ದಾವಣಗೆರೆಯ ವಿಜಯಸಂಕಲ್ಪ ಯಾತ್ರೆ ಸಮಾರೋಪದಲ್ಲಿ ಭಾಗಿ ಹಾಗೂ ಮೆಟ್ರೊ ಮಾರ್ಗ-ಆಸ್ಪತ್ರೆ ಉದ್ಘಾಟನೆ
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಮಾ.25ರಂದು ಮತ್ತೊಮ್ಮೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಚುನಾವಣೆ ಘೋಷಣೆಗಿಂತ ಮುಂಚಿನ ಕೊನೇ ಭೇಟಿ ಕರ್ನಾಟಕ ಭೇಟಿ ಇದಾಗಿರಬಹುದು. ಮಾ.25ರ ಬಳಿಕ ಯಾವುದೇ ಕ್ಷಣದಲ್ಲಿ ಚುನಾವಣಾ ಆಯೋಗ ವಿಧಾನಸಭೆ ಚುನಾವಣೆಯ ದಿನಾಂಕ ಪ್ರಕಟಿಸುವ ಸಾಧ್ಯತೆಯಿದೆ. ಅನಂತರ ಮೋದಿ ಬಂದರೂ ಅದು ಚುನಾವಣಾ ಪ್ರಚಾರಕ್ಕಾಗಿ ಎಂದಾಗುತ್ತದೆ.
ದಾವಣಗೆರೆ ಹೊರವಲಯದ ಜಿಎಂಐಟಿ ಕಾಲೇಜು ಬಳಿ ನಡೆಯಲಿರುವ ಬಿಜೆಪಿಯ ವಿಜಯಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾ.25ರಂದು ಮೋದಿ ಭಾಗಿಯಾಗಲಿದ್ದಾರೆ. ಸುಮಾರು 400 ಎಕರೆ ಪ್ರದೇಶದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 10 ಲಕ್ಷ ಜನ ಸೇರಿಸುವ ನಿರೀಕ್ಷೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸಮಾವೇಶಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, 30ಕ್ಕೂ ಹೆಚ್ಚು ಜೆಸಿಬಿಗಳಿಂದ ಸಮಾವೇಶ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗಿದೆ. ಕಾಂಗ್ರೆಸ್ನ ಸಿದ್ದರಾಮೋತ್ಸವಕ್ಕೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಬಿಜೆಪಿ ಈ ಸಮಾವೇಶವನ್ನು ಬಳಸಿಕೊಳ್ಳಲಿದೆ ಎನ್ನಲಾಗುತ್ತಿದೆ.
ಮಾ.25ರಂದು ಬೆಳಗ್ಗೆ 10.10ಕ್ಕೆ ಎಚ್‌ಎಸಲ್ ಏರ್‌ಪೋರ್ಟ್‌ಗೆ ಆಗಮಿಸುವ ಪ್ರಧಾನಿ ಚಿಕ್ಕಬಳ್ಳಾಪುರದಲ್ಲಿ ಬೆಳಗ್ಗೆ 10.45ಕ್ಕೆ ವೈದ್ಯಕೀಯ ಸಂಸ್ಧೆ ಉದ್ಘಾಟನೆ ಮಾಡಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ವೈಟ್‌ಫೀಲ್ಡ್ ಮೆಟ್ರೋ ಹೊಸ ಮಾರ್ಗ ಉದ್ಘಾಟನೆ ಕಾರ್ಯಕ್ರಮವಿದೆ.
ಉದ್ಘಾಟನೆ ಬಳಿಕ ಮೆಟ್ರೋದಲ್ಲಿ ಮೋದಿ ಪ್ರಯಾಣಿಸುತ್ತಾರೆ. ಮಧ್ಯಾಹ್ನ 3.30ಕ್ಕೆ ದಾವಣಗೆರೆಯಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗಿ. ಸಂಜೆ 5.55ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹೊಸದಿಲ್ಲಿಗೆ ನಿರ್ಗಮಿಸುತ್ತಾರೆ.