ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ ಹಾಗೂ ವರ್ಷಾವಧಿ ಜಾತ್ರೋತ್ಸವ ಮಾ.25 ರಿಂದ 31 ರ ತನಕ ವಿವಿಧ ವೈದಿಕ, ಧಾರ್ಮಿಕ ಸಭಾ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆ,ಮ್ಮಿಂಜೆ ನಾಗೇಶ್ ತಂತ್ರಿಗಳು ಹಾಗೂ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಗೌರವ ಸಲಹೆಗಾರ ಜಯರಾಮ ಕೆದಿಲಾಯ ತಿಳಿಸಿದ್ದಾರೆ.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಜಲುಮಾರು ಕ್ಷೇತ್ರ ಉಮಾ ಹಾಗೂ ಮಹೇಶ್ವರರು ಜತೆಯಾಗಿ ಅನುಗ್ರಹಿಸುವ ಅಪೂರ್ವ ಕ್ಷೇತ್ರವಾಗಿದ್ದು, ಪಾರ್ವತಿ ಸ್ವಯಂವರ ಪೂಜೆ ದೇವರಿಗೆ ವಿಶೇಷ ಸೇವೆಯಾಗಿದೆ. ಕ್ಷೇತ್ರದಲ್ಲಿ ಸ್ವಯಂವರ ಪೂಜೆ ಮಾಡಿಸಿದ ಭಕ್ತಾದಿಗಳಿಗೆ ಮಾಂಗಲ್ಯ ಭಾಗ್ಯ ಲಭಿಸಿದ ಹಲವು ಸಾಕ್ಷಿಗಳಿವೆ ಎಂದು ಅವರು ತಿಳಿಸಿದೆ. ಮಾಂಗಲ್ಯ ಭಾಗ್ಯ ಕರುಣಿಸಲು ಪಾರ್ವತಿ ಸ್ವಯಂವರ ಪೂಜೆಗೆ ಮಜಲುಮಾರು ಕ್ಷೇತ್ರ ದ.ಕ.ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿದೆ. ಜತೆಗೆ ಸಂತಾನ ಪ್ರಾಪ್ತಿಯಾದ ನಿದರ್ಶನ ಗಳೂ ಇವೆ ಎಂದು ಅವರು ವಿವರಿಸಿದರು.
ಬ್ರಹ್ಮಕಲಶೋತ್ಸವದ ಅಂಗವಾಗಿ ಮಾ.25 ಶನಿವಾರ ಬೆಳಿಗ್ಗೆ 9.30 ಕ್ಕೆ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಊರ ಹಾಗೂ ಪರವೂರ ಭಕ್ತಾದಿಗಳಿಂದ ಹಸಿರು ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 5.30 ಕ್ಕೆ ಕ್ಷೇತ್ರದ ತಂತ್ರಿಗಳಿಗೆ ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ, ರಾತ್ರಿ 7 ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಆಚಾರ್ಯದಿ ಋತ್ವಿಗ್ಗರಣ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತುಹೋಮ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಬೆಳಿಗ್ಗೆ 10 ಕ್ಕೆ ಹೊರೆಕಾಣೀಕೆ ಮತ್ತು ಪುಷ್ಪರಥ ಭವ್ಯ ಮೆರವಣಿಗೆ, ಬಳಿಕ ಭಜನಾ ಕಾರ್ಯಕ್ರಮ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾಸ್ತ್ರೀಯ ಸಂಗೀತ, ಹಾಸ್ಯಮಯ ನಾಟಕ “ನಾಡ್‍ಂಡಲ ತಿಕ್ಕಂದ್” ಪ್ರದರ್ಶನಗೊಳ್ಳಲಿದೆ.
ಮಾ.26 ಭಾನುವಾರ ಬೆಳಿಗ್ಗೆ 5 ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು, 12 ಕ್ಕೆ ಹೋಮಗಳ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ. ಬೆಳಿಗ್ಗೆ 10 ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀಶ ತಂತ್ರಿ ಅಧ್ಯಕ್ಷತೆ ವಹಿಸುವರು. ಅವಿನಾಶ ಕೊಡಂಕಿರಿ ಧಾರ್ಮಿಕ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ. ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ನರಿಮೊಗರು ಗ್ರಾಪಂ ಅಧ್ಯಕ್ಷೆ ವಿದ್ಯಾ ಎ., ಉದ್ಯಮಿ ಶ್ರೀನಿವಾಸ ಪೈ ಪಾಲ್ಹೊಳ್ಳಲಿದ್ದಾರೆ.
ಮಾ.27 ರಿಂದ 29 ರ ತನಕ ಮುಂಜಾನೆಯಿಂದ ವೈದಿಕ ಕಾರ್ಯಕ್ರಮಗಳು, ಮಾ.30 ಗುರುವಾರ ಬೆಳಿಗ್ಗೆ 5 ರಿಂದ 108 ಕಾಯಿ ಮಹಾಗಣಪತಿ ಹೋಮ,. 6.32 ರ ಮೀನ ಲಗ್ನ ಶುಭಮುಹೂರ್ತದಲ್ಲಿ ಶ್ರೀ ಉಮಾಮಹೇಶ್ವರ ದೇವರಿಗೆ ಅಷ್ಟಬಂಧಕ್ರಿಯೆ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. 10.30 ಕ್ಕೆ ಶ್ರೀಗಳಿಂದ ರಥ ಸಮರ್ಪಣೆ, ಬಳಿಕ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ ಎಂದು ಅವರು ತಿಳಿಸಿದರು.
ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ವಿತರಣೆ ಮಾ.21 ಮಂಗಳವಾರ ಪುತ್ತೂರು ಪೇಟೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀಶ ತಂತ್ರಿ, ಕೋಶಾಧಿಕಾರಿ ನವೀನ್ ರೈ, ಕಾರ್ಯದರ್ಶಿ ಕೇಶವ ಪೂಜಾರಿ, ಸದಸ್ಯ ಸುಜಯ ತಂತ್ರಿ ಉಪಸ್ಥಿತರಿದ್ದರು.