ಪುತ್ತೂರು: ಪುತ್ತೂರು ಕ್ಷೇತ್ರದ ನೀರಿನ ಅಗತ್ಯತೆಯನ್ನು ಪೂರೈಸುವ ನಿಟ್ಟಿನಲ್ಲಿ ಸಮಗ್ರ ಯೋಜನೆಯನ್ನು ಜಾರಿಗೆ ತಂದು ನೀರಿನ ಕೊರತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. 2021ರ ಜನಗಣತಿ ಆಧಾರದಲ್ಲಿ ಜನಸಂಖ್ಯೆ 70 ಸಾವಿರದಿಂದ ಒಂದು ಲಕ್ಷದ ವರೆಗೆ ತಲುಪಿದಾಗ ಪುತ್ತೂರಿಗೆ ಎಷ್ಟು ನೀರು ಬೇಕಾದರೂ ಪೂರೈಸುವ ಕೆಲಸ ಆಗಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ಬಿಜೆಪಿ ವತಿಯಿಂದ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನದದ ನಿಟ್ಟಿನಲ್ಲಿ ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾದ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರದ ಹಲವು ಬೇಡಿಕೆಗಳಂತೆ ಸರ್ಕಾರಿ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸೌಕರ್ಯ ಉತ್ತಮಗೊಳಿಸಲಾಗುವುದು. ಈ ಕೇಂದ್ರಗಳಿಗೆ ನಿಯಮಿತವಾಗಿ ಉಚಿತ ಔಷದಿ ಕೊಡಿಸುವ ಕೆಲಸ ಈಗಾಗಲೇ ಆಗಿದೆ. ಒಟ್ಟಾರೆಯಾಗಿ ಪ್ರತಿ ವರ್ಷ ನಮ್ಮ ಮ್ಯಾನಿಫೆಸ್ಟೋರ್ ಬಗ್ಗೆ ನಾವು ಅವಲೋಕನ ಮಾಡಬೇಕಾದ ಅಗತ್ಯವಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ನಗರ ಸಭಾ ಅಧ್ಯಕ್ಷ ಜೀವಂದರ್ ಜೈನ್, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನಿವಾಸ್ ರಾವ್, ಪ್ರಭಾರಿ ಗೋಪಾಲಕೃಷ್ಣ ಹೆರಳೆ ಉಪಸ್ಥಿತರಿದ್ದರು. ನಗರಸಭೆ ಸದಸ್ಯೆ ಗೌರಿ ಬನ್ನೂರು ಪ್ರಾರ್ಥಿಸಿದರು. ಚಂದ್ರಶೇಖರ ರಾವ್ ಬಪ್ಪಳಿಗೆ ಸ್ವಾಗತಿಸಿದರು. ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.
ಸಾರ್ವಜನಿಕರ ಅಭಿಪ್ರಾಯ :
ಸಾರ್ವಜನಿಕ ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ :ಸುರೇಶ್ ಪುತ್ತೂರಾಯ
ಸುರೇಶ್ ಪುತ್ತೂರಾಯ ಜನತೆಗೆ ಉತ್ತಮ ಆರೋಗ್ಯ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು. ಒಳ್ಳೆಯ ಶಿಕ್ಷಣದ ವ್ಯವಸ್ಥೆ ಆಗಬೇಕು
ಬಡವರಿಗೆ ಮನೆ ಕಟ್ಟುವ ವ್ಯವಸ್ಥೆಯಲ್ಲಿ ಸರಳೀಕರಣ ತರಬೇಕು : ವಾಮನ್‌ಪೈ
ಮನೆ ನಿರ್ಮಿಸುವ ಸಂದರ್ಭದಲ್ಲಿ ನಿಯಮಗಳ ಅನುಸರ ಬಡವರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಸರಳೀಕರಣಗೊಳಿಸಬೇಕು. ಸರಕಾರಿ ಆಸ್ಪತ್ರೆ ಮೇಲ್ದರ್ಜೆ ಸಹಿತ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಡ್ಯಾಮ್ ನಿರ್ಮಿಸಬೇಕು. ಅಲ್ಲದೆ ಬಡವರಿಗೆ ಉಚಿತ ವಿದ್ಯಾಭ್ಯಾಸ, ಆರೋಗ್ಯ ನೀಡುವ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಬೇಕು.
ವಿಮಾ ಸೌಲಭ್ಯ ಏರಿಕೆಯಾಗಬೇಕು : ರವೀಂದ್ರನ್
ಈಗಾಗಲೇ ನ್ಯಾಷನಲ್ ಬ್ಯಾಂಕ್, ಕೋಅಪರೇಟಿವ್ ಬ್ಯಾಂಕ್‌ಗಳಲ್ಲಿ ಡೆಪೋಸಿಟ್ ಇಡುವಾಗ ಐದು ಲಕ್ಷ ಇರುವ ವಿಮಾ ಸೌಲಭ್ಯವನ್ನು ಕನಿಷ್ಠ ಹತ್ತು ಲಕ್ಷಕ್ಕೆ ಏರಿಸಬೇಕು.
ಉಚಿತ ಆಶ್ವಾಸನೆಗೆ ಕಡಿವಾಣ ಹಾಕಬೇಕು : ಉಲ್ಲಾಸ ಪೈ
ಈಗಾಗಲೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಉಚಿತ ಘೋಷಣೆಗಳನ್ನು ಮಾಡುವ ಮೂಲಕ ಮತದಾರರನ್ನು ದಾರಿತಪ್ಪಿಸುವ ಕೆಲಸಕ್ಕೆ ಇಳಿದಿದ್ದಾರೆ. ಅದಕ್ಕೆ ಕಡಿವಾಣ ಹಾಕಬೇಕು. ಈಗಾಗಲೇ ೨೫ ಕೆ.ಜಿ. ಅಕ್ಕಿ ಖರೀದಿಗೆ ಜಿಎಸ್‌ಟಿ ಹಾಕಲಾಗುತ್ತಿದೆ. ಅದನ್ನು ತೆಗೆದು ಹಾಕಬೇಕು. ಜತೆಗೆ ವಿದ್ಯಾಭ್ಯಾಸ ಸಾಲ ನೀಡುವ ಘೋಷಣೆಗಳನ್ನು ನೀಡಲಾಗಿದ್ದು, ಬಡವರು ಬ್ಯಾಂಕ್‌ಗೆ ತೆರಳಿದರೆ ಅಲ್ಲಿಯ ನಿಯಮಾವಳಿಯಿಂದ ಸಾಲ ವಮಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯದಲ್ಲಿ ಕರ್ನಾಟಕದವರನ್ನೇ ಬ್ಯಾಂಕ್ ಸಿಬ್ಬಂದಿಯಾಗಿ ನೇಮಿಸಲು ಕ್ರಮ ಕೈಗೊಳ್ಳಬೇಕು.
ಕಾರ್ಮಿಕ ಇಲಾಖೆಗೆ ಸ್ವಂತ ಕಟ್ಟಡ : ದಿನೇಶ್ ಭಟ್
ಕಾರ್ಮಿಕರ ಇಲಾಖೆಗೆ ಸ್ವಂತ ಕಟ್ಟಡ ಇರುವುದಿಲ್ಲ. ಈ ನಿಟ್ಟಿನಲ್ಲಿ ಸ್ವಂತ ಕಟ್ಟಡದ ನಿರ್ಮಾಣ ಆಗಲು ಕ್ರಮ ಕೈಗೊಳ್ಳಬೇಕು. ಖಾತೆ ಸಹಿತ ಇನ್ನಿತರ ಕಡತಗಳು ನಾಗರಿಕರಿಗೆ ಆನ್‌ಲೈನ್‌ನಲ್ಲೇ ಸಿಗುವಂತೆ ವ್ಯವಸ್ಥೆ ಮಾಡಬೇಕು. ಈ ಮೂಲಕ ಜನಸ್ನೇಹಿಯಾಗಿ ಮಾಡಲು ಕ್ರಮ ಕೈಗೊಳ್ಳಬೇಕು.
