ಪುತ್ತೂರು: ಜಾಗೃತ ಸಮಾಜದಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದ್ದು, ಮಹಿಳೆಯರು ಜಾಗೃತರಾದರೆ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಸಂವಿಂಧಾನಬದ್ಧ ಹಕ್ಕು ಚಲಾಯಿಸಲು ಅವಕಾಶ, ಅನ್ಯಾಯ ಆದಾಗ ನ್ಯಾಯ ಕೊಡುವ ಕೆಲಸ ನಮ್ಮೆಲ್ಲರಿಂದ ಆಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಮಂಗಳವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಜಂಟಿ ಆಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಠಾರದಲ್ಲಿ ನಡೆದ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ನೆಲೆಯಲ್ಲಿ ಮಹಿಳೆಗೆ ಕಾನೂನು ಕಾಯ್ದೆಯಲ್ಲಿ ಸ್ವಾವಲಂಬಿ, ಸ್ವಾಭಿಮಾನ ಬದುಕು ಕಲ್ಪಿಸುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಮಹಿಳಾ ದಿನಾಚರಣೆಗಳನ್ನು ಆಚರಿಸಲಾಗುತ್ತಿದೆ ಎಂದ ಅವರು, ಪ್ರಸ್ತುತ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸುವ ಮೂಲಕ ತನ್ನತನವನ್ನು ಎತ್ತಿಹಿಡಿದಿದ್ದಾಳೆ. ಇದಕ್ಕೆ ಪೂರಕವಾಗಿ ಮಹಿಳೆಯರನ್ನು ಸಮಾಜಮುಖಿ, ಆರ್ಥಿಕ, ಶೈಕ್ಷಣಿಕವಾಗಿ ಬೆಳೆಸಿದರೆ ಸಮಾಜದ ಅಭಿವೃದ್ಧಿ ಸಾಧ್ಯ. ಇದಕ್ಕೆ ಸಿಡಿಪಿಒ, ಅಂಗನವಾಡಿ ಕೇಂದ್ರಗಳು ಪೂರಕ ಚಟುವಟಿಕೆಯ ಕೇಂದ್ರಗಳಾಗಿದೆ ಎಂದು ಹೇಳಿದರು.
ಸ್ತ್ರೀಶಕ್ತಿ, ಅಂಗನವಾಡಿಗಳ ಸಮಸ್ಯೆಗಳಿಗೆ ಸ್ಪಂದಿಸಿ ವಿಧಾನಸಭೆಯಲ್ಲಿ ಧ್ವನಿ ಎತ್ತಿದವರು ಶಾಸಕ ಮಠಂದೂರು : ಶ್ರೀಲತಾ
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ಯುಗಕ್ಕೆ ಯಾವ ರೀತಿಯಾಗಿ ಸ್ಮಾರ್ಟ್ ಕ್ಲಾಸ್‌ಗಳನ್ನು ಅಂಗನವಾಡಿಗಳಿಗೆ ಒದಗಿಸಿ ಅಂಗನವಾಡಿ ಪುಟಾಣಿಗಳು ಆಧುನಿಕ ತಂತ್ರಜ್ಞನಗಳನ್ನು ಎಳೆವೆಯಲ್ಲೇ ಬಳಸಿಕೊಳ್ಳುವ ನಿಟ್ಟಿನಲ್ಲಿ ವ್ಯವಸ್ಥೆಗಳನ್ನು ಪುತ್ತೂರು ಶಾಸಕರು ಮಾಡಿದ್ದಾರೆ. ಸ್ತ್ರೀಶಕ್ತಿ, ಅಂಗನವಾಡಿ ಕೇಂದ್ರಗಳ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅತ್ಯಂತ ಹೆಚ್ಚು ವಿಧಾನಸಭೆಯಲ್ಲಿ ಧ್ವನಿ ಎತ್ತಿದವರು ಶಾಸಕರು. ಅಲ್ಲದೆ ಮೂಲಭೂತ ಸೌಕರ್ಯ, ಅನುದಾನಗಳನ್ನು ಒದಗಿಸಿಕೊಡುವಲ್ಲಿಯೂ ಶಾಸಕರ ಪಾತ್ರ ಬಹುಮುಖ್ಯವಾಗಿದೆ ಎಂದರು.
ವೇದಿಕೆಯಲ್ಲಿ ಕಾನೂನು ಸಲಹೆಗಾರರಾದ ಹೀರಾ ಉದಯ್, ಸ್ತ್ರೀ ಶಕ್ತಿ ಸೊಸೈಟಿ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ, ಜಿಲ್ಲಾ ಸ್ತ್ರೀಶಕ್ತಿ ಬ್ಲಾಕ್ ಅಧ್ಯಕ್ಷೆ ಮಮತಾ, ಒಕ್ಕೂಟದ ಪುತ್ತೂರು ಯೂನಿಯನ್ ಸಹಾಯಕಿ ಕಮಲ, ಕಾರ್ಯದರ್ಶಿ ಮಮತಾ, ಬ್ಲಾಕ್ ಸೊಸೈಟಿ ಅಧ್ಯಕ್ಷೆ ವೇದಾವತಿ ಉಪಸ್ಥಿತರಿದ್ದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು ಅವರು ಸನ್ಮಾನಿಸಲಾಯಿತು. ಜಿಲ್ಲಾ ಮಟ್ಟದ ನಾವಿನ್ಯತೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ಅನ್ವಿತ್ ಹಾಗೂ ಧನ್ಯಶ್ರೀ ಅವರನ್ನು ಸನ್ಮಾನಿಸಲಾಯಿತು. ಸಾಮಾಜಿಕವಾಗಿ ಕೆಲಸ ಕಾರ್ಯ ಮಾಡಿದ ಸ್ತ್ರೀಶಕ್ತಿಯ ಹೇಮಶ್ರೀ, ರಾಜ್ಯಪ್ರಶಸ್ತಿ ಪಡೆದ ನಿಡ್ಪಳ್ಳಿ ಅಂಗನವಾಡಿಯ ಅನಿತಾ, ಜಿಲ್ಲಾ ಮಟ್ಟದ ಅತ್ಯುತ್ತಮ ಅಂಗನವಾಡಿ ಪ್ರಶಸ್ತಿ ಪಡೆದ ಪುಳಿಕುಕ್ಕು ಅಂಗನವಾಡಿಯ ಸವಿತಾ ಹಾಗೂ ಇಲಾಖೆಯಲ್ಲಿ ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿದ ನಿವೃತ್ತರಾದ ಶಶಿ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.