ಶಿವಮೊಗ್ಗ : ಬಿಜೆಪಿ ನಾಯಕ ಕೆ. ಎಸ್.ಈಶ್ವರಪ್ಪ ಅವರು ಆಜಾನ್ ಕುರಿತು ನೀಡಿದ ಹೇಳಿಕೆಯನ್ನು ಪ್ರತಿಭಟಿಸಲು ಯುವಕನೊಬ್ಬ ಜಿಲ್ಲಾಧಿಕಾರಿ ಕಚೇರಿ ಬಳಿ ಆಜಾನ್ ಕೂಗಿದ ಘಟನೆ ಶಿವಮೊಗ್ಗದಲ್ಲಿ ಭಾನುವಾರ ಸಂಭವಿಸಿದೆ. ವಿಧಾನಸೌಧದಲ್ಲೂ ಆಜಾನ್ ಕೂಗುತ್ತೇವೆ ಎಂದು ಈ ಯುವಕರ ತಂಡ ಎಚ್ಚರಿಕೆ ನೀಡಿದೆ.
ಈಶ್ವರಪ್ಪ ಆಜಾನ್ ಕುರಿತ ಹೇಳಿಕೆ ವಿರೋಧಿಸಿ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲ ಯುವಕರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ರಾಗಿಗುಡ್ಡದ ನಿವಾಸಿ ಮೌಸೀನ್ ಎಂಬಾತ ಕಚೇರಿ ಮೇಲೆ ನಿಂತು ಆಜಾನ್ ಕೂಗಿದ್ದ. ಅಲ್ಲದೆ ವಿಧಾನಸೌಧದಲ್ಲೂ ಆಜಾನ್ ಕೂಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದ. ಈ ವೇಳೆ ಆಜಾನ್ ಕೂಗಿ ಉದ್ಧಟತನ ತೋರಿದ ಯುವಕನಿಗೆ ಮುಸ್ಲಿಂ ಮುಖಂಡರು ಬೈದು ಬುದ್ಧಿ ಹೇಳಿದ್ದರು.
ಆಜಾನ್ ಕೂಗುವುದಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದಾರೆ. ಮೌಸಿನ್‍ನನ್ನು ಜಯನಗರ ಠಾಣೆಗೆ ಕರೆತಂದು ಎಚ್ಚರಿಕೆ ನೀಡಿ ಪ್ರಕರಣ ದಾಖಲಿಸಿದ್ದಾರೆ. ಅದಾದ ಬಳಿಕ ಠಾಣಾ ಜಾಮೀನಿನ ಮೇಲೆ ಮೌಸಿನ್‍ನನ್ನು ಬಿಡುಗಡೆ ಮಾಡಿದ್ದಾರೆ.
ಮೌಸೀನ್ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಆಜಾನ್ ಕೂಗಿದಂತ ವೀಡಿಯೋ ವೈರಲ್ ಆಗಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆತನನ್ನು ಜಯನಗರ ಪೊಲೀಸರು ಬಂಧಿಸಿ, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಕೆಲ ದಿನಗಳ ಹಿಂದೆ ಈಶ್ವರಪ್ಪ ಮಂಗಳೂರಿನಲ್ಲಿ ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಷಣ ಮಾಡುತ್ತಿರುವಾಗ ಪಕ್ಕದ ಮಸೀದಿಯಿಂದ ಆಜಾನ್ ಮೊಳಗಿತ್ತು. ಆಗ ಈಶ್ವರಪ್ಪ ನಿಮ್ಮ ಅಲ್ಲಾನಿಗೆ ಕಿವಿ ಕೇಳಿಸೋದಿಲ್ಲವೆ? ಏಕೆ ಹೀಗೆ ಧ್ವನಿವರ್ಧಕ ಬಳಸಿ ಆಜಾನ್ ಕೂಗುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.