ಪುತ್ತೂರಿಗೆ ವರ್ತುಲ ರಸ್ತೆ : ರವಿನಾರಾಯಣ
ಪುತ್ತೂರಿಗೆ ಬೈಪಾಸ್ ಇದ್ದ ಹಾಗೆ ವರ್ತುಲ ರಸ್ತೆಗಳನ್ನು ನಿರ್ಮಿಸಬೇಕು. ಈಗಾಗಲೇ ಬೈಪಾಸ್ ರಸ್ತೆಗಳನ್ನು ಸಂಪರ್ಕಿಸುವ ಹಲವು ರಸ್ತೆಗಳಿದ್ದು, ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಆಟೋರಿಕ್ಷಾವನ್ನು ಆಶ್ರಯಿಸಬೇಕಾಗಿದೆ. ಈ ನಿಟ್ಟಿನಲ್ಲಿ ವರ್ತುಲ ರಸ್ತೆ ಸೇರಿದಂತೆ ಬೈಪಾಸ್ ರಸ್ತೆಯಲ್ಲಿ ಸಾರಿಗೆ ವ್ಯವಸ್ಥೆಯನ್ನು ಮಾಡಬೇಕು. ಎಪಿಎಂಸಿ ಕಾಯ್ದೆಯನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನ ಆಗುವಂತೆ ಮಾಡಬೇಕು.
ಬಿಜೆಪಿ ಯೋಜನೆ ಜನಸಾಮಾನ್ಯರಿಗೆ ತಲುಪಬೇಕು : ಡಾ.ಪ್ರಸನ್ನ
ಬಿಜೆಪಿ ಸರಕಾರದ ಯೋಜನೆಗಳು ಜನಸಾಮಾನ್ಯರನ್ನು ತಲುಪುವಲ್ಲಿ ವಿಫಲವಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ಹಾಕುವುದಕ್ಕೆ ಕಡಿವಾಣ ಹಾಕಬೇಕು.
ವಾಣಿಜ್ಯ ಬೆಳೆಗಳ ದರ ಪರಿಷ್ಕರಣೆಯಾಗಿ ಬೆಂಬಲ ಬೆಲೆ : ಪ್ರಕಾಶ್ ರೈ ಕೈಕಾರ
ಅಡಕೆ, ತೆಂಗು, ಕಾಳುಮೆಣಸು ಈ ಬೆಳೆಗಳ ದರ ಪರಿಷ್ಕರಣೆ ಮಾಡಿ ಬೆಂಬಲ ಬೆಲೆ ನಿಗದಿಯಾಗಬೇಕು. ಈಗಾಗಲೇ ಇರುವ ಕೆರೆಯನ್ನು ಅಭಿವೃದ್ಧಿಪಡಿಸಬೇಕು.
ಪುತ್ತೂರಿನಲ್ಲಿ ಐಟಿ ಪಾರ್ಕ್ ನಿರ್ಮಾಣ ಆಗಬೇಕು : ಕೃಷ್ಣಮೋಹನ್
ಪುತ್ತೂರು ಭಾಗದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಐಟಿ ಫೀಲ್ಡ್ನವರಿದ್ದಾರೆ. ಅವರುಗೆ ಪುತ್ತೂರಿನಲ್ಲಿ ಉದ್ಯೋಗಾವಕಾಶ ನೀಡಲು ಪುತ್ತೂರಿನ ವಿವೇಕಾನಂದ ಕಾಲೇಜನ್ನು ಮುಂದಿಟ್ಟುಕೊಂಡು ಐಟಿ ಪಾರ್ಕ್ ನಿರ್ಮಾಣ ಮಾಡಲು ಕ್ರಮಕೈಗೊಳ್ಳಬೇಕು. ವರ್ತುಲ ರಸ್ತೆ ನಿರ್ಮಾಣದಿಂದ ಉದ್ಯೋಗಾವಕಾಶ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ವರ್ತುಲ ರಸ್ತೆಗಳನ್ನು ನಿರ್ಮಿಸಬೇಕು.
ಪತ್ರಕರ್ತರ ಭವಿಷ್ಯಕ್ಕೆ ಯೋಜನೆ ತರಬೇಕು : ಸಂಶುದ್ಧೀನ್ ಸಂಪ್ಯ
ಪುತ್ತೂರಿನ ಬಹುತೇಕ ಪತ್ರಕರ್ತರ ಭವಿಷ್ಯಕ್ಕೆ ಭದ್ರತೆಯಿಲ್ಲ. ಈ ನಿಟ್ಟಿನಲ್ಲಿ ಭವಿಷು ರೂಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಈ ಬಾರಿಯ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಬೇಕು.