ರೋಬೋಟಿಗೂ ಇವರಿಗೂ ವ್ಯತ್ಯಾಸ ಇದೆಯಾ?
ಕಳೆದ ಮೂವತ್ತು ವರ್ಷಗಳಿಂದ ಸಾವಿರಾರು ಮಾನವೀಯ ಸಂಬಂಧಗಳ ಬಗ್ಗೆ ತರಬೇತಿ ಕಾರ್ಯಗಾರಗಳನ್ನು ನಡೆಸುತ್ತಾ ಬಂದ ನನಗೆ ತುಂಬ ಆಶ್ಚರ್ಯ ಮತ್ತು ಆಘಾತ ತಂದು ಕೊಟ್ಟ ಒಂದು ಸಂಬಂಧದ ಬಗ್ಗೆ ಇವತ್ತು ಬರೆಯಬೇಕು. ಇಂತಹವರು ನಮ್ಮ ಸುತ್ತ ಇದ್ದರೂ ಇರಬಹುದು.
ಒಂದು ನಿಜವಾದ ಉದಾಹರಣೆಯಿಂದ ಇಂದು ನನ್ನ ಲೇಖನ ಆರಂಭಿಸುವೆ.
ಆ ಕುಟುಂಬ ತುಂಬಾನೇ ವಿಚಿತ್ರ ಆಗಿತ್ತು
ನಮ್ಮ ಊರಿನಲ್ಲಿ ಮಧ್ಯಮ ವರ್ಗದ ಒಂದು ವಿಚಿತ್ರವಾದ ಕುಟುಂಬ ಇತ್ತು. ಆ ಕುಟುಂಬದಲ್ಲಿ ಮಾತುಕತೆ ನಿಂತು ಹೋಗಿ ಎಷ್ಟೋ ವರ್ಷ ಆಗಿತ್ತು. ಹೆಂಡತಿ ಏನಾದರೂ ಗಂಡನಿಗೆ ಹೇಳಬೇಕು ಅನ್ನಿಸಿದಾಗ ಮಕ್ಕಳ ಮೂಲಕ ಹೇಳುವ ಅಭ್ಯಾಸ ಮಾಡಿಕೊಂಡಿದ್ದರು. ಗಂಡ ಹೆಂಡತಿಯ ಜತೆಗೆ ಮಾತಾಡುವಾಗ ಗೋಡೆಗೆ ಮುಖ ಮಾಡಿ ಉತ್ತರಿಸುತ್ತಾನೆ. ಅವರ ಮನೆಯಲ್ಲಿ ಹಬ್ಬ, ಉತ್ಸವಗಳ ಆಚರಣೆಗಳು ಇಲ್ಲದೆ ಎಷ್ಟೋ ವರ್ಷಗಳೇ ಆಗಿ ಹೋಗಿದ್ದವು. ಅವರ ಮನೆಗೆ ನೆಂಟರು, ಆಪ್ತರು ಬರುವುದನ್ನು ಬಿಟ್ಟಿದ್ದರು.
ಅವರ ನಾಲ್ಕು ಮಕ್ಕಳು ಕೂಡ ಮನೆಯಲ್ಲಿ ಅಂತರ್ಮುಖಿಗಳು. ಹೊರಗೆ ಬಂದರೆ ಅವರೆಲ್ಲರೂ ನ್ಯಾಚುರಲ್. ಈ ಬಗ್ಗೆ ಗಂಡನನ್ನು ಮಾತನಾಡಿಸಿದಾಗ ಅವರ ಉತ್ತರ ನನಗೆ ಶಾಕ್ ನೀಡಿತ್ತು.
“ನನಗೆ ಅವಳು ಇಷ್ಟ ಇರಲಿಲ್ಲ. ನಮ್ಮ ಹೆತ್ತವರು ಬಲವಂತ ಆಗಿ ನಮಗೆ ಮದುವೆ ಮಾಡಿದ್ದರು. ನಾನು ಗಂಡನಾಗಿ ನನ್ನ ಕರ್ತವ್ಯ ಮಾತ್ರ ಮಾಡುತ್ತಿದ್ದೇನೆ”
ಅಂದ ಹಾಗೆ ಅವರ ಕರ್ತವ್ಯದ ಫಲವಾಗಿ ನಾಲ್ಕು ಮಕ್ಕಳು ಹುಟ್ಟಿದ್ದಾರೆ. ಆ ಮಕ್ಕಳೂ ಮನೆಯಲ್ಲಿ ಒಂದು ಮಾತು ಆಡುತ್ತಿರಲಿಲ್ಲ. ಇತ್ತೀಚೆಗೆ ಗಂಡ ತೀರಿಕೊಂಡರು. ಮಕ್ಕಳು, ಹೆಂಡತಿ ಯಾರೂ ಕಣ್ಣೀರು ಹಾಕಲೇ ಇಲ್ಲ. ಮಕ್ಕಳು ತಮ್ಮ ತಂದೆಯ ಉತ್ತರಕ್ರಿಯೆ ಮಾಡಿ ತಮ್ಮ ಕರ್ತವ್ಯ ಮುಗಿಸಿದರು.
ಇದು ನಮಗೆಲ್ಲಾ ಬಹಳ ಎಕ್ಸ್‌ಟ್ರೀಮ್ ಆದ ಕುಟುಂಬ ಅನ್ನಿಸಬಹುದು. ಆದರೆ ನಮ್ಮ ಸುತ್ತ ಹೀಗೆ ಭಾವನೆಗಳೇ ಇಲ್ಲದೆ ಯಾಂತ್ರಿಕ ಆಗಿ ಬದುಕುವವರು ತುಂಬ ಮಂದಿ ಇದ್ದಾರೆ.
ಯಾಂತ್ರಿಕವಾಗಿ ಬದುಕು
ಅವರ ಜೀವನದಲ್ಲಿ ಸಂತಸ, ದುಃಖ, ಸಂಭ್ರಮ ಮೊದಲಾದ ಯಾವ ಭಾವನೆ ಇರುವುದಿಲ್ಲ. ಯಾರಿಂದಲಾದರೂ ಒಂದು ಉಪಕಾರ ಆಯಿತು ಅಂತಾದರೆ ಒಂದು ಥ್ಯಾಂಕ್ಸ್ ಬಿಸಾಡಿ ಅವರು ತಮ್ಮ ಕರ್ತವ್ಯ ಮುಗಿಸುತ್ತಾರೆ. ತಮ್ಮ ಗೆಳೆಯರು, ಓರಗೆಯವರು, ಒಡಹುಟ್ಟಿದವರು, ಹೆಂಡತಿ, ಮಕ್ಕಳು ಎಲ್ಲರ ಬಗ್ಗೆಯೂ ಅವರದ್ದು ನಿರ್ಲಿಪ್ತ ಭಾವ. ಬೇರೆ ಬೇರೆ ಸಂದರ್ಭದಲ್ಲಿ ಇಂತಹ ಜನರು ಆಡುವ ಮಾತುಗಳನ್ನು ಕೇಳಿ,
ನೂರು ಮಂದಿ – ನೂರು ಮಾತು
1) ಶಿಕ್ಷಕಿ – ನಾನು ನನ್ನ ಪಾಠ ಮುಗಿಸಿದ್ದೇನೆ. ಇನ್ನು ಏನಿದ್ದರೂ ಮಕ್ಕಳು ಓದಿಕೊಳ್ಳಬೇಕು.
2) ಪೋಷಕರು – ಅಷ್ಟು ಖರ್ಚು ಮಾಡಿ ಫೀಸ್ ತುಂಬಿಸಿ ಮಗನನ್ನು ದೊಡ್ಡ ಶಾಲೆಗೆ ಸೇರಿಸಿದ್ದೇವೆ. ಹಾಗಿರುವಾಗ ಮಾರ್ಕ್ಸ್ ತೆಗೆಯಲು ಏನು ಅಡ್ಡಿ?
3) ಗಂಡ ಹೆಂಡತಿಗೆ – ನಾನು ದುಡಿದು ಸುಸ್ತಾಗಿ ಮನೆಯ ಹೊಣೆಯನ್ನು ಹೊತ್ತಿಲ್ಲವಾ?
ನಿನಗೆ ಮಕ್ಕಳ ಜವಾಬ್ದಾರಿ ಹೊರಲು ಏನು ಅಡ್ಡಿ?
4) ಹೆಂಡತಿ ಗಂಡನಿಗೆ – ನಾನು ನನ್ನ ತವರು ಮನೆ, ಅಪ್ಪ ಅಮ್ಮ ಎಲ್ಲ ಬಿಟ್ಟು ನಿಮ್ಮನ್ನು ನಂಬಿ ನಿಮ್ಮ ಹಿಂದೆ ಬಂದಿಲ್ಲವೇ? ನೀವು ತಾನೇ ನನ್ನನ್ನು ನೋಡಿಕೊಳ್ಳಬೇಕು?
5) ಸೋದರಿಯರು – ಹಿರಿಯಣ್ಣ ಆಗಿ ಹುಟ್ಟಿದ ಮೇಲೆ ತಂಗಿಯರ ಮದುವೆ ಮಾಡಬೇಕು ಅಲ್ವಾ? ನಾವೇನು ಸಿಕ್ಕವರ ಜತೆಗೆ ಓಡಿ ಹೋಗುವುದಾ?
6) ಬೆಳೆದ ಮಕ್ಕಳು – ಎಲ್ಲರ ಹಾಗೆ ನಮ್ಮ ಅಪ್ಪ, ಅಮ್ಮ ನಮಗಾಗಿ ಏನೂ ಆಸ್ತಿ ಮಾಡಿಲ್ಲ. ಮತ್ತೆ ನಮ್ಮನ್ನು ಯಾಕೆ ಹುಟ್ಟಿಸಬೇಕಿತ್ತು?
7) ಗೆಳೆಯ – ಅವಳು ನನಗೆ ಒಂದು ಗಿಫ್ಟ್ ತಂದು ಕೊಟ್ಟಳು. ಒಂದು ಥ್ಯಾಂಕ್ಸ್ ಬಿಸಾಡಿ ಕಳುಹಿಸಿದೆ.
8) ವಿದ್ಯಾರ್ಥಿ – ನಮ್ಮ ಶಿಕ್ಷಕರು ಏನು ಧರ್ಮಕ್ಕೆ ಪಾಠ ಮಾಡ್ತಾರ? ಅವರಿಗೆ ಸಂಬಳ ಕೊಟ್ಟಿಲ್ಲವ? ಮತ್ತೆ ಯಾಕೆ ನಾವು ಅವರಿಗೆ ಋಣಿ ಆಗಿರಬೇಕು?
9) ಹದಿಹರೆಯದ ಹುಡುಗ/ ಹುಡುಗಿ – ಅಪ್ಪ ಅಮ್ಮ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಲ್ವಾ? ಅವರ ಕಷ್ಟ ಹೇಳುತ್ತಾ ಕೂತರೆ ನಾವು ಕೇಳುತ್ತಾ ಇರಬೇಕಾ?
10) ವೈದ್ಯ – ನಾನು ನನ್ನ ಡ್ಯೂಟಿ ಮಾಡ್ತಾ ಇದ್ದೇನೆ. ಬದುಕಿಸುವುದು ನಮ್ಮ ಕೈಯ್ಯಲ್ಲಿ ಇಲ್ಲ.
11) ಅವನು – ಸಣ್ಣ ಸಣ್ಣ ಕಾರಣಕ್ಕೆ ಅವನು ಅಳೋದು ಯಾಕೆ? ಅವನು ಗಂಡು ಹುಡುಗ ತಾನೇ?
12) ಅವಳು – ನಾವು ಹೆಣ್ಣು ಮಕ್ಕಳು ಸ್ಟ್ರಾಂಗ್ ಆಗಬೇಕು. ಅಳೋ ಸೀನೇ ಇಲ್ಲ!
13) ನಾವು – ಆಚೆಯ ಮನೆಯ ಹುಡುಗ ಸೆಕೆಂಡ್ ಕ್ಲಾಸ್ ಪಾಸ್ ಅಂತೆ. ಅದಕ್ಕೆಲ್ಲ ಅವರ ಸಂಭ್ರಮ ಜಾಸ್ತಿ ಆಯ್ತಲ್ಲವಾ?
ಇವರಿಗೆ ಇಡೀ ವರ್ಷವೂ ಸೂತಕದ ದಿನಗಳು
ಇಂತಹ ವ್ಯಕ್ತಿಗಳು ನಿತ್ಯ ಸೂತಕದ ಮನಸ್ಥಿತಿಯವರು. ಜೀವನದ ಸಣ್ಣ ಸಣ್ಣ ಖುಷಿ ಅವರು ಎಂಜಾಯ್ ಮಾಡೋದೇ ಇಲ್ಲ. ದೊಡ್ಡ ಸಾಧನೆ ಅವರು ಮಾಡುವುದೂ ಇಲ್ಲ.
ಇಂಥ ಉಸಿರುಕಟ್ಟುವ ಮೈಂಡ್‌ಸೆಟ್ ವ್ಯಕ್ತಿಗಳು ನಮ್ಮ ಸುತ್ತ ಮುತ್ತ ಇದ್ದರೆ ನಾವು ಬದುಕುವುದು ಹೇಗೆ? ಇವರು ತಮ್ಮ ಕರ್ತವ್ಯಗಳನ್ನು ಸರಿಯಾಗಿ ಮಾಡುತ್ತಾರೊ ಇಲ್ಲವೋ ಗೊತ್ತಿಲ್ಲ, ಆದರೆ ಬೇರೆಯವರ ಕರ್ತವ್ಯಗಳ ಬಗ್ಗೆ ಪದೇ ಪದೆ ನೆನಪಿಸುತ್ತಾರೆ.
ರೋಬೋಟಿಗೂ ಇವರಿಗೂ ಏನಾದರೂ ವ್ಯತ್ಯಾಸ ಇದೆಯಾ?
ನಿರ್ಭಾವುಕರಾದ, ನೂರಕ್ಕೆ ನೂರರಷ್ಟು ನಿರ್ಲಿಪ್ತರಾದ, ಜೀವನ ಇಡೀ ಕರ್ತವ್ಯ ಎಂದು ಬಾಯಿ ಬಡಿದುಕೊಳ್ಳುವ, ಜೀವನದ ಸಣ್ಣ ಸಣ್ಣ ಖುಷಿಗಳನ್ನು ಸೆಲೆಬ್ರೇಟ್ ಮಾಡಲೂ ಕಂಜೂಸ್ ಮಾಡುವ, ನಕ್ಕರೆ ಮುತ್ತು ಉದುರಿ ಹೋದೀತು ಎಂದು ಭಾವಿಸುವ, ಸದಾ ಅಂತರ್ಮುಖಿಗಳಾಗಿ ಒಳಗೊಳಗೇ ಸುಖಿಸುವ, ಮಕ್ಕಳಿಗೆ ಸಲಿಗೆ ಕೊಟ್ಟರೆ ತಲೆಯ ಮೇಲೆ ಬಂದು ಕೂರುತ್ತಾರೆ ಎಂದು ಯೋಚನೆ ಮಾಡುವ ಹೆತ್ತವರು, ಮಕ್ಕಳನ್ನು ಹತ್ತಿರ ಕರೆದು ಮಾತಾಡಿಸಿದರೆ ನಿಯಂತ್ರಣ ತಪ್ಪುತ್ತಾರೆ ಎಂದು ಭಾವಿಸುವ ಶಿಕ್ಷಕರು…ಇಂತಹವರು ನಮ್ಮ ನಡುವೆ ಖಂಡಿತವಾಗಿಯೂ ಇದ್ದಾರೆ.
ಇಂತಹವರಿಗೂ ರೋಬೋಟಿಗೂ ಏನಾದರೂ ವ್ಯತ್ಯಾಸ ಇದೆಯಾ?
✒️ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.