ಬೆಂಗಳೂರು: ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿ ಆದೇಶ ಮಾಡಿದರೂ ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಶುಕ್ರವಾರ ರಾಜಭವನ ಚಲೋ ಪ್ರತಿಭಟನೆ ಹಮ್ಮಿಕೊಂಡಿದೆ.
ಈ ಕುರಿತಾಗಿ ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾಳೆ ಕಾಂಗ್ರೆಸ್ ನಾಯಕರು ಕಾರ್ಯಕರ್ತರು ರಾಜಭವನ ಚಲೋ ಹಮ್ಮಿಕೊಂಡಿದ್ದೇವೆ. ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೋಸ ಮಾಡಿದೆ ಎಂದು ಆರೋಪಿಸಿದರು. ಕೇಂದ್ರ ಸರಕಾರಕ್ಕೆ ಮೀಸಲಾತಿ ಪ್ರಸ್ತಾಪ ಹೋಗಿಲ್ಲ. ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರದ ಯಾವುದೇ ಮೀಸಲಾತಿ ಪ್ರಸ್ತಾವನೆ ಕಳಿಸಿಲ್ಲ. ಒಂದು ವೇಳೆ ಸರಕಾರ ಮೀಸಲಾತಿ ವಿಚಾರ ಕೇಂದ್ರಕ್ಕೆ ಕಳುಹಿಸಿದರೇ ಅಲ್ಲಿ ಚರ್ಚೆ ಆಗಬೇಕು ಅಲ್ವಾ? ಎಂದು ಪ್ರಶ್ನಿಸಿದರು.
ಇದೀಗ ಸಂಸತ್ ಅಧಿವೇಶನ ನಡೆಯುತ್ತಿದೆ. ಹಾಗಿದ್ದರೂ ಮೀಸಲಾತಿ ಬಗ್ಗೆ ಯಾಕೆ ಸದನದಲ್ಲಿ ಚರ್ಚೆ ಆಗ್ತಿಲ್ಲ ? ಮೀಸಲಾತಿ ವಿಚಾರದಲ್ಲಿ ಸರಕಾರ ಮಾಡಿದ ಅನ್ಯಾಯದ ಕುರಿತು ಶುಕ್ರವಾರ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸುತ್ತೇವೆ ಎಂದರು. ಶುಕ್ರವಾರ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಬೆಳಗ್ಗೆ 10 ಗಂಟೆಗೆ ರಾಜಭವನದ ಬಳಿ ಪ್ರತಿಭಟನೆ ಮಾಡ್ತಿವಿ. ಈ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಇನ್ನು ರಾಜ್ಯದಲ್ಲಿ ಬಿಜೆಪಿ ಸರಕಾರ 10-15 ದಿನ ಅಷ್ಟೆ ಇರಬಹುದು. ಎಸ್ಸಿ ಎಸ್ಟಿ ಸಮುದಾಯಕ್ಕೆ ಬಿಜೆಪಿ ಅವಮಾನ ಮಾಡಿದೆ. ಮೀಸಲಾತಿ ವಿಚಾರದಲ್ಲಿ ಡಬಲ್ ಇಂಜಿನ್ ಸರ್ಕಾರ ಏನು ಮಾಡ್ತಿದೆ. ಮೀಸಲಾತಿ ವಿಚಾರದಲ್ಲಿ 25 ಸಂಸದರು ಸುಮ್ಮನೆ ಕುತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು.
ಇತ್ತೀಚೆಗೆ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಪರಮೇಶ್ವರ್ ಕೂಡ ಇದೇ ಪ್ರತಿಭಟನೆಯ ಬಗ್ಗೆ ಮಾಹಿತಿ ಕೊಟ್ಟಿದ್ದರು. ರಾಜ್ಯ ಸರ್ಕಾರ, ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುವ ಕುರಿತಂತೆ ನೋಟಿಫಿಕೇಷನ್ ನೀಡಿ ಸುಮ್ಮನಾಗಿದೆ. ಕೇಂದ್ರ ಸರಕಾರಕ್ಕೆ ಮೀಸಲಾತಿ ಹೆಚ್ಚಳದ ಬಗ್ಗೆ ಔಪಚಾರಿಕವಾಗಿ ಸಲ್ಲಿಸಬೇಕಿದ್ದ ಪ್ರಸ್ತಾವನೆಯನ್ನು ಇನ್ನೂ ಸಲ್ಲಿಸಿಲ್ಲ. ಇನ್ನೇನು ಚುನಾವಣೆ ಘೋಷಣೆಯಾಗುವುದರಲ್ಲಿದೆ. ಅಷ್ಟರೊಳಗೆ ಮೀಸಲಾತಿ ಹೆಚ್ಚಳದ ಬಗ್ಗೆ ಸ್ಪಷ್ಟತೆ ಸಿಗಬೇಕಿದೆ. ರಾಜ್ಯ ಸರಕಾರದ ಈ ವಿಳಂಬ ಧೋರಣೆಯನ್ನು ಖಂಡಿಸಿ, ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದರು.