ದೆಹಲಿ : ಕಾಶ್ಮೀರದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ನಿಮ್ಮನ್ನು ಸಂಪರ್ಕಿಸಿದ ಮಹಿಳೆಯರ ವಿವರಗಳನ್ನು ನೀಡಿ, ನಾವು ಅವರಿಗೆ ಭದ್ರತೆ ನೀಡುತ್ತೇವೆ ಎಂದು ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ದಿಲ್ಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಶ್ರೀನಗರದಲ್ಲಿ ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ, ಒಂದು ನಿರ್ದಿಷ್ಟ ಪ್ರಕರಣದಲ್ಲಿ ಒಬ್ಬ ಹುಡುಗಿ ತಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ಅಳಲು ತೋಡಿಕೊಂಡಳು. ಆ ಸಂದರ್ಭದಲ್ಲಿ ನಾನು ಪೊಲೀಸರಿಗೆ ಕರೆ ಮಾಡಬೇಕೇ ಎಂದು ಪ್ರಶ್ನಿಸಿದೆ. ಆದರೆ ಪೊಲೀಸರಿಗೆ ಕರೆ ಮಾಡಬೇಡಿ. ಅದರಿಂದ ನನಗೆ ಅವಮಾನವಾಗುತ್ತದೆ ಎಂದು ಹೇಳಿರುವುದಾಗಿ ತಿಳಿಸಿದ್ದರು.
ಪೊಲೀಸರು ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನಾವಳಿಗಳ ಪಟ್ಟಿಯನ್ನು ರಾಹುಲ್ ಗಾಂಧಿಗೆ ಕಳುಹಿಸಿದ್ದಾರೆ. ಈ ನೋಟಿಸ್‌ಗೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ. ಈ ವಿಚಾರದಲ್ಲಿ ಬಿಜೆಪಿ ಕೊಳಕು ರಾಜಕಾರಣ ಮಾಡುತ್ತಿದೆ ಎಂದು ಪಕ್ಷ ಆರೋಪಿಸಿದೆ.
ಇದೇ ವೇಳೆ ಲಂಡನ್‌ನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಗದ್ದಲ ಎದ್ದಿದೆ. ಅವರ ಕ್ಷಮೆಯಾಚನೆಗೆ ಬಿಜೆಪಿ ಹಠ ಹಿಡಿದಿದೆ. ಈ ಹೇಳಿಕೆಗೆ ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲ ಎದ್ದಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿ, ಬೆಳಗ್ಗೆ ನಾನು ಸಂಸತ್ತಿಗೆ ಹೋಗಿ ಲೋಕಸಭೆಯ ಸ್ಪೀಕರ್ ಜತೆ ಮಾತನಾಡಲು ಬಯಸಿದ್ದೆ, ಆದರೆ ನಾನು ತಲುಪಿದ 1 ನಿಮಿಷದಲ್ಲಿ ಸದನವನ್ನು ಮುಂದೂಡಲಾಯಿತು ಎಂದು ಹೇಳಿದ್ದಾರೆ.