ಸಾಲ ಮರುಪಾವತಿಸಲು ಮಲ್ಯ ಬಳಿ ಹಣವಿದ್ದರೂ ವಿದೇಶದಲ್ಲಿ ಆಸ್ತಿ ಖರೀದಿಸಿದರು : ಸಿಬಿಐ ಆರೋಪ

ದೆಹಲಿ : ಉದ್ಯಮಿ ವಿಜಯ್ ಮಲ್ಯ ಅವರ ಕಿಂಗ್‌ಫಿಶರ್ ಏರ್‌ಲೈನ್ಸ್ ವಿಮಾನ ಸಂಸ್ಥೆಯು ಭಾರಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಸಂದರ್ಭದಲ್ಲಿಯೇ 2015- 16ರಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್‌ ದೇಶಗಳಲ್ಲಿ 330 ಕೋಟಿ ರೂ ಮೌಲ್ಯದ ಆಸ್ತಿಗಳನ್ನು ಖರೀದಿಸಿದ್ದರು. ಭಾರತದಿಂದ ಪರಾರಿಯಾಗುವ ಮುನ್ನ ಈ ವ್ಯವಹಾರ ನಡೆಸಿದ್ದರು ಎಂದು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ), ಮುಂಬಯಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಪೂರಕ ಆರೋಪಪಟ್ಟಿಯಲ್ಲಿ ಹೇಳಿದೆ.
ಐಡಿಬಿಐ ಬ್ಯಾಂಕ್‌ಗೆ 900 ಕೋಟಿ ರೂ ಸಾಲ ವಂಚನೆ ಪ್ರಕರಣದಲ್ಲಿ ಪೂರಕ ಆರೋಪ ಪಟ್ಟಿ ಸಲ್ಲಿಸಿರುವ ಸಿಬಿಐ, ಮಲ್ಯ ಬಳಿ ಸಾಲ ಮರುಪಾವತಿಸಲು ಸಾಕಷ್ಟು ಹಣವಿತ್ತು. ಆದರೆ ಅದರ ಬದಲು ವಿದೇಶಗಳಲ್ಲಿ ಆಸ್ತಿ ಖರೀದಿಸಿ, ಬಳಿಕ ಪಲಾಯನ ಮಾಡಿದ್ದರು ಎಂದು ಹೇಳಿದೆ.
ಕಿಂಗ್‌ಫಿಶರ್ ಏರ್‌ಲೈನ್ಸ್ ಲಿಮಿಟೆಡ್ (ಕೆಎಎಲ್) ಸಲುವಾಗಿ ಮಲ್ಯ ಅವರು ಬ್ಯಾಂಕುಗಳಿಂದ ಸಾಲವನ್ನು ಪಡೆದುಕೊಂಡ 2008 ರಿಂದ 2017ರ ಅವಧಿಯಲ್ಲಿ ಮರು ಪಾವತಿಸಲು ಸಾಕಷ್ಟು ಹಣ ಹೊಂದಿದ್ದರು. ಆದರೆ ಅವರು ಅದರ ಬದಲು ಯುರೋಪ್‌ನ ಹಲವೆಡೆ ವೈಯಕ್ತಿಕ ಆಸ್ತಿಗಳನ್ನು ಖರೀದಿಸಿದ್ದರು ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿರುವ ತಮ್ಮ ಮಕ್ಕಳ ಟ್ರಸ್ಟ್‌ಗಳಿಗೆ ಹಣ ವರ್ಗಾವಣೆ ಮಾಡಿದ್ದರು ಎಂದು ಸಿಬಿಐ ಆರೋಪಿಸಿದೆ.

ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿರುವ ಸಿಬಿಐ, ಮಲ್ಯ ಅವರ ಹಣಕಾಸಿನ ವರ್ಗಾವಣೆಯ ವಿವರಗಳನ್ನು ನೀಡುವಂತೆ ವಿವಿಧ ದೇಶಗಳಿಗೆ ಸಂವಹನ ಪತ್ರ ರವಾನಿಸಿದೆ. ಮಲ್ಯ ಅವರು ಫ್ರಾನ್ಸ್‌ನಲ್ಲಿ 35 ಮಿಲಿಯನ್ ಯುರೋ ದರಕ್ಕೆ ರಿಯಲ್ ಎಸ್ಟೇಟ್ ಅನ್ನು ಖರೀದಿಸಿದ್ದರು. ಇದಕ್ಕೆ ತಮ್ಮ ಕಂಪೆನಿಗಳಲ್ಲಿ ಒಂದಾದ ಗಿಜ್ಮೋ ಹೋಲ್ಡಿಂಗ್ಸ್‌ನ ಖಾತೆಯೊಂದರಿಂದ 8 ಮಿಲಿಯನ್ ಯುರೋ ಪಾವತಿಗೆ ಸೂಚಿಸಿದ್ದರು ಎಂಬ ಮಾಹಿತಿಯನ್ನು ಸಿಬಿಐ ಪಡೆದುಕೊಂಡಿದೆ.

ವಿಜಯ್ ಮಲ್ಯ 2016ರಲ್ಲಿ ಭಾರತ ತೊರೆದು ಬ್ರಿಟನ್‌ಗೆ ಹೋಗಿ ನೆಲೆಸಿದ್ದರು. ಅವರನ್ನು ಭಾರತದ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುವಂತೆ ಮರಳಿ ಕರೆತರುವ ಪ್ರಯತ್ನಗಳು ಮುಂದುವರಿದಿವೆ. ಕಿಂಗ್ ಫಿಶರ್ ಏರ್‌ಲೈನ್ಸ್ ಸಂಸ್ಥೆಗೆ ಐಡಿಬಿಐ ಬ್ಯಾಂಕ್‌ನಿಂದ 900 ಕೋಟಿ ರೂಗೂ ಅಧಿಕ ಮೊತ್ತದ ಸಾಲ ಪಡೆದು ವಂಚಿಸಿರುವ ಆರೋಪ ಅವರ ಮೇಲಿದ್ದು, ಸಿಬಿಐ ಅದರ ನಡುವೆ ನಡೆಸುತ್ತಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top