ಪುತ್ತೂರು: ಬೊಳುವಾರು ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಬಳಿಯಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಸ್ಥಳದಲ್ಲಿ ಮಾರ್ಚ್ 24ರಂದು ಜನಜಾಗೃತಿ ಸಭೆ, ಆಶ್ಲೇಷ ಬಲಿ, ಧಾರ್ಮಿಕ ಸಭೆ, ಅರ್ಧ ಏಕಾಹ ಭಜನೆ ನಡೆಯಲಿದೆ ಎಂದು ಹಿಂಜಾವೇ ಮಂಗಳೂರು ವಿಭಾಗ ಸಹಸಂಚಾಲಕ ಅಜಿತ್ ರೈ ಹೊಸಮನೆ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 6ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಸಂಜೆ 7ಕ್ಕೆ ಜನಜಾಗೃತಿ ಸಭೆ ಆಯೋಜಿಸಲಾಗಿದೆ. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಕರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ, ಪುತ್ತೂರು ಆದರ್ಶ ಆಸ್ಪತ್ರೆ ವೈದ್ಯ ಡಾ. ಎಂ.ಕೆ. ಪ್ರಸಾದ್ ಭಂಡಾರಿ ಅಧ್ಯಕ್ಷತೆ ವಹಿಸುವರು. ಧಾರ್ಮಿಕ ಮುಖಂಡ ವೇದಮೂರ್ತಿ ಕುಂಟಾರು ರವೀಶ ತಂತ್ರಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಹಿಂಜಾವೇ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ್ ಕಡಬ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾನ್ ಸುಳ್ಳಿ ಮುಖ್ಯ ಅತಿಥಿಯಾಗಿರುವರು ಎಂದರು.
ಮಾರ್ಚ್ 24ರಂದು ಬೆಳಿಗ್ಗೆ 6ಕ್ಕೆ ಗಣಪತಿ ಹೋಮ ನಡೆಯಲಿದೆ. 7 ಗಂಟೆಗೆ ಅರ್ಧ ಏಕಾಹ ಭಜನೆ ಆರಂಭಗೊಳ್ಳಲಿದ್ದು, ಸಂಜೆ 6ಕ್ಕೆ ಆಶ್ಲೇಷ ಬಲಿ ಆರಂಭಗೊಳ್ಳಲಿದೆ. ಸಂಜೆ 7ಕ್ಕೆ ಜನಜಾಗೃತಿ ಸಭೆ ನಡೆಯಲಿದ್ದು, ರಾತ್ರಿ 8ಕ್ಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಂಚಾಲಕ ದಿನೇಶ್ ಪಂಜಿಗ, ಸದಸ್ಯ ಪುಷ್ಪರಾಜ್ ದರ್ಬೆ ಉಪಸ್ಥಿತರಿದ್ದರು.