ಇಬ್ಬರು ಸಹೋದರರ ಯಶೋಗಾಥೆಯ ಚಿತ್ರಣ – ಈ ವರ್ಷದ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆದ ಸಿನೆಮಾ
ಎಂದಿನಂತೆಯೇ ನಾನು ಸುಮ್ಮನೆ ಜಾಲತಾಣಗಳನ್ನು ಜಾಲಾಡುತ್ತ ಹೋದಾಗ ಈ ಡಾಕ್ಯುಮೆಂಟರಿ ಫಿಲ್ಮ್ ಥಟ್ಟನೆ ಗಮನ ಸೆಳೆಯಿತು. ಈ ವರ್ಷದ ಆಸ್ಕರ್ ಪ್ರಶಸ್ತಿಯ ರೇಸಲ್ಲಿ ಈ ಸಿನೆಮಾ ಇತ್ತು ಮತ್ತು ಫೈನಲ್ಸ್ ವರೆಗೆ ತಲುಪಿತ್ತು ಎಂದು ತಿಳಿದುಬಂತು. ಕಳೆದ ವರ್ಷ ಬಿಡುಗಡೆ ಆದ ಈ ಸಿನೆಮಾ ಈಗಾಗಲೇ ಹತ್ತಾರು ದೇಶಗಳ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಸ್ಕ್ರೀನ್ ಆಗಿ ಪ್ರಶಸ್ತಿಗಳ ಸರಮಾಲೆಯನ್ನು ಗೆದ್ದಿದೆ ಅಂದಾಗ ಆ ಫಿಲ್ಮ್ ನೋಡದೆ ಇರಲು ಸಾಧ್ಯವೇ ಆಗಲಿಲ್ಲ.
ಆ ಸಿನೆಮಾ ನೋಡಿದ ನಂತರ, ಅದರ ಹಿಂದಿರುವ ಆಶಯವನ್ನು ಗಮನಿಸಿದಾಗ ಅದರ ಬಗ್ಗೆ ಇಂದು ಬರೆಯಲೇ ಬೇಕು ಎಂದು ಮನಸು ರಚ್ಚೆ ಹಿಡಿಯಿತು.

ಆ ಮಹಾ ಅಚ್ಚರಿಯ ಸಿನೆಮಾ – ALL THAT BREATHS
ಒಂದು ತಾಸು 31 ನಿಮಿಷದ ಈ ಫಿಲ್ಮ್ ನಿರ್ದೇಶನ ಮಾಡಿದ್ದು ಪಶ್ಚಿಮ ಬಂಗಾಳದ ಮೂವತ್ತೈದು ವರ್ಷದ ಯುವ ನಿರ್ದೇಶಕ. ಆತನ ಹೆಸರು ಸೌನಕ್ ಸೇನ್. ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮತ್ತು ದಿಲ್ಲಿಯ ಜವಾಹರ್ ಲಾಲ್ ನೆಹರೂ ವಿವಿಯಿಂದ ಡಾಕ್ಟರೇಟ್ ಪಡೆದಿರುವ ಪ್ರತಿಭಾವಂತ ಆತ. 2013ರಿಂದ ಸಿನೆಮಾರಂಗದಲ್ಲಿ ನಿರ್ದೇಶಕನಾಗಿ ಇರುವ ಸೌನಕ್ ಈವರೆಗೆ ನಿರ್ದೇಶನ ಮಾಡಿದ್ದು ಐದೇ ಸಿನೆಮಾಗಳನ್ನು.
2016ರಲ್ಲಿ ಆತನ CITY OF SLEEP ಸಿನೆಮಾ ಇಪ್ಪತ್ತಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ವೇದಿಕೆಗಳಲ್ಲಿ ಸ್ಕ್ರೀನ್ ಆಗಿತ್ತು ಮತ್ತು ಆರು ವಿಶ್ವ ಮಟ್ಟದ ಅವಾರ್ಡ್ಸ್ ಪಡೆದಿತ್ತು.
ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಒಂದೇ ಸಿನೆಮಾಕ್ಕೆ ಕತೆ ಬರೆದು, ಚಿತ್ರಕತೆ ಬರೆದು, ಶೂಟ್ ಮಾಡಿದ ಈ ಸಿನೆಮಾ ಅಲ್ ದಾಟ್ ಬ್ರೀತ್ಸ್. ಈ ಮೂರು ವರ್ಷಗಳ ಅವಧಿಯಲ್ಲಿ ನಾನು ಬೇರೆ ಏನೂ ಯೋಚನೆ ಮಾಡದೆ ಒಂದೇ ಸಿನೆಮಾದ ಹಿಂದೆ ಹೋಗಿದ್ದೆ, ಪ್ರತಿಯೊಂದು ದೃಶ್ಯವನ್ನು ತುಂಬಾ ತಾಳ್ಮೆಯಿಂದ ಸೆರೆ ಹಿಡಿಯಲಾಗಿದೆ ಎಂದು ಸೌನಕ್ ಹೇಳಿದ್ದಾರೆ. ಅವರ ತಪಸ್ಸು ಮತ್ತು ಶ್ರದ್ಧೆ ಈ ಸಿನೆಮಾದ ಪ್ರತಿ ಫ್ರೇಮ್‌ನಲ್ಲಿ ಅದ್ಭುತವಾಗಿ ಕಾಣುತ್ತದೆ. ನಿಮ್ಮನ್ನು ಪೂರ್ತಿಯಾಗಿ ಆವರಿಸುವ ಸಿನೆಮಾ ಇದು.
ಆ ಸಿನೆಮಾದ ಥೀಮ್ ಏನು?
ಇತ್ತೀಚಿನ ವರ್ಷಗಳಲ್ಲಿ ದಿಲ್ಲಿ ಪರಿಸರ ಮಾಲಿನ್ಯದ ಕಾರಣಕ್ಕೆ ಅಪಕೀರ್ತಿಯನ್ನು ಪಡೆದಿದೆ. ವಿಶ್ವ ಆರೋಗ್ಯ ಸಂಸ್ಥೆ ರಾಜಧಾನಿ ದಿಲ್ಲಿಯನ್ನು ಪರಿಸರದ ನಾಶಕ್ಕಾಗಿ ಕಪ್ಪು ಪಟ್ಟಿಗೆ ಸೇರಿಸಿ ದಶಕಗಳೇ ಕಳೆದುಹೋಗಿವೆ. ಈ ಪರಿಸರ ಮಾಲಿನ್ಯ ಮನುಷ್ಯನ ಬದುಕಿನ ಮೇಲೆ ಬೀರುತ್ತಿರುವ ಅಡ್ಡ ಪರಿಣಾಮಗಳು ಇದ್ದದ್ದೇ. ಆದರೆ ಕಪ್ಪು ಹದ್ದು ಎಂಬ ಅಪರೂಪದ ಸೆನ್ಸಿಟಿವ್ ಹಕ್ಕಿಗಳ ಬದುಕಿನ ಮೇಲೆ ಬೀರುವ ಅಡ್ಡ ಪರಿಣಾಮದ ಬಗ್ಗೆ ಈವರೆಗೆ ನಾವ್ಯಾರೂ ಯೋಚನೆ ಮಾಡಿದ್ದೇ ಇಲ್ಲ.
ಆದರೆ ದಿಲ್ಲಿ ಸಮೀಪದ ವಜೀರಾಬಾದ್ ಎಂಬ ಗ್ರಾಮದಲ್ಲಿ ವಾಸವಾಗಿರುವ ಇಬ್ಬರು ಮುಸ್ಲಿಂ ಸಹೋದರರು ಈ ಹಕ್ಕಿಗಳ ಬಗ್ಗೆ ಕಳೆದ ಇಪ್ಪತ್ತು ವರ್ಷಗಳಿಂದ ಒಂದು ಅದ್ಭುತ ಮಾನವೀಯತೆಯ ಒಂದು ಯಶೋಗಾಥೆಯನ್ನೇ ನಿರ್ಮಾಣ ಮಾಡಿದ್ದಾರೆ. ಪರಿಸರದ ಉಸಿರುಗಟ್ಟುವ ವಾತಾವರಣದಲ್ಲಿ ಭೂಮಿಗೆ ಉರುಳುತ್ತಿರುವ ಈ ಕಪ್ಪು ಹದ್ದುಗಳ ಶುಶ್ರೂಷೆಗಾಗಿ ಅವರು ಒಂದು ದೊಡ್ಡ ಹಕ್ಕಿಯ ಆಸ್ಪತ್ರೆಯನ್ನು ತೆರೆದಿದ್ದಾರೆ. ಈವರೆಗೆ 20 ಸಾವಿರಕ್ಕಿಂತ ಅಧಿಕ ಸಂತ್ರಸ್ತ ಕಪ್ಪು ಹದ್ದುಗಳಿಗೆ ಅವರು ಸರಿಯಾದ ಶುಶ್ರೂಷೆ ಮಾಡಿ ಪುನರ್ಜನ್ಮ ಕೊಟ್ಟಿದ್ದಾರೆ ಅಂದರೆ ನಂಬಲು ಕಷ್ಟ ಆಗಬಹುದು. ಆದರೆ ಇದು ನಿಜ.
ಆ ಸೋದರರೇ ಮೊಹಮದ್ ಸೌದ್ ಮತ್ತು ನದೀಮ್ ಶಹಜಾದಾಸ್

ಇಬ್ಬರೂ ಬಿಸಿರಕ್ತದ ಯುವಕರು. ಸಾಕಷ್ಟು ಓದಿದವರು. ಪರಿಸರ ನಾಶ, ಜಾಗತಿಕ ತಾಪಮಾನ ಏರಿಕೆ ಮತ್ತು ಉಸಿರುಕಟ್ಟುವ ಕಪ್ಪು ಹೊಗೆ ಇವುಗಳಿಂದ ದಿಲ್ಲಿಯಲ್ಲಿ ಸಾಲು ಸಾಲಾಗಿ ಧರೆಗೆ ಉರುಳುತ್ತಿದ್ದ ಈ ಕಪ್ಪು ಹದ್ದುಗಳ ಬಗ್ಗೆ ಮರುಗಿದವರು. ಆ ಪಕ್ಷಿಗಳ ಆರ್ತನಾದಕ್ಕೆ ಕಿವಿ ಆದವರು. ಅದರ ಒಟ್ಟು ಪರಿಣಾಮವೇ ದಿಲ್ಲಿಯ ಸಮೀಪದ ಒಂದು ಹಳ್ಳಿಯಲ್ಲಿ ಹುಟ್ಟಿದ ಈ ಹಕ್ಕಿಗಳ ಆಸ್ಪತ್ರೆ. ಈವರೆಗೆ 20 ಸಾವಿರ ಕಪ್ಪು ಹದ್ದುಗಳ ಆರೈಕೆ ಮಾಡಿ ಅವುಗಳಿಗೆ ಈ ಸೋದರರು ಪುನರ್ಜನ್ಮವನ್ನು ನೀಡಿದ್ದಾರೆ. ಯಾವುದೂ ಪ್ರಚಾರಕ್ಕೆ ಮಾಡಿದ ಕೆಲಸ ಅಲ್ಲ. ನಿಜವಾದ ಮಾನವೀಯ ಅಂತಃಕರಣದ ಸೇವೆ.
ಈ ಥೀಮ್ ಮೇಲೆ ರೂಪುಗೊಂಡ ಅದ್ಭುತ ಸಿನೆಮಾ
ಈ ಸೋದರರ ಪಕ್ಷಿ ಪ್ರೇಮ, ಅವರು ತೋರಿದ ಕಾಳಜಿ ಇವೆಲ್ಲವನ್ನೂ ಕ್ಯಾನ್ವಾಸ್ ಆಗಿ ಇಟ್ಟುಕೊಂಡು ಈ ಸಿನೆಮಾ ರೂಪಿಸಲಾಗಿದೆ. ನಾನು ಮೊದಲೇ ಹೇಳಿದ ಹಾಗೆ ಮೂರು ವರ್ಷಗಳ ಕಾಲ ಯಾವ್ಯಾವುದೋ ಕೋನದಲ್ಲಿ ಕ್ಯಾಮೆರ ಇಟ್ಟು, ತಾಳ್ಮೆಯಿಂದ ಕಾದು ರೂಪಿಸಿದ ಸಿನೆಮಾ ಇದು. ಹವಾಮಾನದ ವೈಪರೀತ್ಯದ ಕಾರಣಕ್ಕೆ ಈ ಕಪ್ಪು ಹದ್ದುಗಳು ನರಳುವುದು, ನೋವು ಪಡುವುದು, ಅವುಗಳ ಚಿಕಿತ್ಸೆಗಾಗಿ ನದೀಮ್ ಮತ್ತು ಸೌದ್ ಸೋದರರು ತಮ್ಮ ಹಕ್ಕಿಗಳ ಆಸ್ಪತ್ರೆಯಲ್ಲಿ ತೆಗೆದುಕೊಳ್ಳುವ ಶ್ರಮ… ಎಲ್ಲವೂ ಈ ಸಿನೆಮಾದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಹಕ್ಕಿಗಳಿಗೂ ಒಂದು ಭಾಷೆ ಇದೆ ಮತ್ತು ಒಂದು ಸ್ಟ್ರಾಂಗ್ ಆದ ಅಂತಃಕರಣ ಇದೆ ಎನ್ನುವುದು ನಮಗೆ ಈ ಸಿನೆಮಾ ನೋಡಿದಾಗ ಅರ್ಥ ಆಗುತ್ತದೆ. ಚಿಕಿತ್ಸೆ ಪಡೆದು ಆ ಹಕ್ಕಿಗಳು ಖುಷಿಯಿಂದ ಮತ್ತೆ ರೆಕ್ಕೆ ಬಡಿದು ಬಾನಿಗೆ ಹಾರುವ ಆ ಫೀಲಿಂಗ್ ಇದೆಯಲ್ಲ ಅದು ನಿಜಕ್ಕೂ ಚೇತೋಹಾರಿ. ನಾನು ಶಬ್ದಗಳ ತೋರಣ ಕಟ್ಟುವುದಕ್ಕಿಂತ ನೀವು ಆ ಸಿನೆಮಾ ನೋಡಿಯೇ ಆನಂದಿಸಬೇಕು. ನಗರದ ಜೀವನದ ಪರಿಸರ ಮಾಲಿನ್ಯದ ಹಲವು ನೋವುಗಳನ್ನು ಈ ಸಿನೆಮಾ ಬಹಳ ದೊಡ್ಡ ಮಟ್ಟದ ಕ್ಯಾನ್ವಾಸನಲ್ಲಿ ತೋರಿದೆ.
ಈ ಸಿನೆಮಾದ ಯಶೋಯಾನ
ಆಲ್ ದಾಟ್ ಬ್ರೀತ್ಸ್ ಸಿನೆಮಾ ಕೇವಲ ಒಂದು ಡಾಕ್ಯುಮೆಂಟರಿ ಎಂದು ನನಗೆ ಅನ್ನಿಸುವುದಿಲ್ಲ. ಅದು ಹಕ್ಕಿಗಳ ಪ್ರಪಂಚದ ರೋಚಕ ಚಿತ್ರಣ. ಈ ಸಿನೆಮಾ ಆಸ್ಕರ್ ಪ್ರಶಸ್ತಿಯ ಕಣದಲ್ಲಿ ನಾಮಿನೇಟ್ ಆಗಿತ್ತು. ಹಾಗೆಯೇ ಕ್ಯಾನ್ ಚಿತ್ರೋತ್ಸವದಲ್ಲಿ ಇದು ಅತ್ಯುತ್ತಮ ಸಿನಿಮಾಕ್ಕಾಗಿ ನೀಡುವ ‘ಗೋಲ್ಡನ್ ಐ’ ಪ್ರಶಸ್ತಿ ಪಡೆಯಿತು. ಸನ್ ಡಾನ್ಸ್ ಚಿತ್ರೋತ್ಸವದಲ್ಲಿ ಗ್ರಾಂಡ್ ಜ್ಯೂರಿ ಪ್ರಶಸ್ತಿ ಗೆದ್ದು ಬೀಗಿತು.
ಈ ಹೆಮ್ಮೆಯ ಸಿನೆಮಾ ನಿರ್ದೇಶಕ ಸೌನಕ್ ಸೇನ್ ಭಾರತೀಯ ಸಿನೆಮಾರಂಗದ ಉಜ್ವಲ ಭವಿಷ್ಯ ಎಂಬ ಭರವಸೆಯ ಜತೆಗೆ ಆ ಅಪರೂಪದ ಹಕ್ಕಿಗಳ ಬದುಕಿಗೆ ಊರುಗೋಲಾಗಿ ನಿಂತಿರುವ ನದೀಮ್ ಸೋದರನನ್ನು ಖಂಡಿತ ಅಭಿನಂದಿಸೋಣ.
✒️ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.