ಪುತ್ತೂರು: ಮೊಬೈಲಿಗಿಂತಲೂ ಪುಸ್ತಕದ ಮಾಹಿತಿ ಶಾಶ್ವತ. ಆದ್ದರಿಂದ ಯುವಕರು ದಿನದ ಕನಿಷ್ಠ 1 ಗಂಟೆಯನ್ನಾದರೂ ಗ್ರಂಥಾಲಯಕ್ಕೆ ನಮ್ಮ ಸಮಯವನ್ನು ಮೀಸಲಿಡಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರಿನ ಪರ್ಲಡ್ಕ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ಸೋಮವಾರ ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಸುಸಂಸ್ಕೃತವಾಗಿದೆ ಅಂದರೆ ಅದಕ್ಕೆ ಸಾಹಿತ್ಯವೇ ಪ್ರಮುಖ ಕಾರಣ. ಸುಸಂಸ್ಕೃತತೆಯ ಜೊತೆಗೆ, ದೇಶ ದೊಡ್ಡ ಮಟ್ಟಿನ ಬೆಳವಣಿಗೆಗಳನ್ನು ಕಂಡಿವೆ. ಇದು ಗ್ರಂಥಾಲಯ, ಸಾಹಿತ್ಯದಿಂದ ಸಾಧ್ಯವಾಯಿತು. ಆದ್ದರಿಂದ ಪುತ್ತೂರಿನ ಜನರು ಬಾಲವನದ ಗ್ರಂಥಾಲಯಕ್ಕೆ ಬಂದು, ಇಲ್ಲಿ ಓದುವ ಹವ್ಯಾಸ ಮುಂದುವರಿಸಬೇಕು ಎಂದರು.
ಗ್ರಂಥಾಲಯಕ್ಕೆ ಟೈಂ ಪಾಸ್‍ಗಾಗಿ ಹೋಗುವುದು ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಇದು ಸರಿಯಲ್ಲ. ಇಂತಹ ಭಾವನೆಯನ್ನು ಹೋಗಲಾಡಿಸುವ ದೃಷ್ಟಿಕೋನದಿಂದ ವೈವಿಧ್ಯಮಯ ಪುಸ್ತಕಗಳನ್ನು ಇಲ್ಲಿ ಇಡಲಾಗಿದೆ. ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಪುಸ್ತಕಗಳನ್ನು ಇಡಲಾಗುವುದು ಎಂದರು.
ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ನಾಟ್ಯಶಾಲೆಯ ನಿರ್ಮಾಣ ಕಾರ್ಯ ನಡೆಯುತ್ತಿರುವ ಜೊತೆಗೆ ಇಂದು ಗ್ರಂಥಾಲಯವೂ ಉದ್ಘಾಟನೆಗೊಂಡಿದೆ. ಆದ್ದರಿಂದ ಇಂದು ಶುಭದಿನ. ಈ ಗ್ರಂಥಾಲಯವನ್ನು ಜನರಿಗೆ ತಲುಪಿಸುವಲ್ಲಿ ಅಭಿಯಾನದ ರೀತಿಯ ಕೆಲಸಗಳು ಅಗತ್ಯವಿದೆ ಎಂದರು.
ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಐಟಿ-ಬಿಟಿ ಬಂದಿದ್ದರೂ ಗ್ರಂಥಾಲಯಗಳ ಮಹತ್ವ ಕಡಿಮೆಯಾಗಿಲ್ಲ. ಆದ್ದರಿಂದ ಗ್ರಂಥಾಲಯಗಳ ಅಭಿವೃದ್ಧಿಗೆ ನಗರಸಭೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ನಗರಸಭೆ ಉಪಾಧ್ಯಕ್ಷೆ ವಿದ್ಯಾಗೌರಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಅವಕಾಶಗಳು ಇಂದು ಹೆಚ್ಚುತ್ತಿದ್ದು, ಇದಕ್ಕೆ ಪೂರಕ ವ್ಯವಸ್ಥೆಗಳನ್ನು ಮಾಡಿಕೊಡುವ ಅಗತ್ಯವಿದೆ ಎಂದರು.
ನಗರಸಭೆ ಸದಸ್ಯೆ ದೀಕ್ಷಾ ಪೈ ಶುಭಹಾರೈಸಿದರು. ಪಿಡಬ್ಲ್ಯೂಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಾರಾಮ್, ರಾಜೇಶ್ ಬನ್ನೂರು ಉಪಸ್ಥಿತರಿದ್ದರು. ಗ್ರಂಥಾಲಯ ಇಲಾಖೆಯ ಜಿಲ್ಲಾ ಅಧಿಕಾರಿ ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು.