ಪುತ್ತೂರು: ಗುರಿಯನ್ನು ನಿರ್ಧರಿಸಿ ಕಾರ್ಯಯೋಜನೆಯನ್ನು ತಯಾರಿಸಿದ ಮೇಲೆ ಪ್ರತಿದಿನ ನಿಷ್ಠೆಯಿಂದ ಶ್ರಮವಹಿಸಿ ಅಭ್ಯಾಸ ಮಾಡಿದರೆ ನಮ್ಮ ನಾಳೆಗಳು ಉಜ್ವಲವಾಗುವುದರಲ್ಲಿ ಸಂದೇಹವಿಲ್ಲ ಎಂದು ಪುತ್ತೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಶ್ರೀಕಾಂತ್ ಪೂಜಾರಿ ಬಿರಾವು ಹೇಳಿದರು.
ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.



ಆಧುನಿಕ ಯುಗದಲ್ಲಿ ಎಲ್ಲರೂ ತ್ವರಿತಗತಿಯ ಫಲಿತಾಂಶವನ್ನೇ ಬಯಸುತ್ತಾರೆ. ಆದರೆ ಅಭ್ಯಾಸವಿಲ್ಲದ ಸಾಧನೆಗಳು ಕ್ಷಣಿಕ ಫಲಿತಾಂಶವನ್ನು ನೀಡಬಲ್ಲದೇ ಹೊರತು ಭವಿಷ್ಯಕ್ಕೆ ಸಹಕಾರಿಯಾಗಲಾರದು ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಕೆ. ಮಾತನಾಡಿ, ಜೀವನದಲ್ಲಿ ಎಡರು ತೊಡರುಗಳು, ಜಯ ಅಪಜಯಗಳು ಸಾಮಾನ್ಯ. ಅದನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಅದನ್ನು ಸವಾಲಾಗಿ ಸ್ವೀಕರಿಸುವ ಮತ್ತು ಅದರಿಂದ ಪಾಠ ಕಲಿಯುವ ಸಾಧ್ಯತೆ ಮಾತ್ರ ನಮಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ವಿಶ್ವಾಸ್ ಶೆಣೈ ಮಾತನಾಡಿ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪಾಠ ಹಾಗೂ ಪಠ್ಯೇತರ ವಿಷಯಗಳಿಗೆ ಸಮಾನ ಅವಕಾಶವನ್ನು ನೀಡುತ್ತಿದೆ. ಇದರ ಪ್ರಯೋಜನವನ್ನು ಪಡೆದು ವಿಶ್ವವಿದ್ಯಾಲಯ ಮಟ್ಟದಲ್ಲಿ ಚಾಂಪಿಯನ್ನರಾಗಿ ಹೊರಹೊಮ್ಮಿದ ವಿದ್ಯಾರ್ಥಿಗಳು ಹಾಗೂ ತರಬೇತುದಾರರು ಅಭಿನಂದನಾರ್ಹರು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ ಕೆ., ಎಲ್ಲರಲ್ಲಿಯೂ ಒಂದೊಂದು ಪ್ರತಿಭೆಗಳು ಅಡಕವಾಗಿರುತ್ತವೆ. ಅದನ್ನು ಗುರುತಿಸಿ ಬೆಳೆಸಿಕೊಳ್ಳಬೇಕು. ಸಾಕಷ್ಟು ಪ್ರಯತ್ನಗಳಿಂದ ಪರಿಪೂರ್ಣರಾಗಬೇಕು ಎಂದರು.
ಭಾರತೀಯ ವಾಯುಪಡೆಯ ವಿಶ್ರಾಂತ ಅಥ್ಲೆಟಿಕ್ ತರಬೇತುದಾರ ರವಿಶಂಕರ್ ಮುಕುಂದ ಅವರು ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಿದರು. ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಸತ್ಯನಾರಾಯಣ ಭಟ್ ಉಪಸ್ಥಿತರಿದ್ದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಸ್ವಾಗತಿಸಿ, ಪ್ರೊ. ಅಜಿತ್ ಕೆ ವಂದಿಸಿದರು. ಪ್ರೊ. ಶ್ರೀಶರಣ್ಯ ಕಾರ್ಯಕ್ರಮ ನಿರೂಪಿಸಿದರು.