ಸ್ವಾಮೀಜಿ ಮೂಲತಃ ಹೆಬ್ರಿ ಸಮೀಪದ ವರಂಗದವರು
ಹಾಸನ: ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ ಜಗದ್ಗುರು ಚಾರುಕೀರ್ತಿ ಸ್ವಾಮೀಜಿ ಜಿನೈಕ್ಯ ಆಗಿದ್ದಾರೆ. 1970, ಏಪ್ರಿಲ್ 19ರಂದು ಪಟ್ಟಾಭೀಷಿಕ್ತರಾದ ಸ್ವಾಮೀಜಿ ಸುಮಾರು 50 ವರ್ಷಗಳಿಂದ ಮಠವನ್ನು ಮುನ್ನಡೆಸಿದ್ದಾರೆ. ನಾಲ್ಕು ಮಹಾ ಮಸ್ತಕಾಭಿಷೇಕ ಪೂರೈಸಿದ ಕೀರ್ತಿ ಸ್ವಾಮೀಜಿಗಿದೆ. ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಸ್ವಾಮೀಜಿ ಕೊಡುಗೆ ಅಗಣಿತ. ಸಮಾಜಮುಖಿ ಕಾರ್ಯಗಳಿಂದ ಶ್ರವಣಬೆಳಗೊಳ ಸುತ್ತಮುತ್ತಲಿನ ಎಲ್ಲ ಧರ್ಮದವರ ಬದುಕು ಸುಧಾರಿಸಲು ಬಹಳಷ್ಟು ಕೆಲಸ ಮಾಡಿದ್ದ ಸ್ವಾಮೀಜಿ ಉನ್ನತ ಗೌರವಕ್ಕೆ ಪಾತ್ರರಾಗಿದ್ದರು.
ಸ್ವಾಮೀಜಿ ಮೂಲತಃ ಹೆಬ್ರಿ ಸಮೀಪದ ವರಂಗದವರು. ಶಿಕ್ಷಕ ದಂಪತಿಯ ಪುತ್ರನಾಗಿ 1949, ಮೇ 3ರಂದು ಜನಿಸಿದರು. ಕನ್ನಡ, ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಲ್ಲಿ ಅವರು ಪಾಂಡಿತ್ಯ ಗಳಸಿದ್ದರು. ಇತಿಹಾಸ ಮತ್ತು ತತ್ವಶಾಸ್ತ್ರದಲ್ಲಿ ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು.
30ಕ್ಕೂ ಹೆಚ್ಚು ದೇವಸ್ಥಾನಗಳನ್ನು ಜೀರ್ಣೋದ್ಧಾರಗೊಳಿಸಿದ ಮತ್ತು ಅಸಂಖ್ಯಾತ ದೇವಳಗಳಿಗೆ ನೆರವು ನೀಡಿದ ಹಿರಿಮೆ ಸ್ವಾಮೀಜಿಯವರಿಗಿದೆ.
1981, 1993, 2006 ಮತ್ತು 2018ರಲ್ಲಿ ಮಹಾಮಸ್ತಕಾಭಿಷೇಕ ನೆರವೇರಿಸಿದ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. 1970ರಲ್ಲಿ ಶ್ರವಣಬೆಳಗೊಳಕ್ಕೆ ಭೇಟಿ ನೀಡಿದ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಕರ್ಮಯೋಗಿ ಬಿರುದು ಇತ್ತು ಗೌರವಿಸಿದ್ದರು.ಉತ್ತಮ ಪ್ರವಚನಕಾರ ಮತ್ತು ವಾಗ್ಮಿಯಾಗಿದ್ದ ಸ್ವಾಮೀಜಿಯವರು ಕನ್ನಡ, ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ನಿರರ್ಘಳವಾಗಿ ಮಾತನಾಡುತ್ತಿದ್ದರು.