ಬೆಂಗಳೂರು: ಕನ್ನಡ ಪತ್ರಿಕೋದ್ಯಮದ ಹಿರಿಯ ಪತ್ರಕರ್ತ ಪ್ರಸಾದ್ ಹೆಗಡೆ (45)ನಿಧನರಾಗಿದ್ದಾರೆ. ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಚವತ್ತಿ ಸಮೀಪದವರಾಗಿದ್ದರು.
ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಪ್ರಸಾದ್ ಹೆಗಡೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ 4:30ಕ್ಕೆ ಕೊನೆಯುಸಿರೆಳೆದಿದ್ದಾರೆ.
ಹಲವು ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದ ಪ್ರಸಾದ್ ಹೆಗಡೆ, ಮಾಧ್ಯಮ ಲೋಕದಲ್ಲಿ ಅಪಾರ ಅನುಭವ ಹೊಂದಿದ್ದರು. ಸದ್ಯ ರಾಜ್ ನ್ಯೂಸ್ ನಲ್ಲಿ ಔಟ್ ಪುಟ್ ಚೀಫ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮುಗಿಸಿದ್ದ ಪ್ರಸಾದ್, ರಂಗಭೂಮಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಮೈಸೂರು ದಿಗಂತ ಪತ್ರಿಕೆಯಲ್ಲಿ ಪತ್ರಕರ್ತ ವೃತ್ತಿಯನ್ನು ಆರಂಭಿಸಿದ ಪ್ರಸಾದ್, ಬಳಿಕ ಹಲೋ ಮೈಸೂರು ಮತ್ತು ಮೈಸೂರು ಮಿತ್ರ ಪತ್ರಿಕೆಯಲ್ಲಿ ಕೆಲ ಮಾಡಿದ್ದಾರೆ. ನಂತರ ರಾಜಧಾನಿ ಬೆಂಗಳೂರಿಗೆ ಬಂದು ದೃಶ್ಯ ಮಾಧ್ಯಮದಲ್ಲಿ ತನ್ನ ವೃತ್ತಿಯನ್ನು ಮುಂದುವರಿಸಿದರು, ಕಸ್ತೂರಿ ಟಿವಿಯಲ್ಲಿ ರಾಜಕೀಯ ವರದಿಗಾರರಾಗಿ, ನಿರೂಪಕರಾಗಿ, ರಾಜಕೀಯ ವಿಶ್ಲೇಷಕರಾಗಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು.