ಪುತ್ತೂರು: ಬನ್ನೂರು ಗ್ರಾಪಂ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು-ರಾಗಿದಕುಮೇರು-ಅಂದ್ರಟ್ಟ-ಪುರುಷರಕಟ್ಟೆ ಸಂಪರ್ಕ ರಸ್ತೆಗೆ ಸುಮಾರು 1.80 ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಭಾನುವಾರ ಸಂಜೆ ನಡೆಯಿತು.
ಶಾಸಕ ಸಂಜೀವ ಮಠಂದೂರು ತೆಂಗಿನಕಾಯಿ ಒಡೆಯುವ ಮೂಲ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ನಾವು ಸರ್ವ ಸ್ವತಂತ್ರರಾದರೂ ನಮ್ಮ ಬೇಡಿಕೆಗಳು ಮುಗಿಯುವುದಿಲ್ಲ. ಇದಕ್ಕೆ ಇತಿಶ್ರೀ ಹಾಕಲು ಪ್ರಧಾನಿ ಮೋದಿಯವರು ಎಲ್ಲರಿಗೂ ಎಲ್ಲವನ್ನೂ ನೀಡುತ್ತಿದ್ದಾರೆ. ಅದನ್ನು ಸಾಕಾರಗೊಳಿಸಲು ನಮ್ಮಂತ ಜನಪ್ರತಿನಿಧಿಗಳಿಗೆ ಅವಕಾಶ ಸಿಕ್ಕಿದೆ ಎಂದ ಅವರು, ರೈತಾಪಿ ವರ್ಗಕ್ಕೆ ಕಿಸಾನ್ ಸಮ್ಮಾನ್ ಸಹಿತ ಇನ್ನಿತರ ಯೋಜನೆಗಳು ಭ್ರಷ್ಟಾಚಾರ ಮುಕ್ತವಾಗಿ ನೇರವಾಗಿ ಅವರ ಖಾತೆಗಳಿಗೆ ಜಮೆ ಆಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಗೂ ಇಂದು ಸರ್ಕಾರ ವೈಯಕ್ತಿಕವಾಗಿ ಸಾವಿರಾರು ರೂಪಾಯಿಗಳನ್ನು ಕೊಡ್ತಾ ಇದೆ. ಜಲಮಿಷನ್ ಯೋಜನೆಯಲ್ಲಿ ಪುತ್ತೂರು ತಾಲೂಕಿಗೆ 67 ಕೋಟಿ ರೂ. ಯೋಜನೆ ಕುಡಿಯುವ ನೀರು, 75 ಯೂನಿಟ್ ಉಚಿತ ವಿದ್ಯುತ್, ರೈತರಿಗೆ 0% ಅಲ್ಲಿ 3 ಲಕ್ಷ ಸಾಲ ಕೊಡುವ ಸಂಗತಿ ಆಗಿದೆ ಎಂದರು.
ಗ್ರಾಮೀಣ ರಸ್ತೆಗಳು ಅಭಿವೃದ್ಧಿ : ಜಯಂತಿ
ಮುಖ್ಯ ಅತಿಥಿಯಾಗಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಯಂತಿ ಮಾತನಾಡಿ, ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಮೇಲೆ ಪುತ್ತೂರು ಶಾಸಕರು ಬಹುಕೋಟಿ ಅನುದಾನ ನೀಡುವ ಮೂಲಕ ನಾದುರಸ್ತಿಯಲ್ಲಿದ್ದ ಗ್ರಾಮೀಣ ಪ್ರದೇಶಗಳ ಹಲವಾರು ರಸ್ತೆಗಳು ಅಭಿವೃದ್ಧಿಗೊಂಡಿದೆ. ಜತೆಗೆ ಸಾಕಷ್ಟು ಕಿಂಡಿ ಅಣೆಕಟ್ಟುಗಳ ನಿರ್ಮಾಣ ಆಗಿದೆ. ಇದೀಗ ಮೂರು ಗ್ರಾಮಗಳ ಸುಮಾರು 500 ಕ್ಕೂ ಮಿಕ್ಕಿ ಮನೆಗಳನ್ನು ಸಂಪರ್ಕಿಸುವ ಅಂದ್ರಟ್ಟದಲ್ಲಿ ಸೇತುವೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡುವ ಮೂಲಕ ಬೇಡಿಕೆ ಈಡೇರಿದಂತಾಗಿದೆ ಎಂದರು.
ಅಂದ್ರಟ್ಟ ಸೇತುವೆ ಕನಸು ನನಸು : ಜಯ ಏಕ
ಬನ್ನೂರು ಗ್ರಾಪಂ ಅಧ್ಯಕ್ಷೆ ಜಯ ಏಕ ಮಾತನಾಡಿ, ಬಹು ವರ್ಷಗಳ ಬೇಡಿಕೆ ಅಂದ್ರಟ್ಟ ಸೇತುವೆ ಕನಸನ್ನು ಕ್ಷೇತ್ರದ ಶಾಸಕರು ಅನುದಾನ ನೀಡುವ ಮೂಲಕ ನನಸು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅವರನ್ನು ಅಭಿನಂದಿಸಿದರು.
ಶಾಂತಿಗೋಡು ಶಕ್ತಿ ಕೇಂದ್ರದ ಅಧ್ಯಕ್ಷ ಶ್ಯಾಮ್ ಭಟ್ ಶುಭ ಹಾರೈಸಿದರು. ವೇದಿಕೆಯಲ್ಲಿ ನಗರಸಭೆ ಸದಸ್ಯ ರೋಹಿಣಿ, ಬನ್ನೂರು ಗ್ರಾಪಂ ಸದಸ್ಯರಾದ ಸ್ಮಿತಾ, ನರಿಮೊಗರು ಗ್ರಾಪಂ ಉಪಾಧ್ಯಕ್ಷ ಸುಧಾಕರ ಕುಲಾಲ್, ಸದಸ್ಯ ಗಣೇಶ್, ಬೂತ್ ಅಧ್ಯಕ್ಷ ಕಾರ್ತಿಕ್ ಅಂದ್ರಟ್ಟ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ಥಳದಾನ ಮಾಡಿದವರನ್ನು ಗೌರವಿಸಲಾಯಿತು. ಶಾಸಕ ಸಂಜೀವ ಮಠಂದೂರು ಅವರನ್ನು ಹಾರ ಹಾಕಿ, ಪೇಟತೊಡಿಸಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಋತ್ವಿಕ ಪ್ರಾರ್ಥನೆ ಹಾಡಿದರು. ಪ್ರಶಾಂತ್ ವಿ.ಗೌಡ ಸ್ವಾಗತಿಸಿದರು. ಪಂಚಾಯತ್ ಸದಸ್ಯ ರಾಘವೇಂದ್ರ ಅಂದ್ರಟ್ಟ ವಂದಿಸಿದರು. ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಟಿ.ಎಸ್. ಕಾರ್ಯಕ್ರಮ ನಿರೂಪಿಸಿದರು.