ಅಯೋಧ್ಯೆಗೆ ತಲುಪಿದ ಕೃಷ್ಣಶಿಲೆ

ಉಚಿತವಾಗಿ ಟ್ರಕ್‌ ಮತ್ತು ಚಾಲಕರನ್ನು ಒದಗಿಸಿದ ಬಿಜೆಪಿಯ ಹಿರಿಯ ನಾಯಕ ನಾಗರಾಜ ಶೆಟ್ಟಿ

ಕಾರ್ಕಳ : ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ ಪ್ರತಿಷ್ಥಾಪನೆಯಾಗಲಿರುವ ಭವ್ಯ ಶ್ರೀರಾಮನ ಮೂರ್ತಿಯನ್ನು ಕೆತ್ತಲು ಕಾರ್ಕಳದಿಂದ ಕೃಷ್ಣ ಶಿಲೆಯನ್ನು ಸಾಗಿಸಿದ್ದು ಹಿರಿಯ ಬಿಜೆಪಿ ನಾಯಕ, ಮಾಜಿ ಸಚಿವ ನಾಗರಾಜ ಶೆಟ್ಟಿಯವರ ಟ್ರಾನ್ಸ್‌ಪೋರ್ಟ್‌ ಕಂಪನಿ. ಮೂರು ದಿನಗಳಲ್ಲಿ ಬೃಹತ್‌ ಶಿಲೆ ಅಯೋಧ್ಯೆ ತಲುಪಿದೆ. ಒಂಭತ್ತು ಟನ್ ತೂಕದ ಶಿಲೆಯನ್ನು ಅಯೋಧ್ಯೆಯಲ್ಲಿ ನಾಗರಾಜ ಶೆಟ್ಟಿ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನ ಸ್ವಾಗತಿಸಲಾಯಿತು.

ಉದ್ಯಮಿ ನಾಗರಾಜ ಶೆಟ್ಟಿ ಮಾಲಕತ್ವದ ಗಣೇಶ್ ಶಿಪ್ಪಿಂಗ್ ಏಜನ್ಸಿಯ ಬೃಹತ್ ಲಾರಿಯಲ್ಲಿ 9ಟನ್ ತೂಕದ ಬೃಹತ್ ಶಿಲೆಯನ್ನು ಕಾರ್ಕಳದಿಂದ ಒಯ್ಯಲಾಗಿತ್ತು. ಇದಕ್ಕಾಗಿ ನಾಗರಾಜ ಶೆಟ್ಟಿ ತಮ್ಮ ಕಂಪನಿಯ ಇಬ್ಬರು ಚಾಲಕರು ಮತ್ತು ಹೊಸ ಲಾರಿಯನ್ನು ಉಚಿತವಾಗಿ ಕಳುಹಿಸಿಕೊಟ್ಟಿದ್ದರು. ಕಾರ್ಕಳದಿಂದ ಸುಮಾರು 2,280 ಕಿಮೀ ದೂರಕ್ಕೆ ಸಂಚರಿಸಿ, ಲಾರಿ ಅಯೋಧ್ಯೆ ತಲುಪಿದ್ದು ಸ್ವತಃ ನಾಗರಾಜ ಶೆಟ್ಟಿ ಅವರೇ ಸ್ವಾಗತಿಸಿದ್ದಾರೆ.
ಈ ಹಿಂದೆ, ನೇಪಾಳ, ರಾಜಸ್ಥಾನದಿಂದ ರಾಮನ ಮೂರ್ತಿ ಕೆತ್ತಲು ವಿವಿಧ ರೀತಿಯ ಶಿಲೆಗಳನ್ನು ಅಯೋಧ್ಯೆಗೆ ತರಲಾಗಿತ್ತು, ಆದರೆ ಅವುಗಳ ಗುಣಮಟ್ಟ ಚೆನ್ನಾಗಿಲ್ಲ ಎಂದು ಎಲ್&ಟಿ ಕಂಪನಿಯ ಇಂಜಿನಿಯರುಗಳು ಮತ್ತು ಗಣಿ ಭೂವಿಜ್ಞಾನ ಇಲಾಖೆಯ ತಜ್ಞರು ವರದಿ ನೀಡಿದ್ದರಿಂದ ಉತ್ತಮ ಗುಣಮಟ್ಟದ ಶಿಲೆಗಾಗಿ ಹುಡುಕಾಟ ನಡೆದಿತ್ತು. ಕಾರ್ಕಳದ ಕಪ್ಪು ಶಿಲೆ ಅತ್ಯಂತ ಬಾಳಿಕೆಯುಳ್ಳದ್ದು ಮತ್ತು ಕರಾವಳಿಯಲ್ಲಿ ನಾಗನ ಕಲ್ಲುಗಳನ್ನು ಅದರಿಂದಲೇ ಮಾಡುತ್ತಾರೆ. ನೂರಾರು ವರ್ಷ ಅಭಿಷೇಕ ಮಾಡಿದರೂ ಕರಗದೆ ಉಳಿಯುತ್ತದೆ ಎಂಬ ನೆಲೆಯಲ್ಲಿ ರಾಮನ ಮೂರ್ತಿ ನಿರ್ಮಾಣಕ್ಕೆ ಅದೇ ಕಲ್ಲನ್ನು ಆಯ್ಕೆ ಮಾಡಲಾಗಿದೆ.







































 
 

ಈ ಹಿಂದೆ ಕೊರೊನಾ ಸಂದರ್ಭದಲ್ಲಿ ವಿದೇಶದಿಂದ ಆಮ್ಲಜನಕದ ಟ್ಯಾಂಕರ್‌ಗಳು ಮಂಗಳೂರಿನ ಬಂದರು ಮತ್ತು ವಿಮಾನ ನಿಲ್ದಾಣಕ್ಕೆ ಬಂದಿದ್ದಾಗಲೂ, ಇಡೀ ರಾಜ್ಯಕ್ಕೆ ನಾಗರಾಜ ಶೆಟ್ಟಿ ಅವರೇ ತಮ್ಮ ಕಂಪನಿಯ ಲಾರಿಗಳ ಮೂಲಕ ಅವನ್ನು ಉಚಿತವಾಗಿ ಸಾಗಾಟ ಮಾಡಿಸಿದ್ದರು. ಅಯೋಧ್ಯೆ ಮಂದಿರಕ್ಕಾಗಿ ಶ್ರೀರಾಮ ಮತ್ತು ಹನುಮಂತನ ಬೃಹತ್ ರಥ ಕುಂದಾಪುರದ ಕೋಟೇಶ್ವರದಲ್ಲಿ ನಿರ್ಮಿಸಲಾಗುತ್ತಿದ್ದು, ಅದನ್ನು ಕೂಡ ರಾಮನ ಜನ್ಮಸ್ಥಾನಕ್ಕೆ ತಲುಪಿಸುವ ಹೊಣೆ ಹೊತ್ತುಕೊಂಡಿದ್ದೇನೆ ಎಂದು ನಾಗರಾಜ ಶೆಟ್ಟಿ ತಿಳಿಸಿದ್ದಾರೆ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top