ಜಿಲ್ಲೆಯ 4 ರೈತ ಸಂಪರ್ಕ ಕೇಂದ್ರಗಳಲ್ಲಿ 3 ಕೇಂದ್ರ ಪುತ್ತೂರಿಗೆ | ರೈತ ಸಂಪರ್ಕ ಕೇಂದ್ರ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಜಿಲ್ಲೆಗೆ ಮಂಜೂರಾದ 4 ರೈತ ಸಂಪರ್ಕ ಕೇಂದ್ರಗಳಲ್ಲಿ 3 ಕೇಂದ್ರಗಳು ಪುತ್ತೂರಿಗೇ ಮಂಜೂರಾಗಿವೆ. ಈ ಮೂರು ಕೇಂದ್ರಗಳಿಗೂ ಜಾಗದ ಸಮಸ್ಯೆ ಇತ್ತು. ಜಾಗದ ಸಮಸ್ಯೆಯನ್ನು ನಿವಾರಿಸಿ, ಅನುದಾನ ತರಿಸಿ, ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವ ಕೆಲಸ ಆಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡವನ್ನು ಸೋಮವಾರ ದರ್ಬೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಪುತ್ತೂರು, ಉಪ್ಪಿನಂಗಡಿ, ವಿಟ್ಲದಲ್ಲಿ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಉದ್ಘಾಟನೆಗೊಂಡಿದ್ದು, ರೈತರ ಬಳಕೆಗೆ ತೆರೆದುಕೊಂಡಿದೆ. ಈ ಮೂರು ಕೇಂದ್ರಗಳು ಮೊದಲಿಗೆ ಚಾಮರಾಜಪೇಟೆಗೆ ಮಂಜೂರಾಗಿತ್ತು. ಆ ಯೋಜನೆಯನ್ನು ಪುತ್ತೂರಿಗೆ ತಂದು, ಇಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇಂತಹ ರೈತ ಸಂಪರ್ಕ ಕೇಂದ್ರ ರೈತ ಸ್ನೇಹಿಯಾಗಿ, ರೈತರಿಗೆ ಮಾಹಿತಿ ನೀಡುವ ದೃಷ್ಟಿಕೋನದಿಂದ ಕೆಲಸ ಮಾಡಲಿ ಎಂದು ಶುಭಹಾರೈಸಿದರು.































 
 

ಒಂದೇ ಸೂರಿನಡಿಗೆ ಕೃಷಿ ಸಂಬಂಧಿ ಕಚೇರಿಗಳು:

ಇತ್ತೀಚೆಗೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಪುತ್ತೂರಿನಲ್ಲಿ ಆರಂಭವಾಗಿದೆ. ಕೃಷಿ ಇಲಾಖೆಯ ಉಪನಿರ್ದೇಶಕರ ಕಚೇರಿಯೂ ಪುತ್ತೂರಿನಲ್ಲಿದೆ. ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ ಹೀಗೆ ರೈತರಿಗೆ ಅಗತ್ಯವಾದ ಅನೇಕ ಸರ್ಕಾರಿ ಕಚೇರಿಗಳು ಪುತ್ತೂರಿನಲ್ಲಿವೆ. ಇವನ್ನೆಲ್ಲಾ ಒಂದೇ ಸೂರಿನಡಿಗೆ ತರಬೇಕು ಎನ್ನುವ ಕಲ್ಪನೆ ಇದೆ ಎಂದು ಶಾಸಕರು ಸಭೆಯ ಮುಂದಿಟ್ಟರು.

ರೂ.ನಲ್ಲಿ 100 ಪೈಸೆಯೂ ರೈತರಿಗೆ:

ಪ್ರಧಾನ ಮಂತ್ರಿಯವರು ರೈತರ ಮೇಲಿನ ಕಾಳಜಿಯಿಂದ ಜಾರಿಗೆ ತಂದಿರುವ ಕಿಸಾನ್ ಸನ್ಮಾನ್ ಯೋಜನೆಯ ಮೊತ್ತವನ್ನು ರೈತರ ಖಾತೆಗೆ ಜಮೆಯಾಗುತ್ತಿದೆ. ಇದರ ಜೊತೆಗೆ  ರಾಜ್ಯ ಸರಕಾರ ಪಾಲು ರೈತರ ಖಾತೆಗೆ ಜಮೆಯಾಗುತ್ತಿದೆ. ಈ ಬಾರಿಯ ಬಜೆಟ್ ಬಳಿಕ ಮುಖ್ಯಮಂತ್ರಿಯವರು ಘೋಷಣೆ ಮಾಡಿದ ರೈತ ಶಕ್ತಿ ಯೋಜಯ ಇಂಧನ ಸಬ್ಸಿಡಿಯ ಮೊತ್ತವು ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತಿದೆ. ರೈತರ ನೆಮ್ಮದಿಯ ಬದುಕಿಗೆ ಪೂರಕವಾಗಿ ರೈತ ವಿದ್ಯಾನಿಧಿ, ಕಿಸಾನ್ ಸಮ್ಮಾನ್, ಫಸಲ್ ಭಿಮಾ ಯೋಜನೆ ಮೊದಲಾದ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದರ ಮೊತ್ತ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆಯಾಗುತ್ತಿದ್ದು, 1 ರೂ.ನಲ್ಲಿ 100 ಪೈಸೆಯೂ ರೈತರ ಖಾತೆಗೆ ಜಮೆಯಾಗುತ್ತಿದೆ ಎಂದು ಮಠಂದೂರು ಹೇಳಿದರು.

ದಿನವಹಿ ಮಾರುಕಟ್ಟೆಗೆ ಯೋಜನೆ: ಜೀವಂಧರ್ ಜೈನ್

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ರೈತರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ಎಪಿಎಂಸಿ ಕೆಲಸ ನಿರ್ವಹಿಸುತ್ತಿದೆ. ಆದರೆ ದಿನವಹಿ ಮಾರುಕಟ್ಟೆಯ ಅಗತ್ಯ ಎದುರಾಗಿದೆ. ಆದ್ದರಿಂದ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ದಿನವಹಿ ಮಾರುಕಟ್ಟೆ ತೆರೆಯುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.

ಶಾಸಕರಿಗೆ ಅಭಿನಂದನೆ: ವಿಜಯ ಕುಮಾರ್ ರೈ

ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಮಾತನಾಡಿ, ಕೃಷಿಕ ಸಮಾಜಕ್ಕೂ ಜಾಗ ಮಂಜೂರಾಗಿದ್ದು ಅಲ್ಲಿ ರೂ.೪೦ಲಕ್ಷದಲ್ಲಿ ನಿರ್ಮಾಣವಾಗಲಿರುವ ಭವನಕ್ಕೆ ಅಂದಾಜುಪಟ್ಟಿ ಸಿದ್ದವಾಗಿದೆ ಎಂದ ಅವರು, ಪುತ್ತೂರಿನಲ್ಲಿ ಕೃಷಿಕರಿಗೆ ರೈತ ಸಂಪರ್ಕ ಕೇಂದ್ರ ಅಗತ್ಯವಾಗಿತ್ತು. ಇದನ್ನು ಒದಗಿಸುವಲ್ಲಿ ಶಾಸಕ ಸಂಜೀವ ಮಠಂದೂರು ಅವರು ಶ್ರಮಿಸಿದ್ದಾರೆ. ಅವರಿಗೆ ಕೃಷಿಕರ ಪರವಾಗಿ ಅಭಿನಂದನೆ ಸಲ್ಲಿಸಿದರು.

ಮಾಹಿತಿ ಕೇಂದ್ರವಾಗಿ ಬೆಳೆಯಲಿ: ವಿದ್ಯಾಗೌರಿ

ನಗರಸಭೆ ಉಪಾಧ್ಯಕ್ಷೆ ವಿದ್ಯಾಗೌರಿ ಮಾತನಾಡಿ, ಕೃಷಿಗೆ ಸಂಬಂಧಿಸಿದ ವಿಭಿನ್ನ ತಳಿ, ಪರಿಕರಗಳ ಮಾಹಿತಿ, ಸರಕಾರದ ಸೌಲಭ್ಯ ಮೊದಲಾದ ಮಾಹಿತಿ ದೊರೆಯುವಂತಹ ಕೇಂದ್ರ ರೈತ ಸಂಪರ್ಕ ಕೇಂದ್ರ. ಇದು ಕೃಷಿಕರ ಬೃಹತ್ ಮಾಹಿತಿ ಕೇಂದ್ರವಾಗಿ ಬೆಳೆಯಲಿ ಎಂದು ಶುಭಹಾರೈಸಿದರು.

ಹೊಸ ಕಟ್ಟಡಕ್ಕೆ ಶಿವಶಂಕರ್ ಮನವಿ

ಪ್ರಾಸ್ತಾವಿಕವಾಗಿ ಮಾತನಾಡಿದ ಉಪ ಕೃಷಿ ನಿರ್ದೇಶಕ ಶಿವಶಂಕರ್, ಕೃಷಿಗೆ ಸಂಬಂಧಿಸಿದಂತೆ ರೈತರನ್ನು ನೇರವಾಗಿ ತಲುಪುವ ರೈತ ಸಂಪರ್ಕ ಕೇಂದ್ರಗಳಿಗೆ ಶಾಸಕರು ಹೊಸ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದಾರೆ. ಇದೇ ರೀತಿಯಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕರ ಕಚೇರಿ ಬಾಡಿಗೆ ಕಟ್ಟಡದಲ್ಲಿದೆ. ಸಹಾಯಕ ನಿರ್ದೇಶಕರ ಕಚೇರಿಯೂ ಹಳೆ ಕಟ್ಟಡದಲ್ಲಿದೆ. ಆದ್ದರಿಂದ ಈ ಎರಡೂ ಸರ್ಕಾರಿ ಇಲಾಖೆಗಳಿಗೆ ನೂತನ ಕಟ್ಟಡ ಮಂಜೂರುಗೊಳಿಸುವಂತೆ ಶಾಸಕರಲ್ಲಿ ಮನವಿ ಮಾಡಿಕೊಂಡರು.

ಸಹಾಯಕ ಆಯುಕ್ತ ಗಿರೀಶ್ ನಂದನ್ ಉಪಸ್ಥಿತರಿದ್ದರು. ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ವಿವಿಧ ಸವಲತ್ತುಗಳನ್ನು ಇದೇ ಸಂದರ್ಭ ವಿತರಿಸಲಾಯಿತು. ಕೃಷಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಯಶಸ್ ಮಂಜುನಾಥ ಸ್ವಾಗತಿಸಿ, ವಂದಿಸಿದರು. ಸಿಬಂದಿಗಳು ಸಹಕರಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top