೆ, ಅಹಂರಾಹಿತ್ಯ ಮತ್ತು ಮಾತೃ ಹೃದಯ ಆಕೆಯ ಶ್ರೇಷ್ಠವಾದ ಆಸ್ತಿ. ಇದುವರೆಗೆ ಆಕೆಯ ನಡೆ ಅಥವಾ ನುಡಿಗಳು ಎಲ್ಲಿಯೂ ಅಹಂಕಾರ ತೋರಿದ್ದೇ ಇಲ್ಲ. ಅಂತಹ ಸಂಗೀತ ಸರಸ್ವತಿ ಕುಂದಾಪುರಕ್ಕೆ ಇಂದು ಹಾಡಲು ಬರುತ್ತಾರೆ ಅಂದರೆ ಅದು ಖಂಡಿತವಾಗಿ ಅಮೃತ ಮುಹೂರ್ತ ಆಗಿರುತ್ತದೆ.
ಬನ್ನಿ, ಚಿತ್ರಾ ಅವರ ಹಾಡುಗಳಿಗೆ ಕಿವಿಯಾಗೋಣ.
✒️ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.