ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ 2,500 ಕೋ. ರೂ. ಟಿಡಿಆರ್‌ ಹಗರಣ ಎಂದು ಬಿಜೆಪಿ ಆರೋಪ

ಬೆಂಗಳೂರು : ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಟಿಡಿಆರ್‌ಗೆ ಸಂಬಂಧಿಸಿದಂತೆ ನಡೆದಿರುವ ಬೃಹತ್‌ ಹಗರಣವನ್ನು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಬಯಲಿಗೆಳೆದಿದ್ದು, ದಾಖಲೆ ಬಿಡುಗಡೆ ಮಾಡಿದ್ದಾರೆ.
ಈ ಸಂಬಂಧ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಬಿಬಿಎಂಪಿ ಇತಿಹಾಸದಲ್ಲಿಯೇ 2,500 ಕೋಟಿ ರೂ. ಮೊತ್ತದ ಅತಿ ದೊಡ್ಡ ಹಗರಣವಾಗಿದ್ದು, ಬಿಬಿಎಂಪಿ ಎಂದು ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್‌ ಪ್ರದೇಶ ಯೋಜನಾ ಪ್ರಾಧಿಕಾರ (ಬಿಎಂಐಸಿಎಪಿಎ) ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೊಡಿಯಾಲ ಕರೇನಹಳ್ಳಿ ಗ್ರಾಮದ ವಿವಿಧ ಸರ್ವೇ ನಂಬರ್‌ನ ಒಟ್ಟು 40.09 ಎಕರೆಯಷ್ಟು ವಿಸ್ತೀರ್ಣದ ಸೊತ್ತನ್ನು ಅಲ್ಲಿನ ರೈತರಿಂದ 2011-12ರಲ್ಲಿ ಕೇವಲ ಲಕ್ಷ ರೂ.ಗೆ ಕ್ರಯಕ್ಕೆ ಪಡೆಯಲಾಗಿದೆ. ನಂತರ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂಬ ವರಸೆಯನ್ನು ಪ್ರಾರಂಭಿಸಲಾಗಿದೆ ಎಂದು ಆರೋಪಿಸಿದರು.
ಮೇಲ್ನೋಟಕ್ಕೆ ಇದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ ನೀಡುತ್ತಿದ್ದಾರೆ ಎಂಬ ಭಾವನೆ ಮೂಡುತ್ತದೆ. ಆದರೆ, ಅವರ ಪ್ರಸ್ತಾವನೆಯ ಹಿಂದೆ ಇದ್ದಂತಹ ಬೃಹತ್‌ ಮಟ್ಟದ ಮಹಾವಂಚನೆ ಕ್ರಿಮಿನಲ್‌ ಯೋಜನೆಯ ದುರುದ್ದೇಶ ಯಾರ ಊಹೆಗೂ ನಿಲುಕದ್ದು ಎಂದು ಗೊತ್ತಾಗುತ್ತದೆ.

ಯಾವುದೇ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನೀಡಲಾಗುವ ಟಿಡಿಆರ್‌ ಅನ್ನು ಅದೇ ಪ್ರಾಧಿಕಾರದ ವ್ಯಾಪ್ತಿಯಲ್ಲಿಯೇ ಬಳಸಬೇಕು ಎಂಬ ನಿಯಮ ಇದೆ. ಆದರೆ ಪಾಲಿಕೆಯ ಹಿರಿಯ ಅಧಿಕಾರಿಗಳು ಮತ್ತು ಬಿಎಂಐಸಿಎಪಿಎ ಅಧಿಕಾರಿಗಳು ಟಿಡಿಆರ್‌ ಮಾಫಿಯಾದೊಂದಿಗೆ ಶಾಮೀಲಾಗಿದ್ದಾರೆ. ಈ ನಡುವೆ ನ್ಯಾಯಾಲಯಕ್ಕೆ ಅರ್ಜಿದಾರರ ದುರುದ್ದೇಶದ ಬಗ್ಗೆ ಮನವರಿಕೆ ಮಾಡಿಕೊಡಬೇಕಿದ್ದ ಬಿಬಿಎಂಪಿ ವಕೀಲರು ಸರಿಯಾಗಿ ವಾದ ಮಂಡಿಸಲಿಲ್ಲ. ಪಾಲಿಕೆ ವಕೀಲ ದೇವೇಂದ್ರಪ್ಪ ನ್ಯಾಯಾಲಯದಲ್ಲಿ ಯಾವುದೇ ಆಕ್ಷೇಪ ವ್ಯಕ್ತಪಡಿಸದೆ ಪರೋಕ್ಷವಾಗಿ ಟಿಡಿಆರ್ ಆರೋಪಿಗಳಿಗೆ ಅನುಕೂಲ ಮಾಡಿಕೊಟ್ಟರು ಹೀಗಾಗಿ ನ್ಯಾಯಾಲಯ ಅರ್ಜಿದಾರರ ಪರವಾದ ಆದೇಶ ನೀಡಿದೆ ಎಂದರು.
40 ಎಕರೆಯನ್ನು ಚದರ ಅಡಿಯಾಗಿ ಪರಿವರ್ತಿಸಿದರೆ, ಅದು 26,44,353 ಚದರ ಅಡಿ ಆಗುತ್ತದೆ. ಬಿಬಿಎಂಪಿ ಮಿತಿಯಲ್ಲಿ ಪ್ರತಿ ಚದರ ಅಡಿಗೆ ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ನಗರಾಭಿವೃದ್ಧಿ ಇಲಾಖೆ ಪರಿಶೀಲಿಸಿ ನಿಲ್ಲಿಸಬೇಕಿತ್ತು ಆದರೆ ಟಿಡಿಆರ್‌ಗೆ ಆದೇಶ ಹೊರಡಿಸಲಾಗಿದೆ ಎಂದರು.
ಇಡೀ ಘಟನೆ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ನಡೆದಿದ್ದು, ಈ ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಿದ್ದೇನೆ, ಹಗರಣದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top