ಪುತ್ತೂರು: ನಗರದ ಬಪ್ಪಳಿಗೆಯಲ್ಲಿರುವ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ್ನು ಅಳವಡಿಸುವ ಮೂಲಕ ಜೀವನ ಕೌಶಲ್ಯ ತರಬೇತಿಯನ್ನು ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗುವುದು ಎಂದು ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ತಿಳಿಸಿದ್ದಾರೆ.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೊಸತನ ಹಾಗೂ ವಿನೂತನ ಕಲ್ಪನೆಗಳ ಸಾಕಾರ ಕೇಂದ್ರವೆನಿಸಿರುವ ಅಂಬಿಕಾ ಸಂಸ್ಥೆ ಅನೇಕ ಮೊದಲುಗಳನ್ನು ಹುಟ್ಟು ಹಾಕಿದೆ. ಇದೀಗ ಮತ್ತೊಂದು ಮೈಲಿಗಲ್ಲು ಎಂಬಂತೆ ಸಿಬಿಎಸ್‌ಇ ಸಂಸ್ಥೆಯಲ್ಲಿ 5 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪಠ್ಯಕ್ರಮವಾಗಿ ತೆಗೆದುಕೊಳ್ಳಲಿದೆ. ಈ ಮೂಲಕ ಸ್ವಭಿಮಾನ, ಸ್ವಾವಲಂಬಿಯಾಗಿ ಜೀವನ ನಡೆಸುವುದನ್ನು ತಿಳಿಸಿಕೊಡುವತ್ತ ದಾಪುಗಾಲು ಹಾಕಿದೆ ಎಂದರು.
ನ್ಯಾನೋ ಭಾಗಗಳ ಸಿದ್ಧಪಡಿಸುವಿಕೆಯಲ್ಲಿ ಚೀನಾ ಮೇಲುಗೈ ಸಾಧಿಸಿದ್ದು, ಇದನ್ನು ಲಘುವಾಗಿ ಪರಿಗಣಿಸಿದಲ್ಲಿ ಮುಂದಿನ ದಿನಗಳಲ್ಲಿ ಚೀನಾದ ತಾಂತ್ರಿಕ ದಾಸ್ಯಕ್ಕೆ ಒಳಗಾಗಬೇಕಾದ ಅಪಾಯವಿದೆ ಎಂದ ಅವರು, ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ಗೆ ಅಪಾರ ಬೇಡಿಕೆಯಿದ್ದು, ಇದು ವಿದ್ಯಾರ್ಥಿಗಳಲ್ಲಿ ಎಳವೆಯಿಂದಲೇ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಪೂರಕವಾಗಲಿದೆ. ಜತೆಗೆ ವಿವಿಧ ಬಗೆಯ ನ್ಯಾನೋ ತಂತ್ರಜ್ಞಾನ, ಟೊಬೋಟಿಕ್ ತಂತ್ರಜ್ಞಾನವನ್ನು ರೂಪಿಸುವ ಕೆಲಸ ವಿದ್ಯಾರ್ಥಿಗಳಿಗೆ ಸಿದ್ಧಿಸಲಿದೆ ಎಂದರು.
ಈಗಾಗಲೇ ಇದರ ಅಧ್ಯಯನಕ್ಕಾಗಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ 15 ಇಂಟರ್‍ಯಾಕ್ಟ್ ಸ್ಮಾರ್ಟ್ ಬೋಡ್‌ಗಳನ್ನು ಅಳವಡಿಸಲಾಗಿದ್ದು, ಒಂದು ಬೋರ್ಡಿನ ವೆಚ್ಚ 1.75 ಲಕ್ಷ ತಗಲಲಿದೆ. ಈ ಬೋರ್ಡ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಕಾರ್ಯನಿರ್ವಹಿಸಲಿದ್ದು, 3ಡಿ ತಂತ್ರಜ್ಞಾನ 4ಕೆ ರೆಸಲ್ಯೂಶನ್ ಜತೆಗೆ ಅತ್ಯಂತ ಆಧುನಿಕ ಇಂಟರ್‍ಯಾಕ್ಟಿವ್ ತಂತ್ರಜ್ಞಾನ ಹೊಂದಿದೆ ಎಂದು ತಿಳಿಸಿದರು. ಈ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದ ತಂಡ ಅಂಬಿಕಾ ಸಂಸ್ಥೆಯ ಶಿಕ್ಷಕರಿಗೆ ತರಬೇತಿ ನೀಡಿ, ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ತರಬೇತಿ ನಡೆಯಲಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಜಶ್ರೀ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ, ಪದವಿ ಕಾಲೇಜು ಪ್ರಿನ್ಸಿಪಾಲ್ ಗೇಣೇಶ್, ಸಿಬಿಎಸ್‌ಇ ಪ್ರಾಂಶುಪಾಲೆ ಮಾಲತಿ ಉಪಸ್ಥಿತರಿದ್ದರು.