ದೆಹಲಿ : ಮೋದಿ ಹೆಸರು ಇರುವವರೆಲ್ಲ ವಂಚಕರು ಎಂದು ಟೀಕಿಸಿದ್ದ ಕಾಂಗ್ರೆಸ್ ನಾಯಕ ದೋಷಿ ಎಂದು ಗುಜರಾತ್‌ನ ನ್ಯಾಯಾಲಯ ತೀರ್ಪು ನೀಡಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ರಾಹುಲ್ ಗಾಂಧಿ ಮಾಡಿರುವ ಮೋದಿ ಉಪನಾಮ ಟೀಕೆಗೆ ಸಂಬಂಧಿಸಿದಂತೆ ಗುಜರಾತಿನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಸೂರತ್ ನ್ಯಾಯಾಲಯ ಇಂದು ಈ ಪ್ರಕರಣದ ತೀರ್ಪು ನೀಡಿದೆ. ಎಲ್ಲ ಕಳ್ಳರ ಉಪನಾಮ ಮೋದಿ ಎಂದಿರುವುದು ಹೇಗೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು. ಇದರ ವಿರುದ್ಧ ಗುಜರಾತ್‌ನ ಬಿಜೆಪಿ ಶಾಸಕ ಮತ್ತು, ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ದೂರು ನೀಡಿದ್ದರು.
ರಾಹುಲ್ ಗಾಂಧಿಗೆ 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ ಸೂರತ್ ನ್ಯಾಯಾಲಯ ಇದೀಗ 30 ದಿನಗಳಿಗೆ ಜಾಮೀನು ಮಂಜೂರು ಮಾಡಿದೆ. ರಾಹುಲ್ ಅವರು ಕೋಲಾರದಲ್ಲಿ ನಡೆದಿದ್ದ ರ‍್ಯಾಲಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ರಾಹುಲ್ ಅವರು ತಮ್ಮ ಹೇಳಿಕೆ ಮೂಲಕ ಮೋದಿ ಉಪನಾಮ ಹೊಂದಿರುವವರನ್ನೆಲ್ಲಾ ಹೀಯಾಳಿಸಿದ್ದಾರೆ ಎಂದು ಆರೋಪಿಸಿದ್ದ ಪೂರ್ಣೇಶ್ ಮೋದಿ ಅವರು ಕಾಂಗ್ರೆಸ್ ಸಂಸದನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಕೋಲಾರದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ರಾಹುಲ್, ಕಳ್ಳರೆಲ್ಲರಿಗೂ ಸಾಮಾನ್ಯವಾಗಿ ಮೋದಿ ಎಂಬ ಉಪನಾಮವೇ ಏಕಿರುತ್ತದೆ ಎಂದು ಪ್ರಶ್ನಿಸಿದ್ದರು.