ಮಂಗಳೂರು : ರಾಜಕಾರಣದಲ್ಲಿ ನಿವೃತ್ತಿ ಅಂಚಿಗೆ ಬಂದು ನಿಂತಿರುವ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯಂಥ ನಾಯಕರು ಯುವಕ್ರಾಂತಿ ಸಮಾವೇಶ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ರಾಹುಲ್ ಹೋದಲೆಲ್ಲ ಕಾಂಗ್ರೆಸ್ ನೆಲಕಚ್ಚಿದೆ. ಹೀಗಾಗಿ ಅವರು ಕರ್ನಾಟಕಕ್ಕೆ ಬಂದಿರುವುದನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ರಾಜ್ಯದಿಂದ ಕಾಂಗ್ರೆಸ್ನ್ನು ಕಿತ್ತೆಸೆಯುವ ಬಿಜೆಪಿಯ ವಾಗ್ದಾನವನ್ನು ನನಸು ಮಾಡುವಲ್ಲಿ ರಾಹುಲ್ ಗಾಂಧಿ ಸಾಥ್ ನೀಡಲಿದ್ದಾರೆ ಎಂದು ಕಟೀಲ್ ಕಾಲೆಳೆದಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಚುನಾವಣೆ ಪ್ರಚಾರ ಮಾಡುವುದು ಅವರ ಹಕ್ಕಾಗಿದ್ದು, ಅವರು ಅದನ್ನು ಮಾಡಲಿ. ಆದರೆ ರಾಜ್ಯದ ಯುವಕರು ರಾಹುಲ್ ಗಾಂಧಿ ಅವರ ಮಾತು ಕೇಳುತ್ತಾರೆಯೇ ಎಂಬುದು ಮುಖ್ಯವಾಗಿದ್ದು, ಈ ಪ್ರಶ್ನೆಗೆ ಇಲ್ಲ ಎಂಬ ಉತ್ತರ ಸಿಗುತ್ತದೆ ಎಂಬುದು ಕಾಂಗ್ರೆಸ್ಗೂ ಗೊತ್ತಿದೆ ಎಂದು ಕಟೀಲ್ ಲೇವಡಿ ಮಾಡಿದರು.
ರಾಜ್ಯ ಕಾಂಗ್ರೆಸ್ ನಾಯಕರು ರಾಹುಲ್ ಅವರನ್ನು ಕರೆದುಕೊಂಡು ಬಂದು, ಅವರನ್ನು ತಮ್ಮ ನಾಯಕ ಎಂದು ಬಿಂಬಿಸುತ್ತಿದ್ದಾರೆ. ರಾಹುಲ್ ಅವರ ನಾಯಕತ್ವವನ್ನು ಕಾಂಗ್ರೆಸ್ ಹೊರತುಪಡಿಸಿ ದೇಶದ ಯಾರಿಬ್ಬರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.