ಪುತ್ತೂರು : ದ.ಕ. ಜಿಲ್ಲಾ ಕಬಡ್ಡಿ ತೀರ್ಪುಗಾರ ಮಂಡಳಿ ಅಧ್ಯಕ್ಷರಾಗಿ ಶಿವರಾಮ ಏನೆಕಲ್ ಆಯ್ಕೆಯಾಗಿದ್ದಾರೆ.
ಸುಳ್ಯ ತಾಲೂಕಿನ ಏನೆಕಲ್ ನಿವಾಸಿಯಾಗಿರುವ ಇವರು, ಏನೆಕಲ್ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ, ಅನೇಕ ವಿದ್ಯಾರ್ಥಿಗಳನ್ನು ಕ್ರೀಡಾಪಟುಗಳಾಗಿ ತಯಾರುಗೊಳಿಸಿದ್ದರು.
ಶಿವರಾಮ ಏನೆಕಲ್ ಅವರು ಏನೆಕಲ್ಲು ದೇವಸ್ಥಾನದ ಬ್ರಹ್ಮಕಲಶೋತ್ಸವ, ಜೀರ್ಣೋದ್ಧಾರ ಸಮಿತಿಗಳ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ರೋಟರಿ ಸಂಸ್ಥೆ ಸುಬ್ರಹ್ಮಣ್ಯದ ಪೂರ್ವಾಧ್ಯಕ್ಷ ಹಾಗೂ 3181 ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್, ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರೀಯ ಕಬಡ್ಡಿ, ವಾಲಿಬಾಲ್, ಅತ್ಲೆಟಿಕ್ಸ್ ಮೊದಲಾದ ಅನೇಕ ಪಂದ್ಯಾಟಗಳನ್ನು ಆಯೋಜಿಸಿದ ಅನುಭವ ಅವರಿಗಿದೆ. ಅಲ್ಲದೆ ಸಾರ್ವಜನಿಕ ಪಂದ್ಯಾಟವನ್ನು ಆಯೋಜಿಸಿದ ಅನುಭವವಿದೆ.
ಸುಳ್ಯ ತಾಲೂಕಿನ ಅಂಬೆಕಲ್ಲಿನವರಾದ ಶಿವರಾಮ ಏನೆಕಲ್ ಅವರು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಖೋ-ಖೋ, ಕಬಡ್ಡಿ, ವಾಲಿಬಾಲ್ ಆಟಗಾರರಾಗಿದ್ದು, ಜಿಲ್ಲಾ, ರಾಷ್ಟ್ರಮಟ್ಟದ ಅನೇಕ ಕ್ರೀಡಾಪಟುಗಳನ್ನು ತಯಾರು ಮಾಡಿದ್ದಾರೆ. ತಾಲೂಕು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳು, ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳು ಹಾಗೂ ಪುರಸ್ಕಾರ, ತಾಲೂಕು ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಸೇವೆ ಸಲ್ಲಿಸಿದ್ದು, ಪ್ರಸ್ತುತ ದ.ಕ.ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವಾಧ್ಯಕ್ಷರಾಗಿದ್ದಾರೆ. ಏನೆಕಲ್ ಯುವಕ ಮಂಡಲ ಅಧ್ಯಕ್ಷರಾಗಿ,, ಪ್ರಸ್ತುತ ಕಟ್ಟಡ ಸಮಿತಿ ಉಪಾಧ್ಯಕ್ಷರಾಗಿ, ಸುಬ್ರಹ್ಮಣ್ಯ ಅನುಗ್ರಹ ಎಜುಕೇಶನ್ ಟ್ರಸ್ಟ್ನ ಉಪಾಧ್ಯಕ್ಷರಾಗಿ, ಅನೇಕ ಸಂಘ ಸಂಸ್ಥೆಗಳಿಗೆ ಕಬಡ್ಡಿ, ವಾಲಿಬಾಲ್ ತರಬೇತುದಾರರಾಗಿ, ಕಬಡ್ಡಿ ರಾಷ್ಟ್ರೀಯ ತೀರ್ಪುಗಾರರಾಗಿ, ಖೋಖೋ, ತ್ರೋಬಾಲ್, ವಾಲಿಬಾಲ್ ರಾಜ್ಯಮಟ್ಟದ ತೀರ್ಪುಗಾರರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಕಬಡ್ಡಿ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ.