ಪುತ್ತೂರು: ಕುಕ್ಕೆ ಸುಬ್ರಹ್ಮಣ್ಯಕ್ಕೆ ಸೇರಿದ ಬೊಳುವಾರಿನಲ್ಲಿ ಜಾಗವನ್ನು ಮರಳಿ ಪಡೆಯುವ ಹಿನ್ನೆಲೆಯಲ್ಲಿ ಸಿದ್ಧತೆಗಳು ನಡೆಯುತ್ತಿರುವಂತೆ ಶಾಸಕ ಸಂಜೀವ ಮಠಂದೂರು ಅವರು ಶನಿವಾರ ಭೇಟಿ ನೀಡಿದರು.
ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಕಾರಿಂಜದಲ್ಲಿ ನಡೆದ ಹೋರಾಟದ ಬಳಿಕ, ಶ್ರೀ ಕಾರಿಂಜೇಶ್ವರ ಸನ್ನಿಧಿಯ ಎರಡು ಕಿಲೋ ಮೀಟರ್ ಆಸುಪಾಸಿನಲ್ಲಿ ಗಣಿಗಾರಿಕೆ ನಡೆಸದಂತೆ ಸರ್ಕಾರ ಆದೇಶ ಹೊರಡಿಸಿತ್ತು. ಈ ಯಶಸ್ವಿ ಹೋರಾಟದ ಬಳಿಕ ಹಿಂದೂ ಜಾಗರಣ ವೇದಿಕೆ, ಪುತ್ತೂರಿನ ಬೊಳುವಾರಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗವನ್ನು ಮರಳಿ ಪಡೆಯುವ ಹೋರಾಟಕ್ಕೆ ಕೈ ಹಾಕಿದೆ.
ಈಗಾಗಲೇ ಸ್ವಚ್ಛತಾ ಕಾರ್ಯ ನಡೆಸಿದ್ದು, ಮಾರ್ಚ್ 24ರಂದು ಧಾರ್ಮಿಕ ಸಮಾರಂಭ ನಡೆಯಲಿದೆ. ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ಶಾಸಕ ಸಂಜೀವ ಮಠಂದೂರು ಸ್ಥಳಕ್ಕೆ ಭೇಟಿ ನೀಡಿ, ಹಿಂದೂ ಜಾಗರಣ ವೇದಿಕೆಯ ಮುಖಂಡರಿಗೆ, ಕಾರ್ಯಕರ್ತರ ಜೊತೆ ತಾನಿರುವುದಾಗಿ ತಿಳಿಸಿದ್ದಾರೆ. ಹೋರಾಟವನ್ನು ಯಶಸ್ವಿಯಾಗಿ ಪೂರೈಸಲು ತನ್ನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಪ್ರಮುಖರಾದ ಅಜಿತ್ ರೈ ಹೊಸಮನೆ, ದಿನೇಶ್ ಪಂಜಿಗ, ಅವಿನಾಶ್ ಪುರುಷರಕಟ್ಟೆ ,ಮನೀಶ್ ಕುಲಾಲ್, ಪುಷ್ಪರಾಜ್ ಸವಣೂರ, ಗಿತ್ತೇಶ್, ಅವಿನಾಶ್ ಅಭಿ ಪುರುಷರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.