ಪುತ್ತೂರು: ನಗರಸಭಾ ವಿಶೇಷ ಸಾಮಾನ್ಯ ಸಭೆ ಗುರುವಾರ ನಗರಸಭೆ ಕಾರ್ಯಾಲಯದಲ್ಲಿ ನಡೆಯಿತು.
ವಿವಿಧ ಯೋಜನೆಗಳ ಗುತ್ತಿಗೆಗಳಿಗೆ ಅನುಮೋದನೆ ಪಡೆಯುವ ನಿಟ್ಟನಲ್ಲಿ ನಡೆದ ಸಭೆಯಲ್ಲಿ ನಗರ ಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮಾತನಾಡಿ, ನಗರೋತ್ಥಾನದ ಮೂಲಕ ಬೊಳುವಾರು ತನಕ ಅಗಲೀಕರಣ ಕಾರ್ಯ ನಡೆಯಲಿದೆ. ಇದಕ್ಕಾಗಿ ಹಲವು ದಾನಿಗಳು ನಗರ ಸಭೆ ಜತೆಗೆ ಕೈಜೋಡಿಸಿದ್ದಾರೆ. ಜಾತ್ರೆ ಸಂದರ್ಭ ದೇವರ ಸವಾರಿ ಹೋಗುವ ಜಾಗದಲ್ಲಿ ಎಲ್ಲಾ ರಸ್ತೆಗಳನ್ನು ಸ್ವಲ್ಪವಾಗಿ ಇಡುವ ಪ್ರಯತ್ನ ಮಾಡಲಾಗುತ್ತಿದೆ. ಮನೆ ದುರಸ್ಥಿಯ ವಿಚಾರದಲ್ಲಿ ಚಿತ್ರ ಸಹಿತ ಸೂಕ್ತ ದಾಖಲೆಯನ್ನು ಅರ್ಜಿಯ ಜತೆಗೆ ನೀಡಬೇಕು. ಬಳಿಕ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕವೇ ದುರಸ್ಥಿಕಾರ್ಯಕ್ಕೆ ಮುಂದಾಗಬೇಕು ಎಂದರು.
ಸದಸ್ಯ ಶಕ್ತಿ ಸಿನ್ಹ ಮಾತನಾಡಿ, ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ತಲೆದೋರುತ್ತಿದ್ದು, ಈಗಾಗಲೇ ಎರಡು ಕೊಳವೆ ಬಾವಿಗಳಲ್ಲಿ ನೀರಿಲ್ಲದಂತಾಗಿದೆ. ಮುಂದೆ ಚುನಾವಣೆ ನೀತಿಸಂಹಿತೆ ಜಾರಿಯಾದರೆ ಕೊಳವೆ ಬಾವಿ ತೆರೆಯಲು ಸಮಸ್ಯೆ ಎದುರಾಗಲಿದೆ. ಈ ನಿಟ್ಟಿನಲ್ಲಿ ಈಗಲೇ ನಗರ ಸಭೆ ಎಚ್ಚೆತ್ತು ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸದಸ್ಯ ಭಾಮಿ ಅಶೋಕ್ ಶೆಣೈ ಮಾತನಾಡಿ ಈ ಸಭೆ ಕೊನೆ ಸಭೆಯಾಗಿರುವ ಕಾರಣ ಸ್ಥಳೀಯ ಸದಸ್ಯರಿಂದ ನಿನ್ನೆಯ ದಿನಾಂಕದಲ್ಲಿ ಅರ್ಜಿಯನ್ನು ಪಡೆದುಕೊಂಡು, ಕೊಳವೆ ಬಾವಿ ಕೊರೆಯಲು ನಗರಸಭೆ ಹೆಚ್ಚುವರಿ ಅನುದಾನಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದರು.
ನಗರ ಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಮಾತನಾಡಿ, ನಗರ ಸಭೆಯ ಕೆಳಗಿನ ಅಂತಸ್ತಿನಲ್ಲಿ ಜಲ ಸಿರಿ, ಬ್ಯಾಂಕ್, ಸಕಾಲ ಸೇವೆ ಸೇರಿ ದೂರು ವಿಭಾಗ, ಜನರಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಟ್ಟಣವನ್ನು ಆಧುನೀಕರಣ ಮಾಡಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಕೆ. ಉಪಸ್ಥಿತರಿದ್ದರು.