ಲಸಿಕಾ ವಿಜ್ಞಾನದ ಪಿತಾಮಹ ಎಡ್ವರ್ಡ್ ಜೆನ್ನರ್

ಸಿಡುಬು ರೋಗದ ಲಸಿಕೆಯ ಮೂಲಕ ಲಕ್ಷಾಂತರ ಜನರ ಪ್ರಾಣ ಉಳಿಸಿದ ಮಹಾವೈದ್ಯ

ಇಂದು ವೈದ್ಯಕೀಯ ವಿಜ್ಞಾನವನ್ನು ಓದುತ್ತಿರುವ ಹಲವರನ್ನು ನಾನು ಮಾತಾಡುತ್ತೇನೆ. MBBS ಮಾಡಿ ಮುಂದೇನು ಮಾಡುತ್ತೀರಿ ಎನ್ನುವುದು ನನ್ನ ಸಾಮಾನ್ಯ ಪ್ರಶ್ನೆ. ಅದಕ್ಕೆ ಹೆಚ್ಚಿನವರು ಕೊಡುವ ಉತ್ತರ ನಾನು ಸರಕಾರಿ ಆಸ್ಪತ್ರೆಯ ಡಾಕ್ಟರ್ ಆಗಿ ಜನರ ಪ್ರಾಣ ಉಳಿಸುವ ಕೆಲಸ ಮಾಡುತ್ತೇನೆ ಎಂದು. ಇನ್ನೂ ಕೆಲವರು ನರ್ಸಿಂಗ್ ಹೋಮ್ ನಡೆಸುತ್ತೇನೆ ಅನ್ನುತ್ತಾರೆ. ಇನ್ನೂ ಕೆಲವರು ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕ ಆಗುತ್ತೇನೆ ಎಂದೆಲ್ಲ ಹೇಳುತ್ತಾರೆ. ನಾನು ಅವರು ಹೇಳಿದ ಎಲ್ಲ ಅಭಿಪ್ರಾಯಗಳನ್ನು ಗೌರವಿಸುತ್ತೇನೆ. ಆದರೆ ವೈದ್ಯಕೀಯ ವಿಜ್ಞಾನದಲ್ಲಿ ಸಂಶೋಧನೆ ಮಾಡಬೇಕು ಎಂದು ಯಾರೂ ಹೇಳುವುದಿಲ್ಲ. ಎರಡು ವರ್ಷದ ಹಿಂದೆ ಜಗತ್ತನ್ನು ಕೊರೊನ ಆವರಿಸಿದಾಗ ಅದಕ್ಕೆ ತುರ್ತು ಲಸಿಕೆ ಕಂಡು ಹಿಡಿಯುವ ಅಗತ್ಯ ಎಷ್ಟಿತ್ತು ಎಂದು ನಾವೆಲ್ಲರೂ ನೋಡಿದ್ದೇವೆ. ಅಂತಹ ಲಸಿಕಾ ವಿಜ್ಞಾನದ ಪಿತಾಮಹನ ಬಗ್ಗೆ ಇಂದು ನಾನು ಬರೆಯಬೇಕು.

ಎಡ್ವರ್ಡ್ ಜೆನ್ನರ್ ಎಂಬ ಅಸಾಮಾನ್ಯ ವೈದ್ಯ































 
 

