ಕಗ್ಗದ ಸಂದೇಶ-

ಮಾನವ ಶಾಶ್ವತವಲ್ಲ ಮಾನವೀಯತೆ ಶಾಶ್ವತ…

ದೇವರ್ಕಳುದಿಸಿ ಮರೆಯಹರು; ದೇವತ್ವ ಚಿರ|
ಜಾವ ದಿನ ಬಂದು ಪೋಗುವುವು; ಕಾಲ ಚಿರ||
ಜೀವದ ವ್ಯಕ್ತಿ ಸಾಯ್ವುದು; ಜೀವಸತ್ತ್ವ ಚಿರ|
ಭಾವಿಸಾ ಕೇವಲವ – ಮಂಕುತಿಮ್ಮ||
ಒಂದೊಂದು ಕಾಲದಲ್ಲಿ ನಾವು ಒಂದೊಂದು ದೇವರಿಗೆ ಪೂಜೆ ಸಲ್ಲಿಸುತ್ತಿರುವುದು ಚರಿತ್ರೆಯಿಂದ ನಮಗೆ ತಿಳಿಯುತ್ತದೆ. ಒಂದು ಕಾಲದಲ್ಲಿದ್ದ ದೇವರು ಇನ್ನೊಂದು ಕಾಲದಲ್ಲಿ ಮರೆಯಾಗಿ ಹೋಗಿರುವುದನ್ನು ನಾವು ಕಾಣಬಹುದು. ದೇವರುಗಳು ಕಾಲಕಾಲಕ್ಕೆ ಬದಲಾಗಬಹುದು ಆದರೆ ಮನುಷ್ಯ ಶಕ್ತಿಗಿಂತ ಮಿಗಿಲಾದ ನಾವು ಹಿಂದಿನಿಂದ ನಂಬಿಕೊಂಡು ಬಂದ ಒಂದು ದೈವಿಕ ಶಕ್ತಿ ಅಥವಾ ದೇವತ್ವ‌ ಎನ್ನುವುದು ಶಾಶ್ವತವಾದದ್ದು. ಜಾವ, ದಿನ ಬಂದು ಹೋಗುತ್ತದೆ ಆದರೆ ಕಾಲ ಎನ್ನುವುದು ಶಾಶ್ವತವಾದದ್ದು. ಜೀವದ ವ್ಯಕ್ತಿ ಸಾಯುತ್ತಾನೆ ಆದರೆ ಆ ಜೀವಶಕ್ತಿ ಶಾಶ್ವತವಾಗಿ ಮುಂದುವರಿಯುತ್ತದೆ. ಹೀಗೆ ಯಾವುದು ಶಾಶ್ವತ ಯಾವುದು ನಶ್ವರ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.

ಜೀವಾತ್ಮ ಪರಮಾತ್ಮ ಬೇರಿಲ್ಲವೀಕ್ಷಿಸಲು|
ಭಾವಿಪೊಡೆ ಪರಮಾತ್ಮವೊಂದೆ ನಿಜದಿ||
ಸಾವ ದೇಹವ ಹೊತ್ತ ವೇಳೆಯೊಳು ಮಾತ್ರವದು|
ಜೀವಾತ್ಮವೆನಿಪುದೈ–ಬೋಳುಬಸವ||



































 
 

ಎಂಬ ಕವಿ ನಿಜಗುಣರ ಮಾತಿನಂತೆ ದೇಹ ನಶ್ವರ ಆದರೆ ದೇಹದೊಳಗಿರುವ ಆತ್ಮಕ್ಕೆ ಸಾವಿಲ್ಲ. ಸೃಷ್ಟಿಯಲ್ಲಿರುವ ಸಕಲ ಜೀವರಾಶಿಗಳು ಅಳಿಯುತ್ತವೆ ಆದರೆ ಜೀವರಾಶಿಗಳ ಒಳಗಿರುವ ಆತ್ಮಕ್ಕೆ ಅಳಿವಿಲ್ಲ. ಅತ್ಮ ಮತ್ತು ಪರಮಾತ್ಮನ ನಡುವೆ ವ್ಯತ್ಯಾಸವಿಲ್ಲ. ಪರಮಾತ್ಮನ ಒಂದಂಶವೇ ಆತ್ಮ. ಈ ಅಂಶವನ್ನೇ ದೇವತ್ವ ಎನ್ನುವುದು. ಇದನ್ನೇ ಮಾನವ ಯುಗಯುಗಾಂತರಗಳಿಂದಲೂ ನಂಬಿ ಆರಾಧನೆ ಮಾಡಿಕೊಂಡು ಬಂದಿರುವುದು. ಜಗತ್ತಿನ ಆಗುಹೋಗುಗಳನ್ನು ನಿಯಂತ್ರಿಸುವ ಹಾಗೂ ನಿರ್ದೇಶಿಸುವ ಶಾಶ್ವತವಾದ ಈ ದಿವ್ಯಶಕ್ತಿಯ ಮಹತ್ವವನ್ನು ನಾವು ಅರಿತು ಬಾಳಬೇಕು.
ನಾವು ಗಣಿಸುವ ಜಾವ, ದಿನ, ವಾರ, ತಿಂಗಳು, ವರ್ಷ ಇತ್ಯಾದಿ ಕಾಲಮಾನಗಳೆಲ್ಲವೂ ಕಳೆಯುತ್ತಾ ಕಾಲಪ್ರವಾಹ ಚಿರಂತನವಾಗಿ ಚಲಿಸುತ್ತಿರುತ್ತದೆ. ಅದಕ್ಕಾಗಿಯೇ ‘ಕಾಲಾಯ ತಸ್ಮೈ ನಮಃ’ ಎಂದಿರುವುದು.

ಉರುಳುವವು ಘಳಿಗೆಗಳು
ಹೊರಳುವವು ದಿವಸಗಳು
ತುದಿಮೊದಲು ಹೊಂದಿರದ
ಅನಂತತೆಯ ಕಡೆಗೆ

ಎಂಬ ಕವಿವಾಣಿಯಂತೆ ಕಾಲಕ್ಕೆ ಆದಿ ಅಂತ್ಯ ಎನ್ನುವುದು ಇಲ್ಲ. ಈ ಕಾಲಪ್ರವಾಹದಲ್ಲಿ ಕಳೆದುಹೋಗುವ ನಮ್ಮ ಬದುಕು ಶಾಶ್ವತವಾಗಿ ನಿಲ್ಲುವುದು ಸತ್ಕರ್ಮಗಳಿಂದ. ಮಾನವ ಶಾಶ್ವತವಲ್ಲ ಮಾನವೀಯತೆ ಶಾಶ್ವತ. ಸ್ವಾರ್ಥದಿಂದ ಬದುಕಿದರೆ ಬದುಕಿದ್ದು ಸತ್ತ ಹಾಗೆ, ಪರೋಪಕಾರಿಯಾಗಿ ನಿಸ್ವಾರ್ಥದಿಂದ ಬದುಕಿದವರು ಸತ್ತ ಮೇಲೂ ಬದುಕುತ್ತಾರೆ ಮತ್ತು ಶಾಶ್ವತವಾಗಿ ಉಳಿಯುತ್ತಾರೆ. ‘ಅಳಿಯುವುದು ಕಾಯ ಉಳಿಯುವುದು ಕೀರ್ತಿ’ ಎನ್ನುವದರಿತು ಒಳ್ಳೆಯ ಯೋಚನೆ, ಒಳ್ಳೆಯ ಮಾತು ಹಾಗೂ ಒಳ್ಳೆಯ ಕೆಲಸದ‌ ಮೂಲಕ ಮಾನವನಾಗಿ ಮಾನವೀಯತೆ ಎಂಬ ಜೀವಸತ್ವ ಅಥವಾ ದೈವತ್ವ ಮೆರೆದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
✒️ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕಸಾಪ ಕಾರ್ಕಳ ಘಟಕ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top