ಇಂಗ್ಲೆಂಡನಲ್ಲಿ 1749ರಲ್ಲಿ ಜನಿಸಿದ ಎಡ್ವರ್ಡ್ ಜೆನ್ನರ್ ತಂದೆ ಒಬ್ಬ ಧರ್ಮಗುರು ಆಗಿದ್ದರು. ಹೆತ್ತವರ ಒಂಬತ್ತು ಮಕ್ಕಳಲ್ಲಿ ಇವರು ಎಂಟನೆಯವರು. ಮನೆಯವರಲ್ಲಿ ತೀವ್ರ ಬಡತನ ಇತ್ತು. ಆದರೆ ಜೆನ್ನರ್ ತುಂಬಾ ಬುದ್ಧಿವಂತ ವಿದ್ಯಾರ್ಥಿ ಆಗಿದ್ದರು. ಸ್ವಂತ ಆಸಕ್ತಿಯಿಂದ ಮೆಡಿಕಲ್ ಸಯನ್ಸ್ ಓದಿದ ಅವರಿಗೆ ಸಂಶೋಧನೆ ಮಾಡುವುದೇ ಕನಸು. ಪದವಿ ಪಡೆದು ಇಂಗ್ಲೆಂಡಿನ ಆಗಿನ ಪ್ರಮುಖ ಆಸ್ಪತೆಯಾಗಿದ್ದ ಸೈಂಟ್ ಜಾರ್ಜ್ ಆಸ್ಪತ್ರೆಯಲ್ಲಿ ವೈದ್ಯರಾಗಿ ನೇಮಕವಾದ ಜೆನ್ನರ್‌ಗೆ ಜಾನ್ ಹಂಟರ್ ಎಂಬ ಶ್ರೇಷ್ಠ ಮಾರ್ಗದರ್ಶಕರು ದೊರೆಯುತ್ತಾರೆ. ಕೆಲವೇ ದಿನಗಳಲ್ಲಿ ಪ್ರಸಿದ್ಧಿ ಪಡೆಯುತ್ತಾರೆ. ಇಂಗ್ಲೆಡಿನ ರಾಜ ಕಿಂಗ್ ಜಾರ್ಜ್ ಅವರ ಖಾಸಗಿ ವೈದ್ಯರಾಗಿ ನೇಮಕ ಪಡೆಯುತ್ತಾರೆ. ಅವರ ಸೇವಾಪರತೆಯನ್ನು ಮೆಚ್ಚಿ ಅರಸನು ಅವರನ್ನು ಬರ್ಕಲೆ ಎಂಬ ಪ್ರಾಂತ್ಯದ ಮೇಯರ್ ಆಗಿ ನೇಮಕ ಮಾಡುತ್ತಾರೆ.

ವಕ್ಕರಿಸಿತು ಸಿಡುಬು ಎಂಬ ಮಹಾಮಾರಿ

1780ರ ಸುಮಾರಿಗೆ ಇಡೀ ಇಂಗ್ಲೆಂಡ್ ಸಿಡುಬು ಎಂಬ ಮಹಾಮಾರಿಗೆ ತುತ್ತಾಯಿತು. ಆ ವೈರಸ್ ರೋಗ ಹರಡುತ್ತಿದ್ದ ವೇಗಕ್ಕೆ ಇಡೀ ಲಂಡನ್ ಮಹಾನಗರವೇ ಬೆಚ್ಚಿ ಬಿದ್ದಿತ್ತು. ಒಂದೆರಡು ವರ್ಷಗಳ ಒಳಗೆ ಸಿಡುಬು ರೋಗ ಜಗತ್ತಿನ ಶೇ.10 ಜನಸಂಖ್ಯೆಯನ್ನು ತಲುಪುವ ಅಪಾಯ ಇತ್ತು. ನಗರಗಳಲ್ಲಿ ಸಿಡುಬು ಇನ್ನೂ ವೇಗವಾಗಿ ಹರಡಿ ಶೇ.20 ಜನಸಂಖ್ಯೆಯನ್ನು ಆಕ್ರಮಿಸುವ ಅಪಾಯ ಇತ್ತು. ಆಗ ವೈದ್ಯಕೀಯ ವಿಜ್ಞಾನ ಅಷ್ಟೊಂದು ಮುಂದುವರಿದಿರಲಿಲ್ಲ. ವೈದ್ಯರಿಗೆ ಲಸಿಕೆ ಬಗ್ಗೆ ಗೊತ್ತೇ ಇರಲಿಲ್ಲ.


ಸಿಡುಬಿನ ಕಾರಣಕ್ಕೆ ಸಾಲು ಸಾಲು ನಗರಗಳು ಖಾಲಿ ಆದವು. ಹಳ್ಳಿಗಳು ತೀವ್ರವಾದ ಆರೋಗ್ಯ ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತು. ಆಸ್ಪತ್ರೆಯ ಎಲ್ಲ ವಾರ್ಡ್‌ಗಳು ಭರ್ತಿ ಆದವು. ಪ್ರತಿ ದಿನ ಹೆಣಗಳ ಸಾಲು ಉರುಳುತ್ತಿರುವ ಸಂದರ್ಭದಲ್ಲಿ ಎಲ್ಲ ತಜ್ಞ ವೈದ್ಯರು ಕೈಕಟ್ಟಿ, ಕಣ್ಣುಗಳನ್ನು ಮುಚ್ಚಿ ಕುಳಿತುಕೊಳ್ಳಬೇಕಾಯಿತು.

ಲಸಿಕೆ ಹುಡುಕಲು ಜೆನ್ನರ್ ತೀವ್ರ ಪ್ರಯತ್ನ

ಬಾಲ್ಯದಲ್ಲಿ ಒಮ್ಮೆ ಅವರಿಗೂ ಸಿಡುಬು ರೋಗ ಬಂದು ತೀವ್ರವಾಗಿ ಕಾಡಿತ್ತು. ಬದುಕುವ ಚಾನ್ಸ್ ಇಲ್ಲ ಎಂದು ವೈದ್ಯರು ಕೈಚೆಲ್ಲಿ ಆಗಿತ್ತು. ತಾನು ದೇವರ ಕೃಪೆಯಿಂದ ಬದುಕಿಬಂದೆ ಎಂದು ಜೆನ್ನರ್ ಹೇಳಿದ್ದಾರೆ.
ಅಂತಹ ಸಿಡುಬು ರೋಗಕ್ಕೆ ಲಸಿಕೆ ಹುಡುಕಬೇಕು ಎನ್ನುವ ತೀವ್ರವಾದ ಪ್ರಯತ್ನ ಅವರು ಆರಂಭ ಮಾಡಿದರು. ಆಗ ಮನುಷ್ಯರಿಗೆ ಸಿಡುಬು ಬಂದ ಹಾಗೆ ದನ, ಹಂದಿ, ಕುದುರೆಗಳಿಗೆ ಕೂಡ ಸಿಡುಬು ಬರುತ್ತಿತ್ತು. ಸಿಡುಬು ಬಂದ ದನಗಳ ಹಾಲು ಕರೆಯುವ ಹೆಂಗಸರಿಗೆ ಒಮ್ಮೆ ದನದ ಸಿಡುಬಿನ ಗುಳ್ಳೆಗಳು ಕಾಣಿಸಿಕೊಂಡು ನಿಧಾನವಾಗಿ ಗುಣವಾಗಿ ಬಿಡುತ್ತಿದ್ದವು. ಆದರೆ ಅವರಿಗೆ ಮಾನವರ ಸಿಡುಬು ಬರುತ್ತಲೇ ಇರಲಿಲ್ಲ. ಈ ಸೂಕ್ಷ್ಮ ವೀಕ್ಷಣೆ ಮುಂದೆ ಸಿಡುಬಿನ ಲಸಿಕೆ ಸಂಶೋಧನೆಗೆ ದಾರಿ ಆಯಿತು.
ದನದ ಸಿಡುಬಿನ ಗುಳ್ಳೆಯ ಕೀವು ತೆಗೆದು ಮನುಷ್ಯರಿಗೆ ಚುಚ್ಚಿದಾಗ ದೇಹದಲ್ಲಿ ಮಾನವ ಸಿಡುಬಿನ ವಿರುದ್ಧ ರಕ್ಷಣೆ ದೊರೆಯುವುದು ಖಾತ್ರಿಯಾಯಿತು. ನಿರಂತರ ಪ್ರಯೋಗಗಳು ದಶಕದ ಕಾಲ ನಡೆಯಿತು. ಆಗಿನ ಕಾಲದ ಆಧುನಿಕವಲ್ಲದ ಲ್ಯಾಬ್‌ಗಳು, ಆಸ್ಪತ್ರೆಗಳನ್ನು ಊಹೆ ಮಾಡಿ. ಅದರ ಜತೆಗೆ ಮೊದಲು ಲಸಿಕಾ ವಿಜ್ಞಾನ ಅಂಬೆಗಾಲು ಇಡುತ್ತಿತ್ತು. ಇಷ್ಟೆಲ್ಲ ಸವಾಲುಗಳ ನಡುವೆ ಜೆನ್ನರ್ ಅವರ ತೀವ್ರ ಪ್ರಯತ್ನದ ಫಲವಾಗಿ ಲಸಿಕೆ ಏನೋ ತಯಾರಾಯಿತು.

ಲಸಿಕೆ ಪ್ರಯೋಗ ಮಾಡುವುದು ಯಾರ ಮೇಲೆ?

ಇಲಿ ಮೊದಲಾದ ಪ್ರಾಣಿಗಳ ಮರಿಗಳ ಲಸಿಕೆ ಪ್ರಯೋಗ ಮಾಡಿ ಯಶಸ್ಸು ದೊರೆತಿತ್ತು. ಆದರೆ ಮನುಷ್ಯರ ಮೇಲೆ ಪ್ರಯೋಗ ಮಾಡದ ಹೊರತು ಆ ಲಸಿಕೆಯನ್ನು ಜಗತ್ತು ಒಪ್ಪುವುದು ಹೇಗೆ? ಇಬ್ಬರು ಹೆಂಗಸರು ಮುಂದೆ ಬಂದರಾದರೂ ಮುಂದೆ ಅಪನಂಬಿಕೆಯ ಮಾತಾಡಿದರು. ಪತ್ರಿಕಾ ಪ್ರಕಟಣೆ ಕೊಟ್ಟರೂ ಯಾರೂ ಮುಂದೆ ಬರಲಿಲ್ಲ. ಇಡೀ ಜಗತ್ತಿನಲ್ಲಿ ಆಗ ಸಿಡುಬು ರೋಗದ ಬಗ್ಗೆ ಭಯ ಇತ್ತು.
ಮುಂದೆ ಜೆನ್ನರನ ತೋಟದ ಮಾಲಿಯ ಮಗ ಎಂಟು ವರ್ಷದ ಹುಡುಗ ಜೇಮ್ಸ್ ಫಿಲಿಪ್ ಮುಂದೆ ಬಂದ. ಅವನ ಹೆತ್ತವರೂ ಒಪ್ಪಿದರು. ಅವನ ಎರಡೂ ಕೈಗಳಿಗೆ ಜೆನ್ನರ್ ತನ್ನ ಲಸಿಕೆಯನ್ನು ಚುಚ್ಚಿದರು. ಆತನನ್ನು ನಿರಂತರ ವೀಕ್ಷಣೆಯಲ್ಲಿ ಇರಿಸಿದರು. ಲಸಿಕೆ ನೂರಕ್ಕೆ ನೂರರಷ್ಟು ಫಲಿತಾಂಶ ನೀಡಿದಾಗ ಎಡ್ವರ್ಡ್ ಜೆನ್ನರ್ ಅವರ ಖುಷಿಗೆ ಪಾರವೇ ಇರಲಿಲ್ಲ.

1796 ಮೇ 14ರಂದು…

ಎಡ್ವರ್ಡ್ ಜೆನ್ನರ್ ಅಂದು ಆ ನಗರದ ಎಲ್ಲ ವೈದ್ಯರನ್ನು ಕರೆದು ಆ ಲಸಿಕೆಯ ಯಶಸ್ಸನ್ನು ಘೋಷಣೆ ಮಾಡಿದರು. ಇಡೀ ವೈದ್ಯಕೀಯ ಜಗತ್ತು ಜೆನ್ನರ್ ಅವರಿಗೆ ಜಯಕಾರ ಹಾಕಿತು. ಇಂಗ್ಲೆಂಡ್ ಸೇರಿದಂತೆ ಜಗತ್ತಿನ ಎಲ್ಲ ರಾಷ್ಟ್ರಗಳು ಬಹು ದೊಡ್ಡ ಪ್ರಮಾಣದಲ್ಲಿ ಜೆನ್ನರನ ಲಸಿಕೆಯನ್ನು ಒಪ್ಪಿಕೊಂಡು ಭಾರಿ ಪ್ರಮಾಣದಲ್ಲಿ ಉತ್ಪಾದನೆ ಮಾಡಿ ತಮ್ಮ ಜನರಿಗೆ ಲಸಿಕೆ ನೀಡಿದವು. ಎಲ್ಲ ಕಡೆಯೂ ಹರಡಿದ್ದ ಸಿಡುಬು ರೋಗ ನಿಧಾನವಾಗಿ ನಿಯಂತ್ರಣಕ್ಕೆ ಬಂತು. ಅದು ಜಗತ್ತಿನ ಮೊದಲ ಲಸಿಕೆ ಆಗಿತ್ತು. ಅದನ್ನು ಕಂಡು ಹಿಡಿಯುವ ಮೂಲಕ ಎಡ್ವರ್ಡ್ ಜೆನ್ನರ್ ವಿಶ್ವಮಟ್ಟದ ಕೀರ್ತಿ ಪಡೆದರು.

ನೆಪೋಲಿಯನ್ ತನ್ನ ಎಲ್ಲ ಸೈನಿಕರಿಗೆ ಸಿಡುಬು ಲಸಿಕೆ ಹಾಕಿಸಿದನು

ಮುಂದೆ ಫ್ರಾನ್ಸ್ ದೇಶದ ಅಸಾಮಾನ್ಯ ದಂಡ ನಾಯಕ ನೆಪೋಲಿಯನ್ ಬೊನಾಪಾರ್ಟೆ ಇಂಗ್ಲೆಂಡ್ ಮೇಲೆ ದಾಳಿ ನಡೆಸಿದನು. ಯುದ್ಧವು ಭೀಕರವಾಗಿ ನಡೆಯುತ್ತಿದ್ದಾಗ ನೆಪೋಲಿಯನ್ ಇದೇ ಜೆನ್ನರನನ್ನು ವಿನಂತಿ ಮಾಡಿ ತನ್ನ ಇಡೀ ಸೈನ್ಯಕ್ಕೆ ಸಿಡುಬು ಲಸಿಕೆ ಹಾಕಿಸಿದನು. ಆಗ ಮೆಚ್ಚಿಕೊಂಡ ನೆಪೋಲಿಯನ್ ಜೆನ್ನರನನ್ನು ಚಿನ್ನದ ಪದಕ ಕೊಟ್ಟು ಸನ್ಮಾನ ಮಾಡಿದನು. ಮುಂದೆ ಜೆನ್ನರನ ವಿನಂತಿಯ ಮೇರೆಗೆ ಯುದ್ಧ ನಿಂತಿತು ಮತ್ತು ನೆಪೋಲಿಯನನು ಇಂಗ್ಲೆಂಡಿನ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಿದನು. ಹೀಗೆ ಎರಡು ರಾಷ್ಟ್ರಗಳ ಮಿತ್ರತ್ವಕ್ಕೂ ಎಡ್ವರ್ಡ್ ಜೆನ್ನರ್ ಕಾರಣ ಆದರು.
ಇಡೀ ಜಗತ್ತಿಗೆ ಮಾನವೀಯ ಅಂತಃಕರಣದ ಪ್ರಯೋಜನ ಮಾಡಿಕೊಟ್ಟ ಎಡ್ವರ್ಡ್ ಜೆನ್ನರ್ 1823ರಲ್ಲಿ ನಿಧನರಾದರು. ಮುಂದೆ ವಿಶ್ವ ಆರೋಗ್ಯ ಸಂಸ್ಥೆ ಇದೇ ಲಸಿಕೆಯನ್ನು ಬಳಸಿಕೊಂಡು ಇಡೀ ಜಗತ್ತಿನಿಂದ ಸಿಡುಬು ಎಂಬ ಮಹಾಮಾರಿಯನ್ನು ಬೇರು ಸಹಿತ ಕಿತ್ತು ಬಿಸುಟಿತು. 1980ರಿಂದ ಜಗತ್ತಿನಲ್ಲಿ ಒಂದೇ ಒಂದು ಸಿಡುಬು ಪ್ರಕರಣ ವರದಿ ಆಗಿಲ್ಲ ಅನ್ನುವುದೇ ಎಡ್ವರ್ಡ್ ಜೆನ್ನರ್ ಅವರಿಗೆ ದೊರೆತ ಅತೀ ದೊಡ್ಡ ಪ್ರಶಸ್ತಿ!
✒️ